ಸುಳ್ಯ: ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮಯೂರಿ ಕಲಾಶಾಲೆಯ ವತಿಯಿಂದ ಬೇಸಿಗೆ ಶಿಬಿರ ಏಪ್ರಿಲ್ 11 ರಿಂದ 18 ರವರೆಗೆ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ನಡೆಯಲಿದೆ. ಏಪ್ರಿಲ್ 22 ರಿಂದ 30 ರ ವರೆಗೆ ಮಡಿಕೇರಿಯ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಶಿಬಿರ ಆಯೀಜಿಸಲಾಗಿದೆ.
ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ರಂಗಮಯೂರಿ ಕಲಾ ಶಾಲೆಯು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದು ಮಕ್ಕಳಿಗೆ
ವೈವಿಧ್ಯಮಯ ಕಲೆಗಳ ಕಲಿಸುವಿಕೆಯ ರಸದೌತಣವನ್ನು ಉಣ ಬಡಿಸಲಿದೆ. ಮಕ್ಕಳ ಬಾಲ್ಯದ ಕನಸಿಗೆ ಬಣ್ಣ ಹಚ್ಚುವ ಬಣ್ಣ ಶಿಬಿರವು
ಸುಳ್ಯದಲ್ಲಿ ಮತ್ತು ಮಡಿಕೇರಿಯಲ್ಲಿ ಪ್ರತ್ಯೇಕವಾಗಿ ನಡೆಯುತ್ತದೆ. ಈ ಶಿಬಿರದಲ್ಲಿ ತರಬೇತುದಾರರೊಂದಿಗೆ ಮಕ್ಕಳಿಗೆ ವೈವಿಧ್ಯಮಯ ತರಬೇತಿಯನ್ನು ನೀಡುವುದರ ಜೊತೆಗೆ, ಮಕ್ಕಳನ್ನು ಒಂದೇ ಕಡೆ ಒಂದೇ ವೇದಿಕೆಯಲ್ಲಿ ಪರಿಚಯಸ್ಥರನ್ನಾಗಿಸಿ ಮನೊಲ್ಲಾಸದಿಂದ ಮನರಂಜಿಸುವಂತೆ ಮಾಡುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಿ ಕೊನೆಯ ದಿನ ಪ್ರತೀ ಮಗುವೂ ವೇದಿಕೆಯಲ್ಲಿ ಸಾಂಸ್ಕ್ರತಿಕ ಪ್ರದರ್ಶನಕ್ಕೆ ತಯಾರುಗುವಂತೆ ಮಾಡುವುದು ವಿಶೇಷವಾಗಿರುತ್ತದೆ.
ಈ ಬಾರಿಯೂ ಅಂದರೆ, ಬೇಸಿಗೆ ಶಿಬಿರ ‘ಬಣ್ಣ – 2023’ ಈಗಾಗಲೇ
ದಿನಾಂಕವನ್ನು ನಿಗದಿಪಡಿಸಲಾಗಿದ್ದು, ರಾಜ್ಯದ ವಿವಿದ ಕ್ಷೇತ್ರದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತರಬೇತಿಗಾಗಿ ಭಾಗವಹಿಸುತ್ತಿದ್ದು ಹದಿನೇಳು (6-17) ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ರಂಗಮಯೂರಿ ಕಲಾಶಾಲೆಯು ನಡೆಸುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವಂತೆ, ಕಾರ್ಯಕ್ರಮದ ಆಯೋಜಕರು ಹಾಗೂ ನಿರ್ದೇಶಕರಾಗಿರುವ ಲೋಕೇಶ್ ಊರುಬೈಲ್ ತಿಳಿಸಿರುತ್ತಾರೆ. ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿ ತಿಳಿಸಲಾಗಿದೆ.
ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ರಂಗ ಮಯೂರಿ ಕಲಾಶಾಲೆಯನ್ನು ಅಥವಾ ಈ ದೂರವಾಣಿ ಸಂಖ್ಯೆಯನ್ನು 9611355496 , 6363783983 ಸಂಪರ್ಕಿಸಿ ಮಾಹಿತಿ ಜೊತೆಗೆ ನೋಂದಾವಣಿ ಮಾಡಿಕೊಳ್ಳಬಹುದು.
ರಂಗಮಯೂರಿ ಕಲಾ ಶಾಲೆ..
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲೆ, ಸಾಹಿತ್ಯದಲ್ಲಿ ಬಹಳಷ್ಟು ಆಸಕ್ತಿ ಹೊಂದಿದವರಾಗಿರುತ್ತಾರೆ. ಕೆಲವೊಮ್ಮೆ ಪ್ರತಿಭೆಗಳಿಗೆ ಸರಿಯಾದ ವೇದಿಕೆ, ಗುರುಗಳು ದೊರಕದೇ ಹಲವು ಮಕ್ಕಳು ಅರ್ಧದಲ್ಲಿಯೇ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಬಿಡುವ ಸಂದರ್ಭಗಳು ಎದುರಾಗುತ್ತವೆ. ಈ ಕಾರಣ, ಅವಕಾಶಗಳನ್ನು ಒದಗಿಸಿಕೊಡುವುದರ ಜೊತೆಗೆ, ಆಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವುದಕ್ಕಾಗಿ ಜೂನ್, 2018ರಲ್ಲಿ ಸುಳ್ಯದ ರಂಗಮಯೂರಿ ಕಲಾಶಾಲೆ(ರಿ.)ಯು ಉದ್ಘಾಟನೆಯಾಗಿ ಇವತ್ತಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಪ್ರಾರಂಭದಲ್ಲಿ ಹಂತ ಹಂತವಾಗಿ ಸಾಕಷ್ಟು ಆಸಕ್ತ ವಿದ್ಯಾರ್ಥಿಗಳು ತಮ್ಮ ಕ್ಷೇತ್ರವನ್ನು ಆರಿಸಿಕೊಂಡು ರಂಗಮಯೂರಿ ಕಲಾಶಾಲೆಯನ್ನು ಸೇರುವುದರ ಜೊತೆಗೆ, ವೇದಿಕೆಯ ಮೇಲೆ ಅಭಿನಯ, ನಾಟಕ,ನೃತ್ಯ, ಸಂಗೀತ ಯೋಗ, ಭಜನೆ ಯಕ್ಷಗಾನ ಹೀಗೇ ಹಲವಾರು ಕಡೆ ಕಾರ್ಯಕ್ರಮ ನೀಡಿ ರಾಷ್ಟ್ರ ಮಟ್ಟಕ್ಕೂ ತಲುಪಿದ್ದಾರೆ. ಸಾಮಾಜಿಕ ಹಾಗೂ ಸಾಂಸ್ಕ್ರತಿಕವಾಗಿ ಎಲ್ಲರನ್ನೂ ಬೆಳೆಸುವ ಉದ್ದೇಶದಿಂದ ಪ್ರತೀ ದಿನ ಹೊಸತನವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿಭಿನ್ನ ಶೈಲಿಯಲ್ಲಿ ವಿದ್ಯಾರ್ಥಿಗಳಿಗಾಗಿಯೇ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಒದಗಿಸಿಕೊಡುವುದರ ಜೊತೆಗೆ, ಮಕ್ಕಳು ಸ್ವತಂತ್ರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿಕೊಳ್ಳುವಲ್ಲಿ ರಂಗ ಮಯೂರಿ ಕಲಾಶಾಲೆಯು ಮಾದರಿಯಾಗುತ್ತಾ ಬಂದಿದೆ.
ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ನೇರವಾಗಿ ನೋಡಲು ಪ್ರತಿ ತಿಂಗಳ ಅಂತ್ಯದಲ್ಲಿ ಸ್ವತಃ ಕಲಾಶಾಲೆಯಲ್ಲಿಯೇ ಮಕ್ಕಳ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಜೊತೆಗೆ, ವರ್ಷದಲ್ಲಿ ಒಂದು ದಿನ ಎಲ್ಲಾ ವಿದ್ಯಾರ್ಥಿಗಳು ಜೊತೆಯಾಗಿ ತಮ್ಮ ಆಸಕ್ತಿಯ ಆಯ್ದ ಕ್ಷೇತ್ರದಲ್ಲಿ ಪ್ರತೀ ಮಗುವಿಗೂ ವೇದಿಕೆಯಲ್ಲಿ ಧೈರ್ಯವಾಗಿ ನಿಂತು ಹಾಡು, ನೃತ್ಯ, ನಾಟಕದ ಮೂಲಕ ಪ್ರದರ್ಶನವನ್ನು ತಮ್ಮವರ ಮುಂದೆ ನಿಂತು ಪ್ರದರ್ಶಿಸೋದಕ್ಕೆ ಸಾಕಷ್ಟು ಉಪಯುಕ್ತವಾಗಿದೆ ಎಂದು ಅನುಭವಸ್ಥ ವಿದ್ಯಾರ್ಥಿಗಳು ಹೇಳುತ್ತಾರೆ.ಪ್ರಾರಂಭದಲ್ಲಿ ಅಂಜಿಕೆಯಿಂದಿರುವ ಮಕ್ಕಳು ಒಂದೊಂದು ಕಾರ್ಯಕ್ರಮದ ಮುಖಾಂತರ ಪ್ರತೀ ಹೆಜ್ಜೆಗೂ ಹೊಸತನ್ನು ಕಲಿಯುವುದರ ಜೊತೆಗೆ ಮುಂದೊಂದು ದಿನ ಅತ್ಯುತ್ತಮ ಪ್ರತಿಭಾನ್ವಿತ ಕಲಾಸಕ್ತರಾಗಿ ಹೊರಬೀಳಲು ಇಂತಹಾ ವೇದಿಕೆ ಬಹಳಷ್ಟು ಸಹಕಾರಿಯಾಗುತ್ತವೆ ಎಂದೂ ಸ್ವತಃ ಅಲ್ಲಿ ಕಲಿತಿರುವ ವಿದ್ಯಾರ್ಥಿಗಳು ಅಭಿಪ್ರಾಯ ಪಡುತ್ತಾರೆ.
ಇಷ್ಟೇ ಅಲ್ಲದೇ, ಕೊರೋನಾ ಸಮಯದಲ್ಲಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡ ಸಮಯದಲ್ಲಿ ವಿದ್ಯಾರ್ಥಿಗಳಿಗೆ,ಪೋಷಕರಿಗೆ ಆತ್ಮವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ಆನ್ಲೈನ್ ಕಾರ್ಯಕ್ರಮ, ಸ್ಪರ್ಧೆ, ಉಪನ್ಯಾಸ ಕಾರ್ಯಾಗಾರ ಇನ್ನಿತರ ಹಲವಾರು ಯೋಚನೆಗಳನ್ನು ಕ್ರಿಯಾತ್ಮಕವಾಗಿ ಆಯೋಜಿಸಲಾಗಿತ್ತು. ಇದರಿಂದ ಆಲೋಚನೆಗಳಿಲ್ಲದೆ ಮೌನವಾಗಿದ್ದ ಸಾಕಷ್ಟು ಜನರಿಗೆ ಮನರಂಜನೆಯ ಜೊತೆಗೆ ಮಕ್ಕಳ ಚೇತರಿಕೆ ಇಂತಹಾ ಕಾರ್ಯಕ್ರಮಗಳಿಂದ ಮತ್ತಷ್ಟು ಹುರಿದುಂಬಿಸಿದಂತಾಗಿತ್ತು.
ರಂಗಮಯೂರಿ ಕಲಾಶಾಲೆಯಲ್ಲಿ ಯೋಗ, ಕರಾಟೆ, ಭಜನೆ, ಯಕ್ಷಗಾನ, ಡ್ರಾಯಿಂಗ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ, ಅಭಿನಯ ಇತ್ಯಾದಿ ತರಗತಿಗಳನ್ನು ಆಯಾಯ ಶಿಕ್ಷಕರ ಮಾರ್ಗದರ್ಶನದ ಮುಖಾಂತರ ವಾರಪೂರ್ತಿ ನಡೆಸುತ್ತಿರುತ್ತದೆ. ಅಲ್ಲದೇ, ಪ್ರಸ್ತುತ ಸಮಯದಲ್ಲಿ ರಂಗಮಯೂರಿ ಕಲಾಶಾಲೆಯು ವಿದ್ಯಾರ್ಥಿಗಳನ್ನು ಸ್ಥಳೀಯ ವೇದಿಕೆಯ ಜೊತೆಗೆ ಹೊರಗಿನ ರಾಜ್ಯ, ರಾಷ್ಟ್ರಮಟ್ಟದ ವೇದಿಕೆಗಳಲ್ಲೂ ಕಾರ್ಯಕ್ರಮ, ಸ್ಪರ್ಧೆಗಳೊಂದಿಗೆ ವಿಜೇತರಾಗಿಸಿರುವುದನ್ನು ಕಾಣಬಹುದಾಗಿದೆ.