ನವದೆಹಲಿ:‘ಆಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಹಂಗರಿ, ಪೋಲೆಂಡ್ನ ಗಗನಯಾತ್ರಿಗಳು ಯಶಸ್ವಿಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತಲುಪಿದ್ದಾರೆ.ಗಗನಯಾತ್ರಿಗಳಿರುವ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶವನ್ನು ಹೊತ್ತ ಸ್ಪೇಸ್ಎಕ್ಸ್ನ ‘ಫಾಲ್ಕನ್–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಬುಧವಾರ ಮಧ್ಯಾಹ್ನ
12.01ಕ್ಕೆ (ಭಾರತೀಯ ಕಾಲಮಾನ) ಯಶಸ್ವಿಯಾಗಿ ಚಿಮ್ಮಿತ್ತು. ಅದು ಸುಮಾರು 28 ಗಂಟೆಗಳ ಬಳಿಕ, ಅಂದರೆ ಇಂದು (ಗುರುವಾರ) ಸಂಜೆ 4 ಗಂಟೆಗೆ ಐಎಸ್ಎಸ್ನೊಂದಿಗೆ ಜೋಡಣೆಯಾಗಿದೆ (ಡಾಕಿಂಗ್) ಎಂದು ವರದಿಯಾಗಿದೆ.ಶುಕ್ಲಾ ಅವರೊಂದಿಗೆ, ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿರ್ಬೊ ಕಾಪು ಹಾಗೂ ಪೋಲೆಂಡ್ನ ಸ್ವವೋಶ್ ಓಜ್ನೈನ್ಸ್ಕಿ ವೀಶ್ನೀವುಫ್ಸ್ಕಿ ಪ್ರಯಾಣ ಕೈಗೊಂಡಿದ್ದಾರೆ. 14 ದಿನಗಳವರೆಗೆ ಐಎಸ್ಎಸ್ನಲ್ಲಿರುವ ಈ ಗಗನಯಾನಿಗಳು ವಿಜ್ಞಾನದ ಕುರಿತು 60ಕ್ಕೂ ಹೆಚ್ಚು ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ವಿವಿಧ ತಾಂತ್ರಿಕ ಕಾರಣಗಳಿಂದ ಈ ಯೋಜನೆಯ ಉಡ್ಡಯನ ಆರು ಬಾರಿ ಮುಂದಕ್ಕೆ ಹೋಗಿತ್ತು.ಅಮೆರಿಕದ ವಾಣಿಜ್ಯ ಯೋಜನೆಯಾದ ಇದನ್ನು, ‘ನಾಸಾ’, ‘ಆಕ್ಸಿಯಂ ಸ್ಪೇಸ್’ ಹಾಗೂ ಇಲಾನ್ ಮಸ್ಕ್ ಒಡೆತನದ ‘ಸ್ಪೇಸ್ಎಕ್ಸ್’ ಜಂಟಿಯಾಗಿ ರೂಪಿಸಿವೆ.
ಭಾರತ, ಪೋಲೆಂಡ್, ಹಂಗರಿಯ ಗಗನಯಾನಿಗಳು ನಾಲ್ಕು ದಶಕಗಳ ಬಳಿಕ ಕೈಗೊಂಡಿರುವ ಬಾಹ್ಯಾಕಾಶ ಯಾನ ಇದಾಗಿದೆ. ಭಾರತದ ರಾಕೇಶ್ ಶರ್ಮಾ ಅವರು ಗಗನಯಾನ ಕೈಗೊಂಡ 41 ವರ್ಷಗಳ ಬಳಿಕ ಭಾರತದ ಮತ್ತೊಬ್ಬ ಗಗನಯಾನಿ ಶುಭಾಂಶು ಶುಕ್ಲಾ ಅವರು ಅಂತರಿಕ್ಷ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.