ಸುಳ್ಯ:ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯನ್ನು ಗ್ರಾಮ ಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಗ್ರಾಮ ಕಾರ್ಯಪಡೆಯನ್ನು ರಚಿಸಲಾಗುವುಸು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಶುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು ಗ್ರಾಮ ಕಾರ್ಯಪಡೆಯಲ್ಲಿ ಗ್ರಾಮ ಪಂಚಾಯತ್ನ
ಹಾಲಿ ಸದಸ್ಯರು, ಮಾಜಿ ಜಿ.ಪಂ.ತಾ.ಪಂ. ಹಾಗೂ ಗ್ರಾ.ಪಂ.ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಇರುವವರನ್ನು ಸೇರ್ಪಡೆ ಮಾಡಲಾಗುವುದು. ಪ್ರತಿ ಗ್ರಾಮ ಕಾರ್ಯ ಪಡೆಯಿಂದ ಇಬ್ಬರನ್ನು ತಾಲೂಕು ಸಮಿತಿಗೆ ಹಾಗೂ ತಾಲೂಕು ಸಮಿತಿಯಿಂದ 5 ಮಂದಿಯನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಗುವುದು. ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆ, ಸದಸ್ಯರ ಜವಾಬ್ದಾರಿ, ಸೇವಾ ಮನೋಭಾವನೆ ಕುರಿತು ಅರಿವು ಮೂಡಿಸಲು ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಮುಂದಿನ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಿದ್ಧತೆ ನಡೆಸುವ ದೃಷ್ಟಿಯಿಂದ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು ಎಂದರು. ಸಂಘಟನೆಯ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರ ಮೂಲಕ ಸುಳ್ಯ ತಾಲೂಕಿನ 19 ಗ್ರಾಮ ಪಂಚಾಯತ್ಗಳಿಗೆ 72.75 ಲಕ್ಷ ಅಭಿವೃದ್ಧಿ ಅನುದಾನ ಬಂದಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸುಳ್ಯ ತಾಲೂಕು ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಜಿಲ್ಲಾ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಜಿಲ್ಲಾ ಸಮಿತಿ ಸದಸ್ಯ ಅಶೋಕ್ ಚೂಂತಾರು, ಸಂಘಟನೆಯ ಪ್ರಮುಖರಾದ ರವಿಕುಮಾರ್ ಕಿರಿಭಾಗ, ತಿರುಮಲೇಶ್ವರಿ ಅಡ್ಕಾರ್, ಮಂಜುನಾಥ್ ಮಡ್ತಿಲ, ಮಣಿ ಕಲ್ಲೋಣಿ ಉಪಸ್ಥಿತರಿದ್ದರು.