ತಿರುವನಂತಪುರ: ಕೇರಳದಲ್ಲಿ ಮುಂದಿನ ಐದು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.ಜೂನ್ 14ರಿಂದ 17ರವರೆಗೆ ಭಾರೀ ಮಳೆಯಾಗಲಿದೆ. ಬಿರುಗಾಳಿ ಬೀಸಲಿದೆ. ಈ ಅವಧಿಯಲ್ಲಿ ಕೇರಳ, ಕರ್ನಾಟಕ, ಲಕ್ಷದ್ವೀಪ ತೀರದಲ್ಲಿ
ಬಲವಾಗಿ ಗಾಳಿ ಬೀಸುವುದರಿಂದ ಮೀನುಗಾರರು ಎಚ್ಚರದಿಂದಿರಬೇಕು ಎಂದು ಇಲಾಖೆ ಹೇಳಿದೆ.
ಕೇರಳದ ಒಂಬತ್ತು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (11ರಿಂದ 20 ಸೆಂ.ಮೀ), ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ (20 ಸೆಂ.ಮೀ.ಗೂ ಹೆಚ್ಚು) ಮತ್ತು ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (6ರಿಂದ 11 ಸೆಂ.ಮೀ.) ನೀಡಲಾಗಿದೆ.ಈ ವರ್ಷ ಮೇ 24ರಂದೇ ಮುಂಗಾರು ಕೇರಳ ಪ್ರವೇಶಿಸಿದೆ. ಮೇ 31ರವರೆಗೂ ರಾಜ್ಯದಲ್ಲಿ ವ್ಯಾಪಕ ಮಳೆಯಾಗಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ಅಂದಾಜಿಸಿದೆ.