*ಎಂ.ನಾ.ಚಂಬಲ್ತಿಮಾರ್.
ನಡುನೆತ್ತಿಗೆ ಭಸ್ಮ ಲೇಪಿಸಿ ನಿಷ್ಕಳಂಕ ಮುಗ್ಧತೆಯಿಂದ ಕಾಣುವ ಪಕ್ಕಾ ‘ತಮಿಳ್ ಪಯ್ಯನ್’ ನಮ್ಮ ಪ್ರಜ್ಞಾನಂದ ನನ್ನು ಕಾಣುವಾಗಲೇ ಅದೆಂಥದೋ ಅಕ್ಕರೆಯ ಮಮತೆಯೊಂದು ಅರಿಯದೇ ಮೂಡುತ್ತದೆ…..
ಈತನೀಗ ಚದುರಂಗ ಜಗತ್ತಿನ ಪ್ರಜ್ವಲಿಸುವ ಧ್ರುವನಕ್ಷತ್ರ. ವಿಶ್ವದ ನಂ.1ಆಟಗಾರನನ್ನೇ ಬೆವರಿಳಿಸಿದ 18ರ ಪೋರ!
ಈತ ಅಂತಿಮ ಘಟ್ಟದಲ್ಲಿ ಎಡವಿ ಸೋತಿರಬಹುದು.ಆದರೆ ಚೆಸ್ ಸಾಮ್ರಾಜ್ಯದ ಮನಗೆದ್ದಿದ್ದಾನೆ. ಇಂದಲ್ಲ ನಾಳೆ ಆ ಸಾಮ್ರಾಜ್ಯದ ಚಕ್ರವರ್ತಿಯಾಗುವ ಭರವಸೆ ಮೂಡಿಸಿದ್ದಾನೆ.. ಈ ಹುಡುಗನಿಗೆ ಪ್ರಜ್ಞಾನಂದ ಎಂಬ ಹೆಸರು ಯಾರಿಟ್ಟರು?
ಅದು ಹೇಗೆ ಬಂತು? ಅನೇಕರೀಗ ಅದನ್ನು ಸ್ಪಷ್ಟವಾಗಿ ಹೇಳಲೂ ಆಗದೇ, ಉಚ್ಛರಿಸಲೂ ಆಗದೇ, ನೆಟ್ಟಗೆ ಬರೆಯಲೂ ಬಾರದೇ
ಪ್ರಗ್ಯಾ – ಪ್ರಜ್ಜೂ -ಪ್ರಗ್ಗು ಎಂದೆಲ್ಲ ಒದರುವುದನ್ನು . ಮಾಧ್ಯಮಗಳಲ್ಲಿ ಕಂಡಾಗ ನೀವೇ ಯೋಚಿಸಿ, ಮನಸು ಮರುಗದೇ ಇದ್ದೀತೇ…?
ಪ್ರಜ್ಞಾನಂದನದು ಅಪ್ಪಟ ದೈವಭಕ್ತರ ಕುಟುಂಬ. ಸಂಸ್ಕಾರವಂತರ ಮನೆ. ಸರಳ ಬದುಕು.ತಾಯ್ತಂದೆಯರಾದ ರಮೇಶ್ – ನಾಗಲಕ್ಷ್ಮಿ ದಂಪತಿಯರು ಶ್ರೀ ಮಹಾವಿಷ್ಣು ವಿನ ದಶಾವತಾರದ ಅಂತಿಮ ಅವತಾರ ಪುರುಷ ಕಲ್ಕಿ ಭಗವಾನರ ಭಕ್ತರು.ಅವರು ಪ್ರತಿನಿತ್ಯ ಕ್ಷೇತ್ರ ಸಂದರ್ಶಕರು.
ಈ ಹುಡುಗನಿಗೆ ಪ್ರಜ್ಞಾನಂದ ಎಂಬ ಹೆಸರು ಸೂಚಿಸಿದ್ದೇ ಈ ದೇಗುಲದ ಅರ್ಚಕರು. ಆ ಹೆಸರೀಗ ವಿಶ್ವ ವಿಖ್ಯಾತವಾಗಿದೆ. ಅನೇಕರಿಗೆ ಉಚ್ಛರಿಸಲಾಗದೇ ಜಿಜ್ಞಾಸೆಗೂ ಕಾರಣವಾಗಿದೆ!
ಪ್ರಜ್ಞಾನಂದನ ತಂದೆ ರಮೇಶ್ ಬಾಬು ಪೋಲಿಯೋ ಪೀಡಿತರು. ಹೀಗಾಗಿ ಕುಟುಂಬದ ಹೊರೆ ಅಮ್ಮ ನಾಗಲಕ್ಷ್ಮಿಯ ಹೆಗಲಿಗೆ.
ಪ್ರಜ್ಞಾನಂದನಿಗೊಬ್ಬಳು ಅಕ್ಕ, ಆಕೆ ವೈಶಾಲಿ.
ಚಿಕ್ಕಂದಿನಲ್ಲಿ ಟಿ. ವಿ. ಚಟಕ್ಕೆ ಬೀಳುವ ಸೂಚನೆ ಸಿಕ್ಕಾಗ ಅಮ್ಮನೇ
ಅವಳನ್ನು ಚೆಸ್ ತರಗತಿಗೆ ಸೇರಿಸುತ್ತಾಳೆ. ಅಕ್ಕನ ಹಾದಿಯನ್ನೇ ತಮ್ಮನೂ ತನ್ನ ಎರಡನೇ ತರಗತಿಯಲ್ಲೇ ಅನುಸರಿಸುತ್ತಾನೆ. ಇವತ್ತು ಇಬ್ಬರೂ ಭಾರತದ ಚದುರಂಗದ ಚಕ್ರವರ್ತಿಗಳು. ಜಗತ್ತಿನ ಚಕ್ರವರ್ತಿಗಳನ್ನೇ ಗಡಗಡ ನಡುಗಿಸಿದವರು!!
ಈಗ ನಂ. 1ಎನಿಸಿಕೊಂಡಿರುವ ಕಾರ್ಲ್ ಸನ್ ನನ್ನು ಇದೇ ವೈಶಾಲಿ 2013ರಲ್ಲಿ ಭಾರತದ ನೆಲದಲ್ಲೇ ಸೋಲಿಸಿದ್ದಳು!!
ಪ್ರಜ್ಞಾನಂದನೂ ಅಂತಿಮ ಹಣಾಹಣಿಯ ಮೊದಲೆರಡು ಸುತ್ತಿನಲ್ಲೂ ಸೋಲಿಸಿ ನಗೆ ಬೀರಿದ್ದನು!!ಈ ಸಾಧನೆಯ ನಗುವಿನ ಹಿಂದೆ ಹಳ್ಳಿ ಹೆಂಗಸು ನಾಗಲಕ್ಷ್ಮಿಯ ಬೆವರಿನ ಘಮವಿದೆ.. ಆಕೆ ತನ್ನಿಬ್ಬರು ಮಕ್ಕಳ ಭವಿಷ್ಯಕ್ಕಾಗಿ ತನ್ನ ಭವಿಷ್ಯವನ್ನೇ ಧಾರೆ ಎರೆದ ಮಹಾತಾಯಿ!
ಈ ಇಬ್ಬರು ಮಕ್ಕಳೂ ಭಾರತದ ಚದುರಂಗದ ಭರವಸೆಯ ಕಲಿಗಳು. ವಿಶ್ವಕ್ಕೇ ಸವಾಲು ಎಸೆಯುವ ಸಾಧಕರು. ಈ ಎರಡು ರತ್ನಗಳ ಬೆನ್ನೆಲುಬು ಇದೇ ನಾಗಲಕ್ಷ್ಮಿ…ಅವರು ಗೃಹಿಣಿ, ಕೋಚ್, ಸ್ಟ್ರೆಸ್ ಮೇನೇಜ್ಮೆಂಟ್ ಅಡ್ವೈಸರ್, ಮೋಟಿವೇಷನ್ ಸ್ಪೀಕರ್, ಮಕ್ಕಳ ಮೆನೇಜರ್, ಟ್ರಾವೆಲ್ ಪ್ಲಾನರ್ ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಮನೆ ರೂಪಿಸಿದ್ದಾಳೆ. ಆ ಮನೆಗೆಲಸದ ನಡುವೆಯೇ ಜಗತ್ಪ್ರಸಿದ್ದ ಚೆಸ್ ಪಟುಗಳನ್ನು ರೂಪಿಸಿ ಭಾರತಕ್ಕೆ ಕಾಣಿಕೆ ನೀಡಿದ್ದಾಳೆ..
ಇವರೇನೂ ಶ್ರೀಮಂತರಲ್ಲ. ಕೈಗೊಂದು ಕಾಲಿಗೊಂದು ಆಳಿಟ್ಟವರಲ್ಲ. ಮಕ್ಕಳಿಬ್ಭರನ್ನೂ ಈ ಪರಿ ಸಾಧನೆಯ ಉತ್ತುಂಗಕ್ಕೇರಿಸಬೇಕೆಂದರೆ ಅವರ ಇಚ್ಛಾ ಶಕ್ತಿಗೆ ಮಾ ತುಜೇ ಸಲಾಂ….
ವೈಶಾಲಿ ವಿಶ್ವದ ಹೆಸರಾಂತ ಚೆಸ್ ಪಟು. ಪ್ರಜ್ಞಾನಂದ ನೂಲಿನೆಳೆ ಅಂತರದಲ್ಲಿ ಸೋತರೂ ರನ್ನರ್ ಅಪ್..
ಈ ಗೆಲುವಿನ ಸಾಧನೆಯಲ್ಲಿ ಅಮ್ಮ ನಾಗಲಕ್ಷ್ಮಿಯ ಕಳಕಳಿಯ ಕಾಳಜಿ ಇದೆ. ಸಂಕಲ್ಪಶುದ್ದಿ ಇದೆ..
ಇವರು ಮನೆಯಲ್ಲಿ ಎಲ್ಲರೂ ಒಟ್ಟಾಗಿ ಉಣ್ಣುತ್ತಾರೆ. ಅದೂ ಸಸ್ಯಾಹಾರ! ಬಾಹ್ಯ ಫಾಸ್ಟ್ ಫುಡ್, ನ್ಯೂ ಜೆನ್ ಟೇಸ್ಟಿಂದೆಲ್ಲ ಮಾರು ದೂರ!
ಸಮಯ ಸಿಕ್ಕಾಗ ಗೆಳೆಯರೊಡನೆ ಬಯಲಿನಲ್ಲಿ ಕ್ರಿಕೆಟ್ ಆಡುವ ಪ್ರಜ್ಞಾನಂದನಿಗೆ ತಮಿಳ್ ಕಾಮಿಡಿ ಸಿನಿಮಾ ಇಷ್ಟ.
ಈ ಇಬ್ಬರೂ ಮಕ್ಕಳ ಬೇಕು, ಬೇಡಗಳನ್ನೆಲ್ಲ ಹದ್ದಿನಕಣ್ಣಿಟ್ಟು ನಿರ್ವಹಿಸುವವರು ನಾಗಲಕ್ಷ್ಮಿ,
ಮಗ ಎಲ್ಲೇ ಹೋಗಲಿ, ಯಾರೊಡನೆಯೇ ಆಡಲಿ ಹಣೆಯಲ್ಲಿ ದೇವರ ಭಸ್ಮ ಕಡ್ಡಾಯ ಲೇಪಿಸಲೇಬೇಕೆಂಬ ಎಚ್ಚರಿಕೆಯ ಕಾಳಜಿ ಅಮ್ಮನದ್ದು!!!
ನಾವು ಶಿಲ್ಪ ಮತ್ತದರ ಸೌಂದರ್ಯವನ್ನಷ್ಟೇ ಬಣ್ಣಿಸುತ್ತೇವೆ. ಶಿಲ್ಪಿಯನ್ನು ಗೊತ್ತೇ ಇರುವುದಿಲ್ಲ.
ಏಕೆಂದರೆ ಶಿಲ್ಪದಲ್ಲಿ ಕೆತ್ತಿದವರ ಹೆಸರೇ ಇರುವುದಿಲ್ಲ!
ಇಷ್ಟಕ್ಕೂ ಇದು ಅದೃಷ್ಟದ ಆಟವಲ್ಲ.
ಇದು ಪ್ರತಿಭೆ, ಬುದ್ದಿವಂತಿಕೆಯ ಚಾತುರ್ಯ ಬಯಸುವ ಆಟ.
ಇದು ನಮ್ಮ ಭಾರತದ ಆವಿಷ್ಕಾರ. ಇದಕ್ಕೆ ಸನಾತನ ಪರಂಪರೆಯ ಪೌರಾಣಿಕ ಹಿನ್ನೆಲೆ ಇದೆ. ಆ ಪರಂಪರೆ ನಮ್ಮದೇ ನೆಲದ ಸೊತ್ತಾಗಿರಬೇಕಾದರೆ ಪ್ರಜ್ಞಾನಂದ, ವೈಶಾಲಿಯಂಥವರನ್ನು ರೂಪಿಸಿದ ನಾಗಲಕ್ಷ್ಮಿಯರು ಬೇಕು…
- ಎಂ.ನಾ.ಚಂಬಲ್ತಿಮಾರ್
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದರು.)