ಪ್ಯಾರಿಸ್: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಒಂದೇ ದಿನ ಎಂಟು ಪದಕ ಗೆದ್ದರು.ಎರಡು ಚಿನ್ನ, ಮೂರು ಬೆಳ್ಳಿ, 3 ಕಂಚಿನ ಪದಕ ಭಾರತದ ಕ್ರೀಡಾಪಟುಗಳ ಪಾಲಾಯಿತು. ಇವುಗಳಲ್ಲಿ ನಾಲ್ಕು ಬ್ಯಾಡ್ಮಿಂಟನ್ನಲ್ಲೇ ಬಂದವು. ಭಾರತದ ನಿತೇಶ್ ಕುಮಾರ್ ಅವರು ಮೂರು ಗೇಮ್ಗಳ ಸೆಣಸಾಟದಲ್ಲಿ ಬ್ರಿಟನ್ನ ಡೇನಿಯಲ್ ಬೆಥೆಲ್ ಅವರನ್ನು
ಸೋಲಿಸಿ ಪ್ಯಾರಾಲಿಂಪಿಕ್ಸ್ ಪುರುಷರ ಸಿಂಗಲ್ಸ್ ಎಸ್ಎಲ್3 ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದುಕೊಂಡರು. ಜಾವೆಲಿನ್ ಥ್ರೋ ತಾರೆ ಸುಮಿತ್ ಅಂಟಿಲ್ ಅವರು ದಾಖಲೆಯೊಂದಿಗೆ ಚಿನ್ನ ಉಳಿಸಿಕೊಂಡರು. ನಿಷಾದ್ ಕುಮಾರ್ ಹೈಜಂಪ್ ಟಿ27 ವಿಭಾಗದಲ್ಲಿ ಸತತ ಎರಡನೇ ಬೆಳ್ಳಿ ಗೆದ್ದಿದ್ದರು. ನಿತೇಶ್ 21–14, 18–21, 23–21 ರಿಂದ ಬೆಥೆಲ್ ಅವರನ್ನು 1 ಗಂಟೆ 20 ನಿಮಿಷಗಳ ಸೆಣಸಾಟದಲ್ಲಿ ಹಿಮ್ಮೆಟ್ಟಿಸಿದರು.
ಸುಹಾಸ್ ಎಲ್. ಯತಿರಾಜ್ ಅವರೂ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಸತತ ಎರಡನೇ ಸಲ ಎಸ್ಎಲ್4 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ಫೈನಲ್ನಲ್ಲಿ ಸುಹಾಸ್ 9–21, 13–21 ರಲ್ಲಿ ನೇರಗೇಮ್ಗಳಿಂದ ಫ್ರಾನ್ಸ್ನ ಲುಕಸ್ ಮಝುರ್ ಅವರಿಗೆ ಮಣಿದರು. ಹರಿಯಾಣದ ಬಹಾದ್ದೂರ್ಗಢದ ಯೋಗೇಶ್ ಕಥುನಿಯಾ ಅವರು ಸತತ ಎರಡನೇ ಪ್ಯಾರಾಲಿಂಪಿಕ್ಸ್ನಲ್ಲೂ ಬೆಳ್ಳಿ ಗೆದ್ದು ಸಂಭ್ರಮಿಸಿದರು. ಪುರುಷರ ಡಿಸ್ಕಸ್ ಥ್ರೊ ಎಫ್56 ಸ್ಪರ್ಧೆ ಯಲ್ಲಿ ಅವರು 42.22 ಮೀ. ಎಸೆದು ಜೀವನಶ್ರೇಷ್ಠ ಪ್ರದರ್ಶನ ನೀಡಿದರು.
ನಿಷಾದ್ ಪುರುಷರ ಟಿ47 ವಿಭಾಗದ ಹೈಜಂಪ್ನಲ್ಲಿ ಸತತ ಎರಡನೇ ಬಾರಿ ಬೆಳ್ಳಿ ಪದಕ ಗೆದ್ದುಕೊಂಡರು. ನಿಷಾದ್ 2.04 ಮೀ. ಎತ್ತರ ಜಿಗಿದರು.
ಭಾರತದ ಬಿಲ್ಗಾರರಾದ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರು ಪ್ಯಾರಾಲಿಂಪಿಕ್ಸ್ ಮಿಶ್ರ ತಂಡ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಭಾರತದ ಜೋಡಿಯು156-155 ಅಂತರದಲ್ಲಿ ಇಟಲಿಯ ಎಲಿಯೊನೊರಾ ಸರ್ತಿ ಮತ್ತು ಮ್ಯಾಟಿಯೊ ಬೊನಾಸಿನಾ ಅವರನ್ನು ಮಣಿಸಿ ಈ ಸಾಧನೆ ಮಾಡಿತು.