ನವದೆಹಲಿ: ಇಸ್ರೇಲ್- ಹಮಾಸ್ ಸಂಘರ್ಷ ಮುಂದುವರಿದಿರುವ ಹಿನ್ನಲೆಯಲ್ಲಿ ಇಸ್ರೇಲ್ನಲ್ಲಿರಯವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ ‘ಆಪರೇಷನ್ ಅಜಯ್’ ಕಾರ್ಯಾಚರಣೆ ಆರಂಭಿಸಿದೆ. ಮೊದಲ ವಿಮಾನ ಗುರುವಾರ ರಾತ್ರಿ ಅಲ್ಲಿಂದ ಹೊರಡಲಿದೆ. ಸುಮಾರು 220 ಮಂದಿ ಮೊದಲ ವಿಮಾನದಲ್ಲಿ
ಮರಳಲಿದ್ದಾರೆ. ಶುಕ್ರವಾರ ಮುಂಜಾನೆ ವಿಮಾನ ಭಾರತಕ್ಕೆ ತಲುಪಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮಾಹಿತಿ ನೀಡಿದ್ದರು. ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದೆ. ಇದಕ್ಕಾಗಿ ‘ಆಪರೇಷನ್ ಅಜಯ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಘೋಷಿಸಿದ್ದರು. ಇದರ ಭಾಗವಾಗಿ ಗುರುವಾರ ಇಸ್ರೇಲ್ನಿಂದ ಹೊರಡುವ ಮೊದಲ ರಕ್ಷಣಾ ವಿಮಾನದ ಸಿದ್ಧತೆಗಳ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.
ಇಸ್ರೇಲ್ನಿಂದ ತೆರಳಲು ಬಯಸುವ ಮತ್ತು ನೆರವು ಅಗತ್ಯವಿರುವ ಭಾರತೀಯ ನಾಗರಿಕರಿಗಾಗಿ ಇಸ್ರೇಲ್ನಲ್ಲಿರುವ ಭಾರತದ ರಾಯಭಾರಿ ಕಚೇರಿ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿ ಆರಂಭಿಸಿದೆ. ಭಾರತಕ್ಕೆ ತೆರಳಲು ಬಯಸುವ ನಾಗರಿಕರು ಸಹಾಯವಾಣಿ ಮೂಲಕ ಮಾಹಿತಿ ನೀಡಿ ನೋಂದಣಿ ಮಾಡಿದವರನ್ನು ತಾಯ್ನಾಡಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ.