ನವದೆಹಲಿ:ಇಸ್ರೇಲ್-ಹಮಾಸ್ ಸಂಘರ್ಷದ ಹಿನ್ನಲೆಯಲ್ಲಿ ಇಸ್ರೇಲ್ನಲ್ಲಿರುವ ಭಾರತೀಯರನ್ನು ಕರೆ ತರಲು ಭಾರತ ಸರಕಾರ ಆಪರೇಷನ್ ಅಜಯ್ ಆರಂಭಿಸಿದೆ. ‘ಆಪರೇಷನ್ ಅಜಯ್’ ಅಡಿಯಲ್ಲಿ ಇಸ್ರೇಲ್ನಿಂದ 212 ಭಾರತೀಯರನ್ನು ಒಳಗೊಂಡ
ಮೊದಲ ವಿಮಾನ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ
ಬಂದಿಳಿದಿದೆ. ಮೊದಲ ಹಂತದ ಆಪರೇಷನ್ ಅಜಯ್ ಕಾರ್ಯಾಚರಣೆಯಲ್ಲಿ 212 ಮಂದಿ ಭಾರತೀಯರು ತಾಯ್ನಾಡಿಗೆ ಬಂದು ಇಳಿದಿದ್ದಾರೆ.ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಇಸ್ರೇಲ್ನಿಂದ ಆಗಮಿಸಿದ ಭಾರತೀಯರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.ಇಸ್ರೇಲ್ ನಲ್ಲಿ ಆತಂಕದಲ್ಲಿ ನೆಲೆಸಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಉದ್ದೇಶದಿಂದ ಕೇಂದ್ರ ಆಪರೇಷನ್ ಅಜಯ್ ಕಾರ್ಯಾಚರಣೆ ಆರಂಭಿಸಿತು.
ಇಸ್ರೇಲ್ನಿಂದ ಮರಳಲು ಬಯಸುವ ಮತ್ತು ನೆರವು ಅಗತ್ಯವಿರುವ ಭಾರತೀಯ ನಾಗರಿಕರಿಗಾಗಿ ಇಸ್ರೇಲ್ನಲ್ಲಿರುವ ಭಾರತದ ರಾಯಭಾರಿ ಕಚೇರಿ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿ ಆರಂಭಿಸಿದೆ. ಭಾರತಕ್ಕೆ ತೆರಳಲು ಬಯಸುವ ನಾಗರಿಕರು ಸಹಾಯವಾಣಿ ಮೂಲಕ ಮಾಹಿತಿ ನೀಡಿ ನೋಂದಣಿ ಮಾಡಿದವರನ್ನು ತಾಯ್ನಾಡಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸರಕಾರ ಹೇಳಿದೆ. ಇಸ್ರೇಲ್ನಲ್ಲಿ 18 ಸಾವಿರಕ್ಕೂ ಅಧಿಕ ಭಾರತೀಯರು ಇದ್ದಾರೆ ಎಂದು ಹೇಳಲಾಗಿದೆ