ಸುಳ್ಯ:ಕರ್ನಾಟಕ ರಾಜ್ಯ ಸರಕಾರ ಹೊರ ತಂದ ಜನ ಸ್ನೇಹಿ ಯೋಜನೆಯಾದ ಎ- ಖಾತಾ ಬಿ-ಖಾತಾ ಯೋಜನೆಯಿಂದ ಸುಳ್ಯ ನಗರದ ಹಲವಾರು ಜನರಿಗೆ ಪ್ರಯೋಜನವಾಗಲಿದೆ ಎಂದು ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮೊದಲು ತಮ್ಮ ಭೂಮಿಯ ದಾಖಲೆ ಸರಿ ಮಾಡಲು ಸಾಧ್ಯವಾಗದೆ ಅನಧಿಕೃತವಾಗಿ
ಮನೆ ನಿರ್ಮಿಸಿದ ಮತ್ತು ವಾಣೀಜ್ಯ ಕಟ್ಟಡ ನಿರ್ಮಿಸಿದ ಜನರು ಅದಕ್ಕೆ ಡಬಲ್ ತೆರಿಗೆ ಕಟ್ಟಿಕೊಂಡು ಬರುತ್ತಿದ್ದಾರೆ. ಅಲ್ಲದೆ ಇದರ ದಾಖಲೆಗಳನ್ನು ಸರಿ ಪಡಿಸಲು ಸಾಧ್ಯವಾಗದೆ ಚಡಪಡಿಸುತ್ತಿದ್ದಾರೆ. ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪೌರಾಡಳಿತ ಸಚಿವರಾದ ರಹೀಮ್ ಖಾನ್, ನಾಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರ ನೇತೃತ್ವದಲ್ಲಿ ರಾಜ್ಯ ಸರಕಾರವು ಎ-ಖಾತಾ ಬಿ-ಖಾತಾ ಎಂಬ ಜನಸ್ನೇಹಿ ಕಾನೂನು ತಂದು ಸಂಕಷ್ಟದಲ್ಲಿ ಇದ್ದ ಜನತೆಯ ಕಣ್ಣೀರು ಒರೆಸುವ ಕಾರ್ಯಕ್ಕೆ ಕೈ ಹಾಕಿದೆ. ರಾಜ್ಯದಲ್ಲಿ ಸುಮಾರು ಒಂದು ಕೋಟಿ ಜನರಿಗೆ ಇದರಿಂದ ಪ್ರಯೋಜನ ಆಗಲಿದೆ. ಸುಳ್ಯ ನಗರದಲ್ಲಿ ಸುಮಾರು
7000ಕ್ಕೂ ಮಿಕ್ಕಿ ಮನೆ ಮತ್ತು ಕಟ್ಟಡಗಳು ಇರುವುದು ಕಂಡು ಬರುತ್ತದೆ. ಇದರಲ್ಲಿ 700 ಕ್ಕು ಮಿಕ್ಕಿ ಅಕ್ರಮ ಮನೆ ಮತ್ತು ಕಟ್ಟಡಗಲಿವೆ ಪ್ರಸ್ತುತ ಸರಕಾರ ತಂದ ಯೋಜನೆಯಲ್ಲಿ ಇದೆಲ್ಲವೂ ಸಕ್ರಮ ಗೊಳ್ಳುವಂತಾಗಿದೆ. ಅಲ್ಲದೆ ಈ ಮೊದಲು ಫಾರಂ 3 ಗಾಗಿ ಪಂಚಾಯತ್ ಕಚೇರಿಗೆ ಅಲೆದಾಡುತ್ತಿದ್ದ ಜನತೆಯ ದೊಡ್ಡ ಸಮಸ್ಯೆ ಮುಗಿದಂತಾಗಿದೆ. ಇದರೊಂದಿಗೆ

ಸುಳ್ಯ ನಗರದ ಸುಮಾರು 4000 ಸಾವಿರ ಜನರಿಗೆ ಎ-ಖಾತಾ ಬಿ-ಖಾತಾ ಲಭಿಸಲಿದೆ. ಈ ಮೊದಲು ಸಾವಿರಾರು ರೂಪಾಯಿ ಕೊಟ್ಟು ಪಡೆಯುತಿದ್ದ ಫಾರಂ 3 ಕೇವಲ 50 ರೂಪಾಯಿಯಲ್ಲಿ ಸಿಗುವಂತಾಗಿದೆ.ಜನರು ಇದರ ಸದುಪಯೋಗ ಪಡೆಯಬಹುದು. ಸಾರ್ವಜನಿಕರು ಕೇವಲ 50 ರೂಪಾಯಿ ಪೀಸ್ ಮಾತ್ರ ಕಟ್ಟಿ ಎ-ಖಾತಾ ಬಿ-ಖಾತಾ ಪಡೆಯಬಹುದು.ಅಕ್ರಮವಾಗಿ ನಿರ್ಮಾಣವಾದ ಕಟ್ಟಡಗಳನ್ನು ದಾಖಲೆಗಳನ್ನು ಸಲ್ಲಿಸಿ ಮೇ.10ರ ಒಳಗೆ ಸಕ್ರಮ ಮಾಡಿಕೊಳ್ಳಬಹುದು ಎಂದು ಕೆ.ಎಸ್.ಉಮ್ಮರ್ ವಿವರಿಸಿದರು.
ಕೆಪಿಸಿಸಿ ಪ್ರದಾನ ಕಾರ್ಯ ದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಮಾತನಾಡಿ ಈ ಯೋಜನೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನ ಆಗಲಿದೆ. ಸರಕಾರ ಜನಪರವಾಗಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕೇರಿ, ಧೀರಾ ಕಸ್ತಾ, ಶರೀಫ್ ಕಂಠಿ, ನಾಮನಿರ್ದೆಶಿತ ಸದಸ್ಯರಾದ ರಾಜು ಪಂಡಿತ್, ಸಿದ್ದಿಕ್ ಕೊಕ್ಕೊ, ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.