ಕಠ್ಮಂಡು: ನೇಪಾಳದಲ್ಲಿ ನಿರಂತರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ ಈ ಪರಿಣಾಮ ನೇಪಾಳದಲ್ಲಿ ಕನಿಷ್ಠ 112 ಜನರು ಮೃತಪಟ್ಟಿದ್ದಾರೆ ಹಾಗೂ 79 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಭೀಕರ ಪ್ರವಾಹ, ಮಳೆಗೆ ನೇಪಾಳ ಜನತೆ ತತ್ತರಿಸಿದ್ದಾರೆ.
ಭೂಕುಸಿತದಿಂದ ನಾಪತ್ತೆಯಾದ ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ರಾಜಧಾನಿ ಕಠ್ಮಂಡು ಸೇರಿದಂತೆ ನೇಪಾಳದ ಹಲವೆಡೆ
ಭಾರಿ ಮಳೆ, ಪ್ರವಾಹದಿಂದ ಇಡೀ ಊರುಗಳು ಜಲಾವೃತಗೊಂಡಿವೆ. ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಜನರನ್ನು ರಕ್ಷಣಾಪಡೆಗಳು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ.
ಶನಿವಾರ ಹೆಲಿಕಾಪ್ಟರ್ಗಳು ಮತ್ತು ಮೋಟಾರ್ ಬೋಟ್ಗಳೊಂದಿಗೆ 3,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಗಳನ್ನು ಮಾಡಿ ಅನೇಕರನ್ನು ರಕ್ಷಿಸಿದ್ದಾರೆ.
‘ನಿರಂತರ ಮಳೆಯಿಂದಾಗಿ 112 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ 34 ಮಂದಿ ಕಠ್ಮಂಡು ಕಣಿವೆಯಲ್ಲಿಯೇ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ’ ಎಂದು ತಿಳಿದುಬಂದಿದೆ. ಪ್ರವಾಹದಲ್ಲಿ ಒಟ್ಟು 79 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ದೇಶದಾದ್ಯಂತ 44 ಸ್ಥಳಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.ಕಠ್ಮಂಡುವಿನಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 3,000 ಭದ್ರತಾ ಸಿಬ್ಬಂದಿಯ ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.