ಕಲ್ಲಪಳ್ಳಿ:ಕಾಡಾನೆ ಹಾವಳಿ ತೀವ್ರಗೊಂಡಿರುವ ಗಡಿ ಪ್ರದೇಶ ಕಲ್ಲಪಳ್ಳಿಗೆ ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಹಾಗು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲಪಳ್ಳಿಯಲ್ಲಿ ಕಾಡಾನೆ ಹಾವಳಿಯಿಂದ ಕೃಷಿಕರು ಅನುಭವಿಸುವ ಕಷ್ಟ ನಷ್ಟಗಳಿಗೆ ಶಾಶ್ವತ ಪರಿಹಾರ
ಒದಗಿಸಬೇಕು ಎಂದು ಕಲ್ಲಪಳ್ಳಿಯ ವನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಎನ್.ಕೆ ಜಯಪ್ರಕಾಶ್ ಮತ್ತು ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ ಅರುಣ್ ರಂಗತ್ತಮಲೆ ಇವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮನವಿ ನೀಡಿದ್ದರು.ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗು ಡಿಎಫ್ಒ ನೇತೃತ್ವದ ತಂಡ ಕಲ್ಲಪಳ್ಳಿ, ಕಮ್ಮಾಡಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಾಡಿಕೊಚ್ಚಿ ರಂಗತ್ತಮಲೆ ಅರಣ್ಯದ ಅಂಚಿನಲ್ಲಿರುವ ಸೋಲಾರ್ ಬೇಲಿಯನ್ನು ದುರಸ್ತಿ ಮಾಡಲು, ಕಲ್ಲಪ್ಪಳ್ಳಿ-ಮಾಂಬಳ-ಕಮ್ಮಾಡಿ ಭಾಗದಲ್ಲಿ ಟೆಂಡರ್ ಪೂರ್ತಿಯಾದ ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭಿಸಲು ಮತ್ತು ಈ ಸೋಲಾರ್ ಬೇಲಿಯನ್ನು, ನಿರ್ವಹಣೆ ಮಾಡಲು ಗ್ರಾಮ ಪಂಚಾಯಿತ್ನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.
ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಘುನಾಥ್, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಒಕ್ಲಾವ್ ಕೃಷ್ಣನ್,ಪನತ್ತಡಿ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರದೀಶ್ , ಕಾಸರಗೋಡು ಡಿಎಫ್ಒ ಜೋಸೆಫ್ ಮ್ಯಾಥ್ಯೂ, ಕಾಞಂಗಾಡ್ ಆರ್ಎಫ್ಒ ರಾಹುಲ್ ಕೆ, ಫಾರೆಸ್ಟರ್ ರಾಜು ಯಂ.ಪಿ , ಅರಣ್ಯ ಇಲಾಖೆ ಸಿಬ್ಬಂದಿಗಳು,ವನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಎನ್.ಕೆ ಜಯಪ್ರಕಾಶ್, ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ ಅರುಣ್ ರಂಗತ್ತಮಲೆ ಹಾಗೂ ಊರಿನ ಪ್ರಮುಖರು, ಕೃಷಿಕರು ಉಪಸ್ಥಿತರಿದ್ದರು.






