ಕೋಲ್ಕತಾ: ಲಕ್ನೊ ಸೂಪರ್ ಜೈಂಟ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 1 ರನ್ ಅಂತರದಿಂದ ರೋಚಕವಾಗಿ ಸೋಲಿಸಿ ಐಪಿಎಲ್ ಟೂರ್ನಿಯ ಪ್ಲೇ ಆಫ್ಗೆ ಪ್ರವೇಶ ಪಡೆದಿದೆ. ಈ ಗೆಲುವಿನ ಮೂಲಕ 14 ಪಂದ್ಯಗಳಲ್ಲಿ 8ನೇ ಗೆಲುವು ದಾಖಲಿಸಿದ ಲಕ್ನೊ ಒಟ್ಟು 17 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಪ್ಲೇ ಆಫ್ಗೆ ಪ್ರವೇಶ ಗಿಟ್ಟಿಸಿಕೊಂಡಿತು.ಟಾಸ್ ಜಯಿಸಿದ ಕೆಕೆಆರ್ ತಂಡ ಲಕ್ನೊವನ್ನು
ಮೊದಲು ಬ್ಯಾಟಿಂಗ್ಗೆ ಇಳಿಸಿತು. ಲಕ್ನೊ ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್ ನಿಕೊಲಸ್ ಪೂರನ್ ಅರ್ಧಶತಕದ ಕೊಡುಗೆಯ(58 ರನ್, 30 ಎಸೆತ, 4 ಬೌಂಡರಿ, 5 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 176 ರನ್ ಗಳಿಸಿತು. ಗೆಲ್ಲಲು 177 ರನ್ ಗುರಿ ಬೆನ್ನಟ್ಟಿದ ಕೆಕೆಆರ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ 1 ರನ್ನಿಂದ ರೋಚಕವಾಗಿ ಸೋಲುಂಡಿತು.
ಕೆಕೆಆರ್ ಪರ ರಿಂಕು ಸಿಂಗ್ ಅಬ್ಬರದ ಬ್ಯಾಟಿಂಗ್(ಔಟಾಗದೆ 67 ರನ್,33 ಎಸೆತ 6 ಬೌಂಡರಿ, 4 ಸಿಕ್ಸರ್)ನಿಂದಾಗಿ ಕೆಕೆಆರ್ ಗೆಲುವಿನ ಸನಿಹ ಬಂದರೂ ಒಂದು ರನ್ ಅಂತರದ ಸೋಲನುಭವಿಸಿತು. ಆರಂಭಿಕ ಬ್ಯಾಟರ್ ಜೇಸನ್ ರಾಯ್(45 ರನ್, 28 ಎಸೆತ) ಹಾಗೂ ವೆಂಕಟೇಶ್ ಅಯ್ಯರ್(24 ರನ್, 15 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಲಕ್ನೊದ ಪರ ರವಿ ಬಿಷ್ಣೋಯ್(2-23)ಹಾಗೂ ಯಶ್ ಠಾಕೂರ್(2-12) ಯಶಸ್ವಿ ಪ್ರದರ್ಶನ ನೀಡಿದರು.ಇದಕ್ಕೂ ಮುನ್ನ 6ನೇ ವಿಕೆಟ್ಗೆ 74 ರನ್ ಜೊತೆಯಾಟ ನಡೆಸಿದ ನಿಕೋಲಾಸ್ ಪೂರನ್ ಹಾಗೂ ಆಯುಷ್ ಬದೋನಿ(25 ರನ್, 21 ಎಸೆತ) ತಂಡವನ್ನು ಗೌರವಾರ್ಹ ಮೊತ್ತದತ್ತ
ಕೊಂಡೊಯ್ದರು. ಕ್ವಿಂಟನ್ ಡಿಕಾಕ್(28 ರನ್, 27 ಎಸೆತ) ಹಾಗೂ ಪ್ರೇರಕ್ ಮಂಕಡ್(26 ರನ್, 20 ಎಸೆತ) ತಂಡವನ್ನು ಆಧರಿಸಿದರು. ಆದರೆ, ಆ ನಂತರ ತಂಡ ದಿಢೀರ್ ಕುಸಿತ ಕಂಡಿತು. ನಾಯಕ ಕೃನಾಲ್ ಪಾಂಡ್ಯ ಕೇವಲ 9 ರನ್ ಗಳಿಸಿ ಸುನೀಲ್ ನರೇನ್ಗೆ ವಿಕೆಟ್ ಒಪ್ಪಿಸಿದರು. ಮಾರ್ಕಸ್ ಸ್ಟೋನಿಸ್(0) ರನ್ ಖಾತೆ ತೆರೆಯುವಲ್ಲಿಯೂ ವಿಫಲರಾದರು. ಕೃಷ್ಣಪ್ಪ ಗೌತಮ್ ಔಟಾಗದೆ 11 ರನ್(4 ಎಸೆತ)ಗಳಿಸಿದರು.
ಕೆಕೆಆರ್ ಬೌಲಿಂಗ್ನಲ್ಲಿ ಶಾರ್ದೂಲ್ ಠಾಕೂರ್(2-27), ಸುನೀಲ್ ನರೇನ್(2-28) ಹಾಗೂ ವೈಭವ್ ಅರೋರ(2-30) ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.