ನವದೆಹಲಿ: ಗೃಹೋಪಯೋಗಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರವು 200 ರಷ್ಟು ತಗ್ಗಿಸಿದೆ. ಪರಿಷ್ಕೃತ ಬೆಲೆಯು ಬುಧವಾರದಿಂದ ಅನ್ವಯವಾಗಲಿದೆ. ಕೇಂದ್ರದ ಈ ತೀರ್ಮಾನವನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಜನರಿಗೆ
ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕೇಂದ್ರವು ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಅಡಿಯಲ್ಲಿ ಹೆಚ್ಚುವರಿಯಾಗಿ 75 ಲಕ್ಷ ಎಲ್ಪಿಜಿ ಸಂಪರ್ಕ ಕಲ್ಪಿಸಲಿದೆ. ಆಗ ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯು 10.35 ಕೋಟಿ ಆಗಲಿದೆ.ಅಡುಗೆ ಅನಿಲದ ಬೆಲೆಯು ಮೂರು ವರ್ಷಗಳಿಂದ ಈಚೆಗೆ ಭಾರಿ ಏರಿಕೆ ಕಂಡಿದೆ. ಓಣಂ ಹಾಗೂ ರಕ್ಷಾ ಬಂಧನದ ಪ್ರಯುಕ್ತ ದೇಶದ ಮಹಿಳೆಯರಿಗೆ ಉಡುಗೊರೆಯ ರೂಪದಲ್ಲಿ ಬೆಲೆ ಕಡಿತದ ನಿರ್ಧಾರವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಠಾಕೂರ್ ಹೇಳಿದ್ದಾರೆ.