ಕೊಚ್ಚಿ:ವಾತ್ಸಲ್ಯ ಪೂರಿತ ಅಮ್ಮ ಪಾತ್ರಗಳ ಮೂಲಕ ಮಲೆಯಾಳಿ ಚಲನಚಿತ್ರ ಪ್ರೇಕ್ಷಕರ ಹೃದಯ ಗೆದ್ದ ಕವಿಯೂರ್ ಪೊನ್ನಮ್ಮ (80) ನಿಧನರಾಗಿದ್ದಾರೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಇಂದು ಕೊನೆಯುಸಿರೆಳೆದರು. ಗಾಯಕಿಯಾಗಿ ಕಲಾಜೀವನ ಆರಂಭಿಸಿ ರಂಗಭೂಮಿ ಮೂಲಕ ಅಭಿನೇತ್ರಿಯಾಗಿ ಚಿತ್ರರಂಗಕ್ಕೆ ಬಂದ ಪೊನ್ನಮ್ಮ
ಸತ್ಯನ್, ಮಧು, ಪ್ರೇಮ್ ನಸೀರ್, ಸೋಮನ್, ಸುಕುಮಾರನ್, ಮಮ್ಮುಟ್ಟಿ, ಮೋಹನ್ಲಾಲ್, ಸುರೇಶ್ಗೋಪಿ, ಜಯರಾಂ ಸೇರಿದಂತೆ ಎಲ್ಲಾ ಪ್ರಮುಖ ಕಲಾವಿದರ ಜೊತೆ ಅಮ್ಮ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ವಿಭಿನ್ನ ಪಾತ್ರಗಳ ಮೂಲಕ ಒಂದು ಸಾವಿರದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅತ್ಯುತ್ತಮ ಸಹನಟಿಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ ನಾಲ್ಕು ಬಾರಿ ಪಡೆದಿದ್ದರು. ಚಲನಚಿತ್ರ ನಿರ್ಮಾಪಕ ಹಾಗೂ
ನಿರ್ದೇಶಕರಾಗಿದ್ದ ದಿ.ಮಣಿಸ್ವಾಮಿ ಪತಿ. ಮಗಳು ಬಿಂದು. ಅಳಿಯ ವೆಂಕಟರಾಮ್.1944 ಜನವರಿ 6 ರಂದು ಪೊನ್ನಮ್ಮ ಜನಿಸಿದರು.ಎಂ.ಎಸ್. ಸುಬ್ಬಲಕ್ಷ್ಮಿಯಂತೆ ದೊಡ್ಡ ಹಾಡುಗಾರ್ತಿಯಾಗಬೇಕು ಎಂದು ಕನಸು ಕಂಡಿದ್ದರು.
ಹನ್ನೆರಡು ವರ್ಷ ಇರುವಾಗ, ಸಂಗೀತ ನಿರ್ದೇಶಕ ಜಿ.ದೇವರಾಜನ್ ಅವರ ನಾಟಕದಲ್ಲಿ ಹಾಡಲು ಪೊನ್ನಮ್ಮ ಅವರನ್ನು ಆಹ್ವಾನಿಸಿದರು. ತೊಪ್ಪಿಲ್ ಭಾಸಿಯ ‘ಮೂಲಧನ’ದಲ್ಲಿ ಮೊದಲ ಬಾರಿಗೆ ಹಾಡಿದರು. ನಂತರ ಅದೇ ನಾಟಕದಲ್ಲಿ ನಾಯಕಿ ಸಿಗದೆ ಬಂದಾಗ ಭಾಸಿಯ ಒತ್ತಾಯದಿಂದ ನಾಯಕಿಯಾಗಬೇಕಾಯಿತು. ನಂತರ ಕೆಪಿಎಸಿಯ ಪ್ರಮುಖ ನಟಿಯಾದ ಪೊನ್ನಮ್ಮ ಪ್ರತಿಭಾ ಕಲಾಕೇಂದ್ರ, ಕಾಳಿದಾಸ ಕಲಾಕೇಂದ್ರಂ ಮುಂತಾದವರು
ನಾಟಕ ತಂಡಗಳಲ್ಲಿ ಕಾರ್ಯನಿರ್ವಹಿಸಿದರು. ಕುಟುಂಬಿನಿ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಅಮ್ಮನ ಪಾತ್ರದಲ್ಲಿ ಅಭಿನಯಿಸಿದರು. ತೊಮ್ಮನ್ ಮಕ್ಕಳು ಎಂಬ ಚಿತ್ರದಲ್ಲಿ ಸತ್ಯನ್, ಮಧು ಅವರ ಅಮ್ಮನಾಗಿ ನಟಿಸಿದರು. ಪಿ.ಎನ್.ಮೆನನ್, ವಿನ್ಸೆಂಟ್, ಎಂ.ಟಿ.ವಾಸುದೇವನ್ ನಾಯರ್, ರಾಮು ಕಾರ್ಯಾಟ್, ಕೆ.ಎಸ್.ಸೇತುಮಾಧವನ್, ಅಡೂರ್ ಗೋಪಾಲಕೃಷ್ಣನ್, ಜಾನ್ ಎಬ್ರಹಾಂ, ಪದ್ಮರಾಜನ್, ಮೋಹನ್ ಮೊದಲಾದವರು ಪ್ರಮುಖ ನಿರ್ದೇಶಕರ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅಸುರವಿತ್ತ್, ಕ್ರೋಸ್ ಬೆಲ್ಟ್, ಕರಕಾಣಾಕ್ಕಡಲ್, ತೀರ್ಥಯಾತ್ರೆ, ನಿರ್ಮಾಲ್ಯಂ, ನೆಲ್ಲ್, ಕೊಡಿಯಾಟಂ, ಓವಿನ್, ಕರಿಂಪನ, ಸೋಮವಾರ ದಿನ, ತ್ರಿವೇಣಿ, ನಿಝಾಲಾಟ್ಟಂ, ತನಿಯಾವರ್ತನಂ, ಹಿಸ್ ಹೈನಸ್ ಅಬ್ದುಲ್ಲ, ಕಿರೀಡಂ, ಚೆಂಕೋಲ್, ಭರತಂ ಸೇರಿದಂತೆ ನೂರಾರು ಚಿತ್ರಗಳಲ್ಲಿ ಅಮ್ಮನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಂಟು ಸಿನಿಮಾಗಳಲ್ಲಿ ಹಾಡಿದ್ದಾರೆ.ಇಪ್ಪತ್ತಕ್ಕೂ ಹೆಚ್ಚು ಟೆಲಿವಿಷನ್ ಸೀರಿಯಲ್ಗಳಲ್ಲಿ ನಟಿಸಿದ್ದಾರೆ.