ಸುಳ್ಯ:ಸುಳ್ಯ ತಾಲೂಕಿನ ಕನಕಮಜಲು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಆನೆ ಹಾವಳಿ ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕಾಡುಪ್ರಾಣಿಗಳ ಹಾವಳಿಯ ವಿರುದ್ಧ ಹೋರಾಟ ಸಮಿತಿಯ ನೇತೃತ್ವದಲ್ಲಿ ಗ್ರಾಮದ ಕೃಷಿಕರು ಆಗ್ರಹಿಸಿದ್ದಾರೆ. ಅಡ್ಕಾರಿನಲ್ಲಿರುವ ಪುತ್ತೂರು ವಲಯದ ಜಾಲ್ಸೂರು ಶಾಖೆಯ ಉಪವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಕೃಷಿಕರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆನೆ ಹಾವಳಿ ತಡೆಯಲು
ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಗ್ರಾಮಸ್ಥರು ಹಾಗೂ ಕೃಷಿಕರು ತೀವ್ರ ಆತಂಕಕ್ಕೆ ಮತ್ತು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಅಡಿಕೆ, ತೆಂಗು, ಬಾಳೆ, ರಬ್ಬರ್ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸುತ್ತಿವೆ.ಇದರಿಂದ ಕೃಷಿಕರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.ಆನೆಗಳು ಮನೆಗಳ ಸಮೀಪ ಹಾಗೂ ಜನವಸತಿ ಪ್ರದೇಶಗಳಿಗೆ ಬರುತ್ತಿರುವುದರಿಂದ ಗ್ರಾಮಸ್ಥರ ಜೀವಕ್ಕೂ ಅಪಾಯ ಎದುರಾಗುವ ಆತಂಕ ಇದೆ. ಆದುದರಿಂದ

ಗ್ರಾಮದ ಕೃಷಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ತಕ್ಷಣ ಸುರಕ್ಷಿತವಾಗಿ ಕಾಡಿನತ್ತ ಅಟ್ಟಬೇಕು, ಆನೆಗಳ ಚಲನ ವಲನ ನಿರೀಕ್ಷಿಸಲು ಅರಣ್ಯ ಇಲಾಖೆಯಿಂದ ವಿಶೇಷ ಗಸ್ತು ತಂಡವನ್ನು ನಿಯೋಜಿಸಬೇಕು. ಆನೆಗಳು ಗ್ರಾಮಕ್ಕೆ ಪ್ರವೇಶಿಸುವ ಮಾರ್ಗಗಳನ್ನು ಗುರುತಿಸಿ, ಅಲ್ಲಿ ಸೋಲಾರ್ ಬೇಲಿ,ಆನೆ ತಡೆ ಕಂದಕ ಹಾಗೂ ಇತರ ಶಾಶ್ವತ ತಡೆ ವ್ಯವಸ್ಥೆಗಳನ್ನು ನಿರ್ಮಿಸಬೇಕು.ಆನೆಗಳ ಹಾವಳಿಯಿಂದ ಹಾನಿಗೊಳಗಾದ ಬೆಳೆಹಾನಿಗೆ ಸೂಕ್ತ ಪರಿಹಾರವನ್ನು ಶೀಘ್ರವಾಗಿ ನೀಡಬೇಕು. ಆನೆ ಹಾವಳಿ ಮರುಕಳಿಸದಂತೆ ಶಾಶ್ವತ ಪರಿಹಾರ ಯೋಜನೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ ಮಾತನಾಡಿ ‘ ಕಾಡಾನೆ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಲಾಗುವುದು.ಈಗಾಗಲೇ ನಿರ್ಮಾಣ ಮಾಡಿರುವ ಸೋಲಾರ್ ಬೇಲಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು. ಅರಣ್ಯದಂಚಿನಲ್ಲಿ ಅಗತ್ಯ ಇರುವ ಕಡೆ

ಆನೆ ಕಂದಕಗಳನ್ನು ನಿರ್ಮಾಣ ಮಾಡಲಾಗುವುದು. ಕೃಷಿಕರೇ ಸೋಲಾರ್ ಬೇಲಿ ನಿರ್ಮಾಣ ಮಾಡಲು ಶೆ.50ರಷ್ಟು ಸಬ್ಸಿಡಿ ನೀಡಲಾಗುತಿದೆ. ಸಬ್ಸಿಡಿಯನ್ನು ಶೇ.90ಕ್ಕೆ ಏರಿಸಬೇಕು ಎಂಬ ಕೃಷಿಕರ ಬೇಡಿಕೆಯನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದೆ ಎಂದರು.
ಕಾಡಾನೆ ಹಾವಳಿ ತಡೆಗೆ ಸೂಕ್ತ ಪರಿಹಾರ ದೊರಕುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ಹೋರಾಟ ಸಮಿತಿಯ ಪ್ರಮುಖರು ಹೇಳಿದ್ದಾರೆ.ಪ್ರಮುಖರಾದ ಎಸ್.ಎನ್.ಮನ್ಮಥ, ಹರೀಶ್ ಮೂರ್ಜೆ, ಸತೀಶ್ ಕೆಮನಬಳ್ಳಿ,ಬಾಲಕೃಷ್ಣ ಕೀಲಾಡಿ, ಶ್ರೀಧರ ಕುತ್ಯಾಳ, ವಸಂತ ಗಬ್ಬಲಡ್ಕ, ರಾಧಾಕೃಷ್ಣ ಪಿ.ಎಂ., ವಿಜಯಕುಮಾರ್ ನರಿಯೂರು, ಪುರುಷೋತ್ತಮ ನಂಗಾರು, ಮಹಮ್ಮದ್ ಫವಾಝ್, ನಾರಾಯಣ ಗೌಡ ಬೊಮ್ಮೆಟ್ಟಿ, ಜಯರಾಮ ರೈ ಜಾಲ್ಸೂರು,ಶೇಖರ ಮಡ್ತಿಲ, ಶಾಂತಾರಾಮ ಕಣಿಲೆಗುಂಡಿ, ಅನಂತ ಖಂಡಿಗೆಮೂಲೆ, ಮಹೇಶ್ ಜಬಳೆ, ಸುಧೀರ್ ಜಬಳೆ, ಗಣೇಶ್ ಕಜೆಗದ್ದೆ, ಈಶ್ವರ ಕೊರಂಬಡ್ಕ, ದಿನೇಶ್ ರಾವ್ ಹೇಮಂತ್ ಮಠ, ಮನೋಜ್ ನರಿಯೂರು,ದುಗ್ಗಪ್ಪ ಮಾಸ್ತರ್,ಮೋಹನ್ ನಂಗಾರು,ಭಾಸ್ಕರ ನರಿಯೂರು,ಆನಂದ ಮಾಸ್ತರ್ ಅಕ್ಕಿಮಲೆ, ತೇಜಪ್ರಸಾದ್ ಬುಡ್ಲೆಗುತ್ತು, ತಿಲೋತ್ತಮ ಕೊಲ್ಲಂತ್ತಡ್ಕ, ಜಯಪ್ರಸಾದ್ ಕಾರಿಂಜ, ಸುರೇಶ್ ಕುದ್ಕುಳಿ, ಗಣಪತಿ ಭಟ್ ಕುದ್ಕುಳಿ, ಪ್ರಶಾಂತ್ ಅಕ್ಕಿಮಲೆ, ಹೇಮಚಂದ್ರ ಕದಿಕಡ್ಕ, ವೆಂಕಪ್ಪ ನಾಯ್ಕ್ ದೇರ್ಕಜೆ, ಗಂಗಾಧರ ಕನಕಮಜಲು, ಸುನಿಲ್ ಅಕ್ಕಿಮಲೆ, ಪ್ರದೀಪ್ ಕಾಪಿಲ, ಮುರಳೀಧರ ಕೆಮನಬಳ್ಳಿ, ಅಶ್ರಫ್ ಪಂಜಿಗುಂಡಿ, ನೇಮಿಚಂದ್ರ ಬಾಳಾಜೆ, ಸಂದೀಪ್ ಕದಿಕಡ್ಕ,ಬಾಲಸುಬ್ರಹ್ಮಣ್ಯ ಭಟ್ ಕೆಮನಬಳ್ಳಿ, ರಾಮಕೃಷ್ಣ ಭಟ್ ಕೆಮನಬಳ್ಳಿ, ದಿವಾಕರ ಭಟ್ ಕೆಮನಬಳ್ಳಿ,ಉದಯ ಬಾಳಾಜೆ, ಉಮಾನಾಥ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.









