ಬಂಟ್ವಾಳ:ಸುಡುವ ಬಿಸಿಲಿನ ಕುದಿವ ಶಾಖಕ್ಕೆ ಕಾರಿಂಜ ಬೆಟ್ಟದ ಬೃಹತ್ ಬಂಡೆಯನ್ನು ಓತಿಯಂತೆ ಸರಸರನೆ ಏರುವ ಮೂಲಕ ಕರ್ನಾಟಕದ ಸ್ಪೈಡರ್ ಮೇನ್ ಎಂದೇ ಖ್ಯಾತಿ ಪಡೆದ ಜ್ಯೋತಿರಾಜ್ ದಾಖಲೆ ಬರೆದರು. ಸುಡುಬಿಸಿಲನ್ನೂ ಲೆಕ್ಕಿಸದೇ ಅನಾಯಾಸವಾಗಿ ಬಂಡೆಯ ಮೇಲೇರುತ್ತಲೇ ನಡೆದ ಅವರ ಅಸಾಮಾನ್ಯ ಸಾಧನೆ ಕಂಡು ವೀಕ್ಷಿಸಲು ನೆರೆದಿದ್ದ
ನೂರಾರು ಮಂದಿ ಮೂಕ ವಿಸ್ಮಿತರಾದರು.
ತುಳುನಾಡಿನ ಅತ್ಯಂತ ಪ್ರಾಚೀನ ಕ್ಷೇತ್ರವಾದ ಕಾರಿಂಜ ದೇವಾಲಯವು ಸಮುದ್ರಮಟ್ಟಕ್ಕಿಂತ 1200 ಅಡಿ ಎತ್ತರದಲ್ಲಿದೆ. 800ಅಡಿಗಳ ಎತ್ತರದಲ್ಲಿ ಏಕ ಶಿಲೆಯ ಮೇಲೆ ಶೋಭಿಸುವ ಶಿವಾಲಯ ದ ಸುತ್ತಲೂ ಬೃಹದಾಕಾರದ ಬಂಡೆಗಳಿವೆ. ಈ ಬಂಡೆಯ ಬೆಟ್ಟವನ್ನು ಈ ವರೆಗೂ ಏರಿದವರಿಲ್ಲ ಎಂದೇ ಪ್ರತೀತಿ.ಆದರೆ ಈ ಬಂಡೆಯನ್ನೇರುವ ಸವಾಲು ಹಾಕಿದ್ದ ಜ್ಯೋತಿರಾಜ್ ಮಾ.23ರಂದು ಬೆಳಿಗ್ಗೆ 10ಗಂಟೆಗೆ ಬಂಡೆಯನ್ನೇರುವೆನೆಂದು ಘೋಷಿಸಿದ್ದರು. ಇದರಂತೆ ನಾನಾ ದಿಕ್ಕಿನಿಂದ ಇದನ್ನು ನೋಡಲೆಂದೇ ಜನರು ಬಂದಿದ್ದರು. ಸಾರ್ವಜನಿಕರ ಸಮ್ಮುಖ ಆರಂಭದಲ್ಲಿ ರೋಪ್ ಸಹಾಯದಿಂದ ಮೇಲೇರಿದ ಅವರು ಬಳಿಕ ಬರಿಗೈಯಲ್ಲಿ ಸಾಹಸ ಮೆರೆದು ಜನರಿಗೆ ರೋಮಾಂಚಕ ಅನುಭವ ನೀಡಿದರು. 10ಗಂಟೆಗೆ ಏರಲು ಆರಂಭಿಸಿದ ಅವರು ಅರ್ಧ ಗಂಟೆಯಲ್ಲಿ 350 ಮೀ. ಎತ್ತರವನ್ನು ನಿರಾಯಾಸವಾಗಿ ಏರಿ ಕಾರಿಂಜೇಶ್ವರನ ದರ್ಶನಭಾಗ್ಯ ಪಡೆದರು.
ಬೆಟ್ಟದ ಕೆಳಗೆ ನರು ಅವರನ್ನು ಹರಸಿ ಹಾರೈಸಿದ್ದರು. ಮೇಲೇರಿದ ಬಳಿಕ ಅವರು ಕೇಸರಿ ಧ್ವಜದೊಂದಿಗೆ ಕನ್ನಡ ಬಾವುಟವನ್ನೂ ಹಿಡಿದು ಸಂಭ್ರಮಿಸಿದರು. ಬಳಿಕ ದೇವಾಲಯದ,ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.