ಚಿತ್ರಗಳು: ಪರಮ್ ಡಿಜಿಟಲ್ಸ್.
ಸುಳ್ಯ: ಬಿಜೆಪಿಯ ಪವರ್ ಇಂಜಿನ್ ಸರಕಾರದಿಂದ ಮಾತ್ರ ಕರ್ನಾಟಕ ರಾಜ್ಯದ ಅಭಿವೃದ್ಧಿ ಸಾಧ್ಯ. ಬಿಜೆಪಿಯ ಡಬಲ್ ಇಂಜಿನ್ ಸರಕಾರ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದರೆ, ಅಭಿವೃದ್ಧಿಯನ್ನು ತಡೆಯುವ ‘ರಿವರ್ಸ್ ಗಿಯರ್ ಇಂಜಿನ್’ ನೀತಿಯನ್ನು ಕಾಂಗ್ರೆಸ್ ಅನುಸರಿಸುತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಬಿಜೆಪಿಯ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು
ಮಾತನಾಡಿದರು.ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಶಕ್ತಿ ಏನೆಂಬುದನ್ನು ಜಗತ್ತಿಗೆ ತಿಳಿಯಿತು. ಅಭಿವೃದ್ಧಿ ಏನೆಂಬುದನ್ನು ದೇಶದ ಜನತೆ ಅರ್ಥ ಮಾಡಿಕೊಂಡರು. ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಕೇಂದ್ರ ಹಾಗು ರಾಜ್ಯ ಸರಕಾರದಿಂದ ಸಾಧ್ಯವಾಗಿದೆ.ರಸ್ತೆ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ ನೀಡಲಾಗಿದೆ, ತುಂಕೂರಿನಲ್ಲಿ ಹೆಲಿಕಾಪ್ಟರ್ ನಿರ್ಮಾಣ ಫ್ಯಾಕ್ಟರಿ, ಕೈಗಾರಿಕಾ ಕಾರಿಡಾರ್, ಬೆಳಗಾವಿಯಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ಸೇರಿದಂತೆ ಹಲವು ಬೃಹತ್ ಯೋಜನೆಗಳನ್ನು ತಂದು ರಾಜ್ಯವನ್ನು ಅಭಿವೃದ್ಧಿ ದಿಸೆಯಲ್ಲಿ ಮುನ್ನಡೆಸಿದೆ. ಕಿಸಾನ್ ಸಮ್ಮಾನ್ ಯೋಜನೆ, ಗರೀಬ್ ಕಲ್ಯಾಣ್ ಯೋಜನೆ, ಆಯುಷ್ಮಾನ್ ಭಾರತ್ ಸೇರಿದಂತೆ ಹಲವಾರು ಯೋಜನೆಗಳನ್ನು
ಕೃಷಿಕರಿಗಾಗಿ, ಜನ ಸಾಮಾನ್ಯರಿಗಾಗಿ ಸರಕಾರ ಅನುಷ್ಠಾನ ಮಾಡಿದೆ. ಈ ಮೂಲಕ ಅಭಿವೃದ್ಧಿಯ ಜೊತೆಗೆ ಹತ್ತಾರು ಯೋಜನೆಗಳು ಜನ ಸಾಮಾನ್ಯರನ್ನು ತಲುಪಿದೆ ಎಂದ ಅವರು ರಾಜ್ಯದ 65 ಲಕ್ಷ ಮಂದಿಗೆ ತಲಾ 5 ಲಕ್ಷ ರೂಗಳ ಆಯುಷ್ಮಾನ್ ಯೋಜನೆ ಸಿಕ್ಕಿದೆ ಎಂದು ಉದಾಹರಿಸಿದರು. ರಾಜ್ಯದ, ದೇಶದ ಸಮಗ್ರ ಅಭಿವೃದ್ಧಿ ನಡೆದಿದೆ. ರಾಜ್ಯದ ಭವಿಷ್ಯ ನಿರ್ಣಯಿಸುವ ಚುನಾವಣೆ ಇದಾಗಿದ್ದು ಸರ್ವ ಜನರ ಏಳಿಗೆಗೆ,ರಾಜ್ಯದ ವಿಕಾಸಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲಾ ಎಂದ ನಡ್ಡಾ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಹತ್ತಾರು ಹಗರಣಗಳ ಸರಮಾಲೆಯೇ ನಡೆದಿದೆ ನಡೆದಿದೆ ಎಂದು ಆರೋಪಿಸಿದರು.
ಸುಳ್ಯದ ಹಾಗು ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ಮತ್ತು ಅಭಿವೃದ್ಧಿ ಹೊಂದಿದ ಶಾಂತಿ ನೆಮ್ಮದಿಯ ನಾಡಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು, ಭಾಗೀರಥಿ ಮುರುಳ್ಯ ಅವರನ್ನು ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಬಂಟ್ವಾಳ್, ಕಾರ್ಯದರ್ಶಿ ಮುಳಿಯ ಕೇಶವ ಭಟ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ,
ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಭಾರಿ ಹರಿದಾಸ್ ಕಣ್ಣೂರು, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುರುದತ್ ನಾಯಕ್, ಯುವ ಮೋರ್ಚಾ ಮಂಡಲ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್. ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.
ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.