*ಎಂ.ನಾ.ಚಂಬಲ್ತಿಮಾರ್.
ಚಂದ್ರಯಾನ -3 ಎಂಬ ಭಾರತೀಯರ ವೈಜ್ಞಾನಿಕ ವಿಜಯ ವಿಕ್ರಮದ ಸಾರಥಿ, ಇಸ್ರೋ ಮುಖ್ಯಸ್ಥರು ಕೇರಳದ ಸೋಮನಾಥನ್.
ಅವರ ಪೂರ್ಣಹೆಸರು ಶ್ರೀಧರ ಪಣಿಕ್ಕರ್ ಸೋಮನಾಥನ್.
ಮೊನ್ನೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ದ. ಆಫ್ರಿಕಾದಿಂದ ಅವರಿಗೆ ಕರೆ ಮಾಡಿ ಸಂತಸದ ಅಭಿನಂಧನೆ ತಿಳಿಸಿದ್ದರು. ವಿಜ್ಞಾನಿಗಳ ಸಮರ್ಪಣೆಯ ದುಡಿಮೆಗೆ, ಪ್ರತಿಭೆಗೆ ಸಂದ ಗೆಲುವನ್ನು ಕೊಂಡಾಡಿ
ನಿಮ್ಮೆಲ್ಲರನ್ನು ಅಭಿನಂಧಿಸಲು ಬೆಂಗಳೂರಿಗೆ ನಾನೇ ಬರುತ್ತೇನೆಂದೂ ಮೋದಿ ತಿಳಿಸಿದ್ದರು.ಅದೂ ಹೇಳಿದ್ದು ಹೀಗೆ…
“ಸೋಮನಾಥ್ ಜೀ..
ನಿಮ್ಮ ಹೆಸರೂ ಸೋಮನಾಥ್. ಅಂದರೆ ಚಂದ್ರನ ಹೆಸರೇ.
ನಿಮಗೆ, ನಿಮ್ಮ ತಂಡಕ್ಕೆ ನಮೋ ನಮಃ… “
ಸೋಮನಾಥ್ ಕೇರಳದ ಅಪ್ಪಟ ಸಂಸ್ಕಾರಯುತ ಕುಟುಂಬದವರು.
ಅವರ ಆಲಪ್ಪುಯ ಜಿಲ್ಲೆಯ ಆರೂರ್ ಎಂಬ ಊರಿನವರು.
ಚಂದ್ರಯಾನ -2 ಎಂಬ ಸೋಲನ್ನು ಗೆಲುವಾಗಿಸಿದವರು.
ಗೇಲಿ, ವ್ಯಂಗ್ಯ ಗಳ ನಡುವೆಯೇ ಚಂದ್ರಯಾನವನ್ನು ಚರಿತ್ರೆಯಾಗಿಸಿದ ಮಹಾರಥಿ. ಭಾರತಾಂಬೆಯ ಮುಡಿಗೆ ಕೀರ್ತಿ ಕಿರೀಟ ತೊಡಿಸಿದ ಸಾರಥಿ.
ಚಂದ್ರಯಾನ -2 ಅಂತಿಮ ಹಂತದಲ್ಲಿ ವಿಫಲವಾದಾಗ ಇಸ್ರೋ ಮುಖ್ಯಸ್ಥ ಶಿವನ್ ಪ್ರಧಾನಮಂತ್ರಿಯವರ ಎದುರಲ್ಲೇ ಕಣ್ಣೀರಿಟ್ಟದ್ದನ್ನು ನಾವೆಲ್ಲ ಕಂಡಿದ್ದೇವೆ.. 2022ರಲ್ಲಿ ಅದೇ ಶಿವನ್ ನಿವೃತ್ತರಾದಾಗ ಅದೇ ಜಾಗಕ್ಕೆ ನಿಯುಕ್ತರಾದವರು ಸೋಮನಾಥನ್. ಅದಕ್ಕೂ ಮೊದಲು ಅವರು ತಿರುವನಂತಪುರದ ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರಿನ ನಿರ್ದೇಶಕರಾಗಿದ್ದರು. ವಿಜ್ಞಾನಿಯಾದರೂ ಸೋಮನಾಥನ್ ದೈವಭಕ್ತರು.
ಅವರು ಊರಿಗೆ ಬಂದರೆ ಊರಿನ ದೇವಾಲಯ, ಮೂಲಮನೆ ದೇವರಲ್ಲಿಗೆ ಬರೋದೆಲ್ಲ ವಾಡಿಕೆ. ಮಾತಾ ಅಮೃತಾನಂದಮಯೀ ಆಶ್ರಮಕ್ಕೂ ಭೇಟಿ ನೀಡುವ ಅವರು ಈಗ ಚರಿತ್ರೆ ಬರೆದಿದ್ದಾರೆ.
ಇದು ಕಡಿಮೆ ಬಜೆಟಿನಲ್ಲಿ ಭಾರತ ವಿಶ್ವ ಗೆದ್ದ ಕತೆ.
ಕೇವಲ 615 ಕೋಟಿ ವೆಚ್ಚದಲ್ಲಿ ಚಂದ್ರನ ದಕ್ಷಿಣ ಧ್ರುವದ ದುರ್ಗಮಯಾನ ಸಫಲವಾಗಿದೆ. ಇಡೀ ಜಗತ್ತಿನೆದುರು ಭಾರತ ಎದೆಯಷ್ಟೇ ಅಲ್ಲ ತಲೆ ಎತ್ತಿ ನಿಂತಿದೆ. ಇಸ್ರೋ ದಂಥ ಮಹೋನ್ನತ ಸಂಸ್ಥೆಯ,ಜಾಗತಿಕ ಶ್ರೇಷ್ಠ ಸಾಧನೆಗೆ ದೇಶಕ್ಕೆ ದೇಶವೇ ಸಂಭ್ರಮಿಸಿದೆ.
ಸ್ವತಃ ಸೋಮನಾಥನ್ ಅವರೇ ವಿಜ್ಞಾನಿಗಳೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ನಾಡಿನೆಲ್ಲಡೆ ದೀಪಾವಳಿಯ ಸಂಭ್ರಮ!
ನಮ್ಮ ಬದುಕಿನ ಕಾಲದ ಇಂಥ ಸಂಭ್ರಮದಲ್ಲಿ ನಾವೂ ಪಾಲ್ಗೊಳ್ಳದಿದ್ದರೆ ನಾವು ನಮ್ಮ ಆನಂದವನ್ನು ಅನುಭವಿಸುತ್ತಿಲ್ಲ ಎಂದೇ ಅರ್ಥ…
ಎಂ.ನಾ.ಚಂಬಲ್ತಿಮಾರ್.
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು.)