ಲಖನೌ: ಮಾರ್ಕಸ್ ಸ್ಟೊಯಿನಿಸ್ ಅಬ್ಬರದ ಬ್ಯಾಟಿಂಗ್ ಮತ್ತು ಬೌಲರ್ಗಳ ಶಿಸ್ತಿನ ದಾಳಿಯ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ಗಳ ರೋಚಕ ಜಯ ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ಲಖನೌ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 177 ರನ್ ಗಳಿಸಿತು. ಆ ಬಳಿಕ ರೋಹಿತ್ ಶರ್ಮಾ ಬಳಗವನ್ನು 5 ವಿಕೆಟ್ಗಳಿಗೆ 172 ರನ್ಗಳಿಗೆ ನಿಯಂತ್ರಿಸಿತು.ಈ ಗೆಲುವು ಕೃಣಾಲ್ ಪಾಂಡ್ಯ ಬಳಗದ ಪ್ಲೇ ಆಫ್
ಸಾಧ್ಯತೆಗೆ ಬಲ ತುಂಬಿದರೆ, ಮುಂಬೈ ತಂಡವನ್ನು ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿಸಿದೆ.ಸೊಗಸಾದ ಆಟವಾಡಿದ ಮಾರ್ಕಸ್ ಸ್ಟೊಯಿನಿಸ್ (ಅಜೇಯ 89; 47ಎ, 4X4, 6X8) ಅವರು ಲಖನೌ ತಂಡದ ಗೆಲುವಿಗೆ ಕಾರಣರಾದರು. ಅದೇ ರೀತಿ, ಕೊನೆಯ ಓವರ್ನಲ್ಲಿ ಬಿಗುವಾದ ದಾಳಿ ನಡೆಸಿದ ಮೊಹ್ಸಿನ್ ಖಾನ್ ಕೂಡಾ ಗಮನ ಸೆಳೆದರು.
ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಇಶಾನ್ ಕಿಶನ್ (59) ಮತ್ತು ರೋಹಿತ್ ಶರ್ಮಾ (37) ಮೊದಲ ವಿಕೆಟ್ಗೆ 9.4 ಓವರ್ಗಳಲ್ಲಿ 90 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.ರವಿ ಬಿಷ್ಣೋಯಿ (26ಕ್ಕೆ2) ಅವರು 13 ರನ್ ಅಂತರದಲ್ಲಿ ಇಬ್ಬರನ್ನೂ ಪೆವಿಲಿಯನ್ಗೆ ಕಳುಹಿಸಿದರು. ಸೂರ್ಯಕುಮಾರ್ ಯಾದವ್ ಬೇಗನೇ ಔಟಾದರು. ಆ ಬಳಿಕ ಲಖನೌ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಟಿಮ್ ಡೇವಿಡ್ (ಔಟಾಗದೆ 32) ಅವರು ಕೊನೆಯಲ್ಲಿ ಹೋರಾಡಿದರೂ, ಇತರ ಬ್ಯಾಟರ್ಗಳಿಂದ ಬೆಂಬಲ ದೊರೆಯಲಿಲ್ಲ. ಮುಂಬೈ ಜಯಕ್ಕೆ ಕೊನೆಯ ಎರಡು ಓವರ್ಗಳಲ್ಲಿ 30 ರನ್ಗಳು ಬೇಕಿದ್ದವು. ನವೀನ್ ಉಲ್ ಹಕ್ ಬೌಲ್ ಮಾಡಿದ 19ನೇ ಓವರ್ನಲ್ಲಿ 19 ರನ್ಗಳು ಬಂದವು. ಟಿಮ್ ಡೇವಿಡ್ ಆ ಓವರ್ನಲ್ಲಿ ಎರಡು ಸಿಕ್ಸರ್ ಹೊಡೆದರು.ಕೊನೆಯ ಓವರ್ನಲ್ಲಿ 11 ರನ್ಗಳ ಅವಶ್ಯಕತೆಯಿತ್ತು. ಶಿಸ್ತಿನ ಬೌಲಿಂಗ್ ಮಾಡಿದ ಮೊಹ್ಸಿನ್ ಖಾನ್ ಕೇವಲ ಐದು ರನ್ ಬಿಟ್ಟುಕೊಟ್ಟು, ಮುಂಬೈ ಗೆಲುವಿಗೆ ಅಡ್ಡಿಯಾದರು.ಮೊದಲು ಬ್ಯಾಟ್ ಮಾಡಿದ ಲಖನೌ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇನಿಂಗ್ಸ್ನ ಮೂರನೇ ಓವರ್ನಲ್ಲಿ ಜೇಸನ್ ಬೆಹ್ರೆನ್ಡಾರ್ಫ್ ಎರಡು ವಿಕೆಟ್ ಗಳಿಸಿದರು. ಇದರಿಂದಾಗಿ ಪವರ್ಪ್ಲೇನಲ್ಲಿ ಕೇವಲ 35 ರನ್ಗಳು ಸೇರಿದವು. ಏಳನೇ ಓವರ್ನಲ್ಲಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಕೂಡ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಕೃಣಾಲ್ ಹಾಗೂ ಸ್ಟೋಯಿನಿಸ್ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು. ಗಾಯಗೊಂಡು ನಿವೃತ್ತರಾದ ಕೃಣಾಲ್ (49; 42ಎ) ಉತ್ತಮ ಕಾಣಿಕೆ ನೀಡಿದರು. ಮಾರ್ಕಸ್ ಮತ್ತು ನಿಕೊಲಸ್ ಪೂರನ್ ಅವರ ಜೊತೆಯಾಟದಲ್ಲಿ 24 ಎಸೆತಗಳಲ್ಲಿ 60 ರನ್ ಸೇರಿದವು.