ಡಬ್ಲಿನ್: ಐರ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಎರಡು ರನ್ಗಳಿಂದ ಗೆದ್ದುಕೊಂಡು, ಮೂರು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಮುನ್ನಡೆ ಪಡೆಯಿತು.ಭಾರತ ತಂಡಕ್ಕೆ ಪುನರಾಗಮನ ಮಾಡಿದ ಜಸ್ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರು ಉತ್ತಮ ಬೌಲಿಂಗ್ ಪ್ರದರ್ಶಿಸಿ
ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಐರ್ಲೆಂಡ್ 20 ಓವರುಗಳಲ್ಲಿ 7 ವಿಕೆಟ್ಗೆ 139 ರನ್ ಗಳಿಸಿತು
ಬ್ಯಾರಿ ಮೆಕಾರ್ಥಿ ಬಿರುಸಿನ ಅರ್ಧ ಶತಕದ ಈ ಮೊತ್ತ ಗಳಿಸಿತು. ಈ ಮೊತ್ತವನ್ನು ಬೆನ್ನುಹತ್ತಿದ ಭಾರತ ತಂಡ 6.5 ಓವರುಗಳಲ್ಲಿ 2 ವಿಕೆಟ್ಗೆ 47 ರನ್ ಗಳಿಸಿತ್ತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಂಡಿದ್ದು, ರನ್ರೇಟ್ ಆಧಾರದಲ್ಲಿ ಭಾರತಕ್ಕೆ ಜಯ ಲಭಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 11 ಓವರುಗಳಲ್ಲಿ 59 ರನ್ನಿಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ, ಏಳನೇ ವಿಕೆಟ್ಗೆ ಕರ್ಟಿಸ್ ಕ್ಯಾಂಫರ್ (39, 33 ಎಸೆತ) ಮತ್ತು ಮೆಕಾರ್ಥಿ (ಔಟಾಗದೇ 51, 33ಎ, 4×6, 4×4) ಅತ್ಯಮೂಲ್ಯ 57 ರನ್ ಸೇರಿಸಿ ಪ್ರತಿರೋಧ ಪ್ರದರ್ಶಿಸಿದರು.ಅರ್ಷದೀಪ್ ಅವರು ಮಾಡಿದ ಕೊನೆಯ ಓವರ್ನ ಕೊನೆಯ ಎಸೆತವನ್ನು ಕವರ್ಸ್ ಮೇಲೆ ಸಿಕ್ಸರ್ಗೆತ್ತುವ ಮೂಲಕ ಮೆಕಾರ್ಥಿ ಅರ್ಧಶತಕ ಪೂರೈಸಿದರು.
ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ 11 ತಿಂಗಳ ಕಾಲ ದೀರ್ಘ ವಿಶ್ರಾಂತಿಯ ನಂತರ ನಾಯಕನಾಗಿ ಮರಳಿದ ಬೂಮ್ರಾ 24 ರನ್ನಿಗೆ 2 ವಿಕೆಟ್ ಪಡೆದರೆ, ಸೊಂಟದ ನೋವಿನಿಂದ ಚೇತರಿಸಿಕೊಂಡಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ 32 ರನ್ನಿಗೆ 2 ವಿಕೆಟ್ ಪಡೆದರು. ಇದು ಪ್ರಸಿದ್ಧ ಅವರ ಮೊದಲ ಟಿ–20 ಪಂದ್ಯ. ಸ್ಪಿನ್ನರ್ ರವಿ ಬಿಷ್ಣೋಯಿ ಕೂಡ ಎರಡು ವಿಕೆಟ್ ಪಡೆದರು.
ಬೂಮ್ರಾ ಮೊದಲ ಓವರ್ನಲ್ಲೇ ಆ್ಯಂಡ್ರೂ ಬಲ್ಬರ್ನಿ ಅವರನ್ನು ಬೌಲ್ಡ್ ಮಾಡಿದರು. ಅದೇ ಓವರ್ನಲ್ಲಿ ಲೋರ್ಕನ್ ಟಕ್ಕರ್ ಅವರನ್ನೂ ಪೆವಿಲಿಯನ್ಗೆ ಮರಳಿಸಿದರು.
ಭಾರತದ ಆರಂಭಿಕ ಆಟಗಾರ ಜೈಸ್ವಾಲ್ 24 ರನ್ ಗಳಿಸಿದರೆ, ಮತ್ತು ತಿಲಕ್ ವರ್ಮಾ (0) ಬೇಗನೆ ನಿರ್ಗಮಿಸಿದ್ದರು. ಮಳೆ ಆರಂಭವಾದಾಗ ಋತುರಾಜ್ ಗಾಯಕವಾಡ್ 19, ಸಂಜು ಸ್ಯಾಮ್ಸನ್ 1 ರನ್ ಗಳಿಸಿ ಕ್ರೀಸಿನಲ್ಲಿದ್ದರು.