*ಗಂಗಾಧರ ಕಲ್ಲಪಳ್ಳಿ.
ಕೊಲ್ಲಮೊಗ್ರ: ಕೊಲ್ಲಮೊಗ್ರ, ಕಲ್ಮಕಾರು, ಹರಿಹರ, ಬಾಳುಗೋಡು..ದಕ್ಷಿಣ ಕನ್ನಡ-ಕೊಡಗು ಜಿಲ್ಲೆಗಳ ಗಡಿ ಗ್ರಾಮಗಳಿವು. ಪ್ರಕೃತಿ ದೇವಿಯ ವನಸಿರಿಯ ಮಧ್ಯೆ ಕಂಗೊಳಿಸುವ ಸುಂದರ ನಾಡು. ಎತ್ತ ನೋಡಿದರೂ ಹಸಿರು ವನರಾಶಿ. ನಡು ಮಧ್ಯಾಹ್ನದಲ್ಲೂ ಸೆಕೆ ಅರಿಯದಂತೆ ಸಂತೈಸಿ ಹಿತಾನುಭವ ನೀಡುವ ತಂಗಾಳಿ. ಬೆಟ್ಟ, ಗುಡ್ಡ, ಕಾಡು, ತೊರೆ, ಜಲಪಾತಗಳು ಮಳೆ, ಬೆಳೆಯಿಂದ ಸಮೃದ್ಧವಾದ ನಾಡು. ಆದರೆ ಇಲ್ಲಿ ದೈನಂದಿನ ಬದುಕಿನ ಸಮಸ್ಯೆಗಳೂ ಅಗಾಧವಾಗಿದೆ.ಇಂತಹಾ ಸುಂದರ ಪರಿಸರದಲ್ಲಿ ಬದುಕು ಕಟ್ಟಿಕೊಂಡವರು ಇಲ್ಲಿನ ಜನತೆ. ಕೃಷಿಯೇ ಬದುಕಿಗೆ ಆಧಾರ. ತಲ ತಲಾಂತರಗಳಿಂದ ಬೆವರು ಸುರಿಸಿ ಮಣ್ಣಿನಲ್ಲಿ ಹೊನ್ನು ಬೆಳೆದ
ಕೃಷಿಕರಿವರು. ಅಡಿಕೆಯೇ ಜೀವನಕ್ಕೆ ಮೂಲಧಾರ. ಹಲವು ಬಾರಿ ಅಪ್ಪಳಿಸಿದ ಪ್ರಳಯ, ಪ್ರಾಕೃತಿಕ ವಿಕೋಪಗಳು ಇಲ್ಲಿನ ಜನರನ್ನು ಬೆಚ್ಚಿ ಬೀಳಿಸುತ್ತವೆ. ಇದರ ಜೊತೆಗೆ ಇಲ್ಲಿನ ಕೃಷಿ ಬದುಕಿಗೆ ಪಡೆಂಭೂತವಾಗಿ ಕಾಡುವ ಅಡಿಕೆ ಕೃಷಿಗೆ ಬಾದಿಸಿದ ಹಳದಿ ರೋಗ, ಎಲೆ ಚುಕ್ಕಿ ರೋಗ ಇಲ್ಲಿನ ಜನರನ್ನು ಹೈರಾಣಾಗಿಸಿದೆ.
ಕೊಲ್ಲಮೊಗ್ರ ಗ್ರಾಮ ಪಂಚಾಯತ್ನ ಕಲ್ಮಕ್ಕಾರು, ಕೊಲ್ಲಮೊಗ್ರ ಗ್ರಾಮಗಳ ಅಡಿಕೆ ಕೃಷಿಯನ್ನು ಹಳದಿ ರೋಗ ಪೂರ್ಣವಾಗಿ ಆಪೋಶನ ತೆಗೆದುಕೊಂಡಿದೆ. ಊರಿಗೆ ಊರೇ ಹಳದಿ ರೋಗ ಬಾದಿಸಿ ಅಡಿಕೆ ಮರಗಳು ಮಕಾಡೆ ಮಲಗಿದೆ. ಅಡಿಕೆ ಕೃಷಿ ಆದಾಯದಿಂದ ಬದುಕು ಕಟ್ಟಿ ಸಿರಿವಂತಿಕೆಯ ಜೀನವ ನಡೆಸುತ್ತಿದ್ದ ನೂರಾರು ಕೃಷಿಕರ ಬಾಳಿನಲ್ಲಿ ಹಳದಿ ರೋಗ ಆರ್ಥಿಕ ಸಂಕಷ್ಟದ ಕರಿನೆರಳನ್ನು ಹರಿಸಿದೆ. ಕಳೆದ ಒಂದೂವರೆ ದಶಕದಿಂದ ಇಲ್ಲಿ ತಾಂಡವವಾಡುತ್ತಿರು ಹಳದಿ ರೋಗ ಅಡಿಕೆ ಕೃಷಿಯನ್ನು ನುಂಗಿ ಹಾಕಿದೆ. ತೋಟಗಳು ನಾಶವಾಗಿ ಇಳುವರಿಯೇ ನಿಂತು ಹೋಗಿದೆ. ಕಲ್ಮಕಾರು ಕೊಲ್ಲಮೊಗ್ರದ ಹಲವು ಬೈಲುಗಳು ಸಂಪೂರ್ಣ ನಾಶವಾಗಿ ಹೋಗಿದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ವರ್ಷ ಕಳೆದಂತೆ ಇಳುವರಿ ಕಡಿಮೆಯಾಗಿ ಅಡಿಕೆ ಮರಗಳು ಒಣಗಿ ಬಿದ್ದಿದೆ. ವೇಗವಾಗಿ
ಹಬ್ಬುವ ಎಲೆ ಚುಕ್ಕಿ ರೋಗವು ಇಲ್ಲಿನ ಕೃಷಿಕರ ಬದುಕಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಅಡಿಕೆ ಕೃಷಿ ನಾಶಕ್ಕೆ ಎಲೆ ಚುಕ್ಕಿ ರೋಗ ವೇಗ ಹೆಚ್ಚಿಸಿದೆ. ಸುಮಾರು 40 ಕ್ವಿಂಟಲ್ ಆಗುತ್ತಿದ್ದ ಅಡಿಕೆ ಇಳುವರಿ ಈಗ 4 ಕ್ವಿಂಟಲ್ಗೆ ಇಳದಿದೆ ಎನ್ನುತ್ತಾರೆ ಕೃಷಿಕರಾದ ಡ್ಯಾನಿ ಯಾಲದಾಳು. ತಮ್ಮ ಅಡಿಕೆ ಕೃಷಿ ಆದಾಯ ಈಗ 90 ಶೇಖಡ ಕುಸಿದಿದ್ದು ಶೇ.10ಕ್ಕೆ ಇಳಿದಿದೆ ಎನ್ನುತ್ತಾರೆ ಕೃಷಿಕರು ಹಾಗೂ ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಶ್ವತ್ ಯಾಲದಾಳು.
ಇದು ಒಂದೆರಡು ಮಂದಿಯ ಕಥೆಯಲ್ಲ. ಅಡಿಕೆ ಹಳದಿ ರೋಗ, ಎಲೆ ಚುಕ್ಕಿ ರೋಗದಿಂದ ಅಡಿಕೆ ಕೃಷಿ ನಾಶವಾದ ಕಾರಣ ಹಲವು ಮಂದಿ ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ. ಹಲವಾರು ಕೃಷಿಕರು ಏನು ಮಾಡಬೇಕೆಂದೇ ತೋಚದ ಪರಿಸ್ಥಿತಿ ನಿರ್ಮಾಣ ಆಗಿದೆ.
ಇನ್ನು ಕೆಲವು ವರ್ಷದಲ್ಲಿ ಇಲ್ಲಿ ಅಡಿಕೆ ಕೃಷಿಯೇ ಇಲ್ಲದಂತಾಗುವ ಸ್ಥಿತಿ ಉಂಟಾಗಬಹುದು. ಆದುದರಿಂದ ಕೃಷಿ ನಾಶವಾದ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಸೂಕ್ತ ಪರ್ಯಾಯ ಬೆಳೆಗೆ ಸಹಾಯ ನೀಡಿ ಕೃಷಿಕರನ್ನು ಬದುಕಿಸಬೇಕು ಎಂಬುದು ಈ ಭಾಗದ ಕೃಷಿಕರ ಆಗ್ರಹ.
ಹರಿಹರ ಪಲ್ಲತ್ತಡ್ಕ ಗ್ರಾಮದ ಕೆಲವು ಭಾಗಗಳಲ್ಲಿಯೂ ಹಳದಿ ರೋಗ ಬಾದೆ ತನ್ನ ಕದಂಬ ಬಾಹು ಚಾಚಿದೆ.ಎಲೆ
ಜೊತೆಗೆ ಚುಕ್ಕಿ ರೋಗ ವ್ಯಾಪಕವಾಗಿ ಕಂಡು ಬಂದಿದೆ.
ಕಾಡು ಪ್ರಾಣಿಗಳ ಉಪಟಳ:
ಕಾಡಂಚಿನ ಗ್ರಾಮಗಳಾದ ಹರಿಹರ, ಕೊಲ್ಲಮೊಗ್ರ ಪಂಚಾಯಿತಿಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯೂ ತೀವ್ರಗೊಂಡಿದೆ. ಕಾಡಾನೆ, ಮಂಗಗಳು, ಕಾಡುಕೋಣ, ಕಾಡು ಹಂದಿ ಹೀಗೆ ಹಲವು ಪ್ರಾಣಿಗಳ ಉಪಟಳವೂ ವ್ಯಾಪಕವಾಗಿದೆ. ಕೃಷಿ ಇಳುವರಿಯ ಬಹುಪಾಲು ಕಾಡು ಪ್ರಾಣಿಗಳ ಪಾಲಾಗುತಿದೆ. ಕಾಡಾನೆಗಳು ನಾಡಿಗೆ ನುಗ್ಗಿ ವ್ಯಾಪಕವಾಗಿ ಕೃಷಿ ಹಾನಿ ಮಾಡುವುದರ ಜೊತೆಗೆ ಆತಂಕವನ್ನೂ ತಂದೊಡ್ಡಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಇಲ್ಲಿನ ಕೃಷಿಕರ ಒಕ್ಕೊರಲ ಬೇಡಿಕೆ.
ಭಾಗಷಃ ಅರಣ್ಯ ಸಮಸ್ಯೆ:
ಕಾಡಿನ ಗಡಿ ಹೊಂದಿರುವ ಈ ಗ್ರಾಮಗಳಲ್ಲಿ ಕೃಷಿ ಮಾಡಿಕೊಂಡಿರುವ ಇಲ್ಲಿನ ಕೃಷಿಕರಿಗೆ ತಮ್ಮ ಜಮೀನಿಗೆ ದಾಖಲೆ ಮಾಡಿಕೊಳ್ಳುವುದು, ಹಕ್ಕು ಪತ್ರ ಪಡೆಯುವುದು, ಸವಲತ್ತುಗಳನ್ನು ಪಡೆಯುವುದು ಸವಾಲಿನ ವಿಷಯವೇ ಸರಿ. ಭಾಗಷಃ ಅರಣ್ಯ ಸಮಸ್ಯೆ ಸೇರಿ ಕಂದಾಯ, ಅರಣ್ಯ ಸಮಸ್ಯೆಗಳು ಇಲ್ಲಿನ ಕೃಷಿಕರನ್ನು ಇನ್ನಿಲ್ಲದಂತೆ ಕಾಡಿದೆ.
ಇಲ್ಲಿನ ಅರಣ್ಯ ಕಂದಾಯ ಸಮಸ್ಯೆ ಎಷ್ಟು ತೀವ್ರವಾಗಿದೆ ಎಂದರೆ
ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರು ಗುಳಿಕಾನ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪದ ಅಪಾಯಕಾರಿ ಎಂದು ಗುರುತಿಸಿದ ಸ್ಥಳದಲ್ಲಿ ವಾಸಿಸುವ 9 ಕುಟುಂಬಗಳಿಗೆ 2018ರ ಪ್ರಳಯದ ಬಳಿಕ ಬೇರೆ ಕಡೆ ಮನೆ ನಿರ್ಮಿಸಲು ತಲಾ 5 ಲಕ್ಷದಂತೆ ಅನುದಾನ ಬಿಡುಗೆಗೊಂಡಿದ್ದರೂ ಇದುವರೆಗೆ ಇವರಿಗೆ ನಿವೇಶನ ಮಂಜೂರಾಗಿಲ್ಲ. ಪ್ರತಿ ಮಳೆಗಾಲದಲ್ಲಿ ಇವರನ್ನು ಕಾಳಜಿ ಕೇಂದ್ರಕ್ಕೆ ಕರೆ ತರಲಾಗುತ್ತದೆ. ಇದೇ ರೀತಿ ಅರಣ್ಯ, ಕಂದಾಯ ಸಮಸ್ಯೆಯಿಂದ ಹಲವು ಕುಟುಂಬಗಳಿಗೆ ಭೂಮಿ ಮಂಜೂರಾಗಿಲ್ಲ. ಹಕ್ಕು ಪತ್ರ ಸಿಗುತ್ತಿಲ್ಲ. ಆದುದರಿಂದ ಅರಣ್ಯ, ಕಂದಾಯ ಜಂಟಿ ಸರ್ವೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂಬುದು ಇಲ್ಲಿನ ಜನರ ಬೇಡಿಕೆ.