ಅಹಮದಾಬಾದ್: ಆತಿಥೇಯ ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು 62 ರನ್ನಿಂದ ಗೆದ್ದುಕೊಂಡಿತು. ಈ ಮೂಲಕ ರವಿವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಿತು.
ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಮಿಂಚಿನ ಶತಕ(129 ರನ್, 60 ಎಸೆತ, 7 ಬೌಂಡರಿ,10 ಸಿಕ್ಸರ್)ಮೋಹಿತ್ ಶರ್ಮಾ(5-10) ನೇತೃತ್ವದ
ಬೌಲರ್ಗಳ ಶಿಸ್ತುಬದ್ದ ಬೌಲಿಂಗ್ ದಾಳಿಯ ನೆರವಿನಿಂದ ಟೈಟನ್ಸ್ ಸುಲಭ ಜಯ ದಾಖಲಿಸಿತು.
ಟಾಸ್ ಜಯಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಲಿ ಚಾಂಪಿಯನ್ ಗುಜರಾತ್ ತಂಡವನ್ನು ಬ್ಯಾಟಿಂಗ್ಗೆ ಅಹ್ವಾನಿಸಿದರು. ಗುಜರಾತ್ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 233 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಮುಂಬೈ 18.2 ಓವರ್ಗಳಲ್ಲಿ 171 ರನ್ಗೆ ಆಲೌಟಾಯಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್(61 ರನ್, 38 ಎಸೆತ, 7 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ತಿಲಕ್ ವರ್ಮಾ(43 ರನ್, 14 ಎಸೆತ) ಹಾಗೂ ಕ್ಯಾಮರೂನ್ ಗ್ರೀನ್(30 ರನ್, 20 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಗುಜರಾತ್ ಪರ ಮೋಹಿತ್ ಶರ್ಮಾ(5-10) ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಶಮಿ(2-41)ಹಾಗೂ ರಶೀದ್ ಖಾನ್(2-33) ತಲಾ 2 ವಿಕೆಟ್ ಪಡೆದರು.ಇದಕ್ಕೂ ಮೊದಲು ವೃದ್ದಿಮಾನ್ ಸಹಾ(18 ರನ್, 16 ಎಸೆತ)ಜೊತೆ ಇನಿಂಗ್ಸ್ ಆರಂಭಿಸಿದ ಗಿಲ್ ಮೊದಲ ವಿಕೆಟ್ಗೆ 54 ರನ್ ಸೇರಿಸಿದರು. ಸಹಾ ಔಟಾದ ನಂತರ ಸಾಯಿ ಸುದರ್ಶನ್(43 ರನ್, 31 ಎಸೆತ, 5 ಬೌಂಡರಿ, 1 ಸಿಕ್ಸರ್) ಜೊತೆ ಕೈಜೋಡಿಸಿದ ಗಿಲ್ 2ನೇ ವಿಕೆಟ್ಗೆ 138 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು
ಐಪಿಎಲ್ನಲ್ಲಿ ಮೂರನೇ ಶತಕ ಬಾರಿಸಿದ ಗಿಲ್ ತಂಡ ಫೈನಲ್ಗೆ ಪ್ರವೇಶ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು.