ನವದೆಹಲಿ: ಒಡಿಶಾ ಕರಾವಳಿ ಭಾಗವನ್ನು ಅಪ್ಪಳಿಸಿರುವ ಡಾನಾ ಚಂಡಮಾರುತದ ಪರಿಣಾಮದಿಂದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಡಾನಾ ಸೈಕ್ಲೋನ್ ಪರಿಣಾಮದ ಬೆನ್ನಲ್ಲೇ ಕೇರಳ ಸೇರಿ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯನ್ನು ಐಎಂಡಿ ಸೂಚಿಸಿದೆ. ಡಾನಾ ಚಂಡಮಾರುತದ ಹಿನ್ನಲೆಯಲ್ಲಿ
ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಿರುವ ಹವಾಮಾನ ಇಲಾಖೆ, ಒಡಿಶಾದ ತೀರದಲ್ಲಿ ಚಂಡಮಾರುತದ ಪರಿಣಾಮಗಳು ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹೇಳಿದೆ. ತ್ರಿಶೂರ್, ಎರ್ನಾಕುಲಂ, ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿರುವ ಇಲಾಖೆ, ಇದೀಗ ಈ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಯೆಲ್ಲೋ ಅಲರ್ಟ್
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಹಿತ ಗಾಳಿ ಬೀಸಲಿದೆ ಎಂದಿದೆ. ವಾರಾಂತ್ಯದಲ್ಲಿ ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಕೆಲವೆಡೆ ಸಿಡಿಲು ಸಹಿತ ಗುಡುಗು ಸಹಿತ ಮಳೆ ಬೀಳುವ ಸಂಭವವಿದೆ ಎಂದಿದೆ.