ಸುಳ್ಯ:ತೀವ್ರಗೊಂಡಿರುವ ಸುಳ್ಯದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಜಯಕುಮಾರ್ ಉಪಸ್ಥಿತಿಯಲ್ಲಿ ಮಹತ್ವದ ಸಭೆ ಸುಳ್ಯ ತಾಲೂಕು ಪಂಚಾಯತ್ನಲ್ಲಿರುವ ಶಾಸಕರ ಕಚೇರಿಯಲ್ಲಿ ಮಾ.15 ರಂದು ನಡೆಯಿತು. ಸುಳ್ಯದ ವಿದ್ಯುತ್ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಭರವಸೆಯನ್ನು ಸಭೆಯಲ್ಲಿ ನೀಡಲಾಯಿತು. 110 ಕೆವಿ ಟವರ್, ಲೈನ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ಅಡ್ಡಿ ಉಂಟಾಗಿರುವ ಕುರಿತು
ಚರ್ಚೆ ನಡೆಸಲಾಗಿ ಶೀಘ್ರ ಕಾಮಗಾರಿ ಮುಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸುಳ್ಯದಲ್ಲಿ ತೀವ್ರಗೊಂಡಿರುವ ವಿದ್ಯುತ್ ಸಮಸ್ಯೆಯ ಬಗ್ಗೆ ಶಾಸಕರಾದ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅಲ್ಲದೆ ಇಂಧನ ಸಚಿ ಕೆ.ಜೆ.ಜಾರ್ಜ್ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಸುಳ್ಯಕ್ಕೆ ಭೇಟಿ ನೀಡಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಮೆಸ್ಕಾಂ ಎಂಡಿ ಅವರಿಗೆ ಸೂಚನೆ ನೀಡಿದ್ದರು.ಈ ಹಿನ್ನೆಲೆಯಯಲ್ಲಿ ಎಂಡಿ ಜಯಕುಮಾರ್ ಹಾಗೂ ಹಿರಿಯ ಇಂಜಿನಿಯರ್ಗಳು ಸುಳ್ಯಕ್ಕೆ ಆಗಮಿಸಿ ಶಾಸಕರು ಕರೆದ ಸಭೆಯಲ್ಲಿ ಭಾಗವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಸುಳ್ಯದಲ್ಲಿ

ನಿರಂತರ ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಓದಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.ವಿದ್ಯುತ್ ಕಡಿತ, ಲೋವೋಲ್ಟೇಜ್ನಿಂದ ಕೃಷಿಗೆ ನೀರು ಹಾಕಲು ಆಗದೆ ಕೃಷಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ, ಸಾರ್ವಜನಿಕರಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇದಕ್ಕೆ ಕೂಡಲೇ ಪರಿಹಾರ ಕಾಣಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕರು ಅನಿರೀಕ್ಷಿತ ಮಳೆ, ಗಾಳಿಯಿಂದ ಆನೆಗುಂಡಿಯಲ್ಲಿ ಮರ ಬಿದ್ದು ಮತ್ತು ಆನೆ ವಿದ್ಯುತ್ ಕಂಬ ಮುರಿದ ಕಾರಣ ವಿದ್ಯುತ್ ಕಡಿತ ಆಗಿದೆ. ಸುಳ್ಯಕ್ಕೆ ಮಾಡಾವಿನಿಂದ ಪ್ರತ್ಯೇಕ ಮಾರ್ಗ ಮಾಡಲಾಗಿದೆ. ಬೆಳ್ಳಾರೆಯಿಂದ ಯುಜಿ ಕೇಬಲ್ ಮೂಲಕ ಪ್ರತ್ಯೇಕ 33 ಕೆವಿ ಲೈನ್ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಸುಳ್ಯಕ್ಕೆ ನಿರಂತರ ಗುಣಮಟ್ಟದ ವಿದ್ಯುತ್ ನೀಡಲು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. 33 ಕೆವಿ ಹಳೆಯ ಲೈನನ್ನು ಸುಸ್ಥಿತಿಯಲ್ಲಿಟ್ಟು ಪರ್ಯಾಯ ಲೈನ್ ಆಗಿ ಬಳಕೆ ಮಾಡಬೇಕು ಎಂದು ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ಈ ಕುರಿತು ಚರ್ಚೆ ನಡೆದು ಪರಿಶೀಲನೆ ನಡೆಸಲಾಗುವುದು ಎಂದು ಎಂಡಿಯವರು

ಹೇಳಿದರು. ಗ್ರಾಮೀಣ ಭಾಗಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಸರಿಯಾಗಿಲ್ಲ ಎಂದು ಹೇಳಿದ ಕಂಜಿಪಿಲಿ ಸಂಪಾಜೆ ರಾಜಾರಾಂಪುರ 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕೂಡಲೇ ಮಾಡಬೇಕು ಎಂದರು.
ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಮಾತನಾಡಿ’ ಗುತ್ತಿಗಾರಿನಲ್ಲಿ 33 ಕೆವಿ ಸಬ್ಸ್ಟೇಷನ್ ಆದರೂ ಒಂದು ಫೀಡರ್ ಮಾತ್ರ ಚಾಲೂ ಆಗಿದ್ದು ಉಳಿದ ಫೀಡರ್ಗಳು ಚಾಲೂ ಆಗದೆ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ ಎಂದರು. ಉಳಿದ ಫೀಡರ್ಗಳು ಕೂಡಲೇ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಂಡಿಯವರು ಹೇಳಿದರು. ಗುತ್ತಿಗಾರಿನಿಂದ ಸುಬ್ರಹ್ಮಣ್ಯಕ್ಕೆ ಯುಜಿ ಕೇಬಲ್ ಮೂಲಕ ವಿದ್ಯುತ್ ಹರಿಯುತಿದೆ. ಸುಬ್ರಹ್ಮಣ್ಯದಲ್ಲಿ 24 ಗಂಟೆ ವಿದ್ಯುತ್ ಇದೆ. ಅದೇ ರೀತಿ ಆ ಕೇಬಲ್ ಮೂಲಕ ಗುತ್ತಿಗಾರು ಭಾಗಕ್ಕೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ವಳಲಂಬೆ ಒತ್ತಾಯಿಸಿದರು. ದುಗಲಡ್ಕ, ಉಬರಡ್ಕ ಗ್ರಾಮಗಳನ್ನು ಜಾಲ್ಸೂರು ಸೆಕ್ಷನ್ಗೆ ಸೇರ್ಪಡೆ ಮಾಡಿರುವುದಕ್ಕೆ ಜನರ ವಿರೋಧ ಇದೆ, ಈ ಪ್ರದೇಶಗಳನ್ನು ಸುಳ್ಯ ಕಚೇರಿ ವ್ಯಾಪ್ತಿಯಲ್ಲಿ ಇರಿಸಬೇಕು ಎಂದು ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಸಭೆಯ ಗಮನಕ್ಕೆ ತಂದರು ಈ ಕುರಿತು ಕ್ರಮ ಕೈಗೊಳ್ಳಲು ಎಂಡಿಯವರು ಇಂಜಿನಿಯರ್ಗಳಿಗೆ ಸೂಚಿಸಿದರು. ಮಳೆಗಾಲಕ್ಕೆ ಮುನ್ನವೇ ಟ್ರಿ ಕಟ್ಟಿಂಗ್ ಕೆಲಸ ಪೂರ್ತಿ ಮಾಡಬೇಕು ಎಂದು ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹೇಳಿದರು. ಟ್ರಿಕಟ್ಟಿಂಗ್ಗೆ ಕೂಡಲೇ ಗ್ಯಾಂಗ್ಮೆನ್ಗಳನ್ನು ನೀಡಲಾಗುವುದು ಎಂದು ಎಂಡಿಯವರು ತಿಳಿಸಿದರು.

110 ಕೆವಿ ಸಬ್ಸ್ಟೇಷನ್ ಅನುಷ್ಠಾನಕ್ಕೆ ಪ್ರಯತ್ನ:
110 ಕೆವಿ ಸಬ್ ಸ್ಟೇಷನ್ ಅನುಷ್ಠಾನ ಆಗದೆ ಸುಳ್ಯದ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರ ಅಸಾಧ್ಯ ಈ ಹಿನ್ನಲೆಯಲ್ಲಿ 110 ಕೆವಿ ಸಬ್ಸ್ಟೇಷನ್ ಕಾಮಗಾರಿ ಕೂಡಲೇ ಮುಗಿಸಲು ಹೆಚ್ಚು ಒತ್ತು ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮೆಸ್ಕಾಂ ಎಂಡಿ ಜಯಕುಮಾರ್ ಅವರು ಮಾಹಿತಿ ನೀಡಿ 110 ಕೆವಿ ವಿದ್ಯುತ್ ಲೈನದ ಟವರ್ ಹಾಗೂ ಲೈನ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ವಿರೋಧ ಇರುವುದರಿಂದ ಟವರ್ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದರು. 21 ಕಿ.ಮಿ.ಉದ್ದದ 110 ಕೆವಿ ಲೈನ್ನಲ್ಲಿ 89 ಟವರ್ ನಿರ್ಮಾಣ ಆಗಬೇಕಾಗಿದ್ದು ಕೇವಲ 7 ಟವರ್ ಮಾತ್ರ ಆಗಿದೆ. ಇದರಲ್ಲಿ 8 ಕಿ.ಮಿ.ಅರಣ್ಯ ವ್ಯಾಪ್ತಿಯಲ್ಲಿ 34 ಟವರ್ ನಿರ್ಮಾಣ ಆಗಬೇಕಾಗಿದೆ. ಅರಣ್ಯದಲ್ಲಿ ಮರ ಕಡಿಯುವುದಕ್ಕೆ ಪರಿಹಾರವಾಗಿ 10 ಕೋಟಿ ಹಣ ಕಟ್ಟಲಾಗಿದೆ. ಉಳಿದ ಕಡೆ 49 ಟವರ್ ನಿರ್ಮಾಣಕ್ಕೆ ಮತ್ತು ಲೈನ್ ಎಳೆಯಲು ರೈತರು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ ಎಂದರು. ಈ ಬಗ್ಗೆ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಟವರ್, ಲೈನ್ ನಿರ್ಮಿಸುವುದಕ್ಕೆ ಸ್ಥಳಕ್ಕೆ ಪರಿಹಾವೂ ನೀಡಲಾಗುತ್ತದೆ, ಸಾರ್ವಜನಿಕರು ಸ್ಥಳ ಬಿಟ್ಟರೆ ಇದು ಕೂಡಲೇ ಅನುಷ್ಠಾನ ಸಾಧ್ಯ ಎಂದರು. ಎಲ್ಲೆಲ್ಲ ವಿರೋಧ ಇದೆ ಎಂಬ ಪಟ್ಟಿ ನೀಡಿ, ಸರ್ವ ಪಕ್ಷಗಳ ಮುಖಂಡರು ಹಾಗೂ ಪ್ರಮುಖರನ್ನು ಸೇರಿಸಿ ರೈತರಲ್ಲಿ ಮಾತುಕತೆ ನಡೆಸುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕರು ಹೇಳಿದರು. ಕಾಮಗಾರಿ ನಿರ್ವಹಿಸಲು ಸಾರ್ವಜನಿಜರಿಂದ ಅಡ್ಡಿ ಉಂಟಾಗಿರುವ ಕಾರಣ ಮತ್ತು ಅರಣ್ಯ ಭೂಮಿ ನೀಡಲು ವಿಳಂಬ ಆಗುತ್ತಿರುವುದರಿಂದ ಕಾಮಗಾರಿ ಪೂರ್ತಿ ಮಾಡಲು ಸಮಸ್ಯೆ ಉಂಟಾಗಿದೆ ಎಂದು ಸಬ್ ಸ್ಟೇಷನ್ ಗುತ್ತಿಗೆದಾರರಾದ ಚಂದ್ರಶೇಖರ ಅವರು ಶಾಸಕರ ಗಮನಕ್ಕೆ ತಂದರು.110 ಕೆವಿ ಸಬ್ ಸ್ಟೇಷನ್ ಅಡ್ಡಿ ವಿಚಾರವನ್ನು ಇಂಧನ ಸಚಿವರ ಹಾಗೂ ಅರಣ್ಯ ಸಚಿವರ ಗಮನಕ್ಕೆ ತರುತ್ತೇನೆ ಎಂದು ಶಾಸಕರು ಹೇಳಿದರು.
ಮೆಸ್ಕಾಂ ಮಂಗಳೂರು ವಲಯ ಮುಖ್ಯ ಇಂಜಿನಿಯರ್ ರವಿಕಾಂತ್ ಆರ್ ಕಾಮತ್, ಮೆಸ್ಕಾಂ ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ, ಕೆಪಿಟಿಸಿಎಲ್ ಮಂಗಳೂರು ಅಧೀಕ್ಷಕ ಇಂಜಿನಿಯರ್ ಚೈತನ್ಯ, ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್ ಮತ್ತಿತರರು ಮಾತನಾಡಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸುಬೋದ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ, ಪ್ರಸಾದ್ ಕಾಟೂರು, ಚಂದ್ರಶೇಖರ ನೆಡಿಲ್, ತಾ.ಪಂ.ವ್ಯವಸ್ಥಾಪಕರಾದ ಹರೀಶ್ ಕೆ. ಮತ್ತಿತರರು ಉಪಸ್ಥಿತರಿದ್ದರು.