ಕಾಸರಗೋಡು:ಕಾಸರಗೋಡಿನ ಸಾಧಕರನ್ನು ಪರಿಚಯಿಸುವ ‘ಕನ್ನಡಿಯಲ್ಲಿ ಕನ್ನಡಿಗರು’ ಕೃತಿ ಸರಣಿಯ ಎರಡೂ ಸಂಚಿಕೆಗಳು ಅರ್ಥಪೂರ್ಣವಾಗಿ ಮೂಡಿ ಬಂದಿವೆ. ಈ ಕಾರ್ಯ ಇಂದಿನ ಮತ್ತು ಮುಂದಿನ ತಲೆಮಾರಿಗೆ ಪ್ರೇರಣೆಯಾಗಬೇಕು. ಕನ್ನಡದ ಬಂಧುಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ವತಿಯಿಂದ
ಶ್ರೀ ಎಡನೀರು ಕ್ಷೇತ್ರದ ಭಾರತೀ ಕಲಾ ಸದನದ ಸಭಾ ಮಂದಿರದಲ್ಲಿ ಡಾ. ರಮಾನಂದ ಬನಾರಿ ಮತ್ತು ಡಾ. ವಸಂತ ಕುಮಾರ ಪೆರ್ಲ ಇವರ ಸಂಪಾದಿತ ಕೃತಿಗಳಾದ ‘ಕನ್ನಡಿಯಲ್ಲಿ ಕನ್ನಡಿಗರು’ ಸರಣಿಯ ಎರಡು ಸಂಚಿಕೆಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾಸರಗೋಡಿನ ಸಾಹಿತ್ಯಕ ಸಾಂಸ್ಕೃತಿಕ ವಾತಾವರಣವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ನಡೆದಿದೆ. ಇಂಥ ಅಪರೂಪದ ಕೃತಿಗಳನ್ನು ನೀಡಿದ ಡಾ. ರಮಾನಂದ ಬನಾರಿ ಮತ್ತು ಡಾ. ವಸಂತ ಕುಮಾರ ಪೆರ್ಲ ಅಭಿನಂದನಾರ್ಹರಾಗಿದ್ದಾರೆ. ಇನ್ನಷ್ಟು ಸಾಧಕರ ವಿವರಗಳು ಕನ್ನಡ ಸಾಹಿತ್ಯ ಲೋಕಕ್ಕೆ ದೊರಕುವಂತಾಗಲಿ ಎಂದು ಅವರು ಅಭಿಪ್ರಾಯ ಪಟ್ಟರು.

ಸಾಧಕರನ್ನು ಹೊರಜಗತ್ತಿಗೆ ಪರಿಚಯಿಸುವ ಈ ಕೃತಿಗಳು ಕಾಸರಗೋಡಿನ ಕನ್ನಡಿಗರ ಬಹುಮುಖಿ ಸಾಧನೆಗಳನ್ನು ಪ್ರತಿಬಿಂಬಿಸುವುದರೊಂದಿಗೆ ಅವರ ಸಾಧನೆಯ ಹೆಗ್ಗುರುತುಗಳನ್ನು ದಾಖಲಿಸುವಲ್ಲಿ ಸಂಪಾದಕರಾದ ಡಾ. ರಮಾನಂದ ಬನಾರಿ ಮತ್ತು ಡಾ. ವಸಂತ ಕುಮಾರ ಪೆರ್ಲ ಯಶಸ್ವಿಯಾಗಿದ್ದಾರೆ ಎಂದು ಕೃತಿ ಪರಿಚಯಿಸಿ ಮಾತನಾಡಿದ ವಿಮರ್ಶಕ ಡಾ. ಸುಭಾಷ್ ಪಟ್ಟಾಜೆ ಹೇಳಿದರು.
ಅರುವತ್ತು ವಯಸ್ಸನ್ನು ಮೀರಿದ ಹನ್ನೊಂದು ಮಂದಿ ಸಾಧಕರ ಪರಿಚಯವನ್ನು ಮೊದಲ ಸರಣಿಯಲ್ಲಿ ಸಂಯೋಜಿಸಲಾಗಿದೆ. ಕಾಸರಗೋಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗರಿಷ್ಠ ಸಂಖ್ಯೆಯಲ್ಲಿ, ಹಂತ ಹಂತವಾಗಿ ಗುರುತಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಮೊದಲ ಸಂಚಿಕೆಯ ಸಂಪಾದಕರಾದ ಡಾ. ರಮಾನಂದ ಬನಾರಿಯವರು ಹೇಳಿದರು.

ಎರಡನೇ ಸಂಚಿಕೆಯ ಸಂಪಾದಕರಾದ ಡಾ. ವಸಂತ ಕುಮಾರ ಪೆರ್ಲ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ಸಂಶೋಧಕ ಪ್ರೊ. ತಾಳ್ತಜೆ ವಸಂತ ಕುಮಾರ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೊಡಿ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಧಕರಾದ ಪ್ರೊ. ಪಿ. ಎನ್. ಮೂಡಿತ್ತಾಯ, ಡಾ. ಯು. ಮಹೇಶ್ವರಿ, ವೈ. ಸತ್ಯನಾರಾಯಣ, ತಿಲಕನಾಥ ಮಂಜೇಶ್ವರ, ತಿಲಕ್ ಕಾಮತ್, ವಿ. ಬಿ. ಕುಳಮರ್ವ, ಸುಕುಮಾರ ಆಲಂಪಾಡಿ, ಮಲಾರ್ ಜಯರಾಮ ರೈ ಮೊದಲಾದವರಿಗೆ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಕೃತಿಗಳನ್ನು ಉಡುಗೊರೆಯಾಗಿ ನೀಡಿದರು. ಕೃತಿಗಳ ಸಂಯೋಜಕರಾದ ವಿಷ್ಣುಕೀರ್ತಿ ಬನಾರಿ ಮೈಸೂರು,ನಂದಕಿಶೋರ್ ಬನಾರಿ,ಚಂದ್ರಶೇಖರ ಏತಡ್ಕ,ಡಾ.ಮುರಲೀ ಮೋಹನ ಚೂಂತಾರು,ರಾಜೇಂದ್ರ ಕಲ್ಲೂರಾಯ ,ವಾಮನರಾವ್ ಬೇಕಲ್,ಬಿ.ಸತ್ಯವತಿ ಎಸ್ ಭಟ್ ಕೊಳಚಪ್ಪು,ಗೋವಿಂದ ಭಟ್ ಕೊಳಚಪ್ಪೆ,ಹರಿಶ್ಚಂದ್ರ ಮಂಜೇಶ್ವರ,ಡಾ.ಕೆ.ಕೆ ಶ್ಯಾನುಭೋಗ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಆಗಮ ಪೆರ್ಲ ಅವರಿಂದ ಕರ್ನಾಟಕ ಶಾಸ್ತ್ರೀಯ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಪಿಟೀಲಿನಲ್ಲಿ ಗೌತಮ ಭಟ್ ಪಿ.ಜಿ. ಮತ್ತು ಮೃದಂಗದಲ್ಲಿ ಆಶ್ಲೇಷ್ ಪಿ. ಸಹಕರಿಸಿದರು. ಅಂಕಣಗಾರ್ತಿ ವಿಜಯಲಕ್ಷ್ಮಿ ಶ್ಯಾನುಭೋಗ್ ಸ್ವಾಗತಿಸಿ, ಕವಯತ್ರಿ ಸುಶೀಲಾ ಪದ್ಯಾಣ ನಿರೂಪಿಸಿದರು.
ಲೇಖಕರ ಸಂಘದ ಕೋಶಾಧಿಕಾರಿ ವಿಶಾಲಾಕ್ಷ ಪುತ್ರಕಳ ವಂದಿಸಿದರು.