*ಡಾ.ಸುಂದರ ಕೇನಾಜೆ.
ಹೆಸರಿಗೆ ಇವೆಲ್ಲವೂ ಮನೆಗಳು, ಆದರೆ ಇವೆಲ್ಲವೂ ಒಂದು ಕಾಲದ ಮಿನಿಅರಮನೆಗಳು. ಸುಮಾರು ನೂರು, ನೂರೈವತ್ತು ವರ್ಷಗಳ ಹಿಂದೆ ಕಟ್ಟಿದ ನೂರಾರು ಮನೆಗಳು ಕರಾವಳಿಯ ತುಂಬ ಹರಡಿವೆ. ಹೀಗೆ ಹರಡಿರುವ ಒಂದಷ್ಟು ಮನೆಗಳಿಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಭೇಟಿ ಕೊಟ್ಟಾಗ ಕಂಡ ಅನೇಕ ಕುತೂಹಲಕಾರಿ ಸಂಗತಿಗಳ ಬಗ್ಗೆ ಒಂದು ಗ್ರಂಥವನ್ನೇ ರಚಿಸಬಹುದು. ಆದರೆ ಈ ಅಂಕಣದಲ್ಲಿ ಹಿಡಿಯುವ ಸಂಕ್ಷಿಪ್ತ ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದೇನೆ.ಉತ್ತರ ಕೇರಳ(ಕಾಸರಗೋಡು ಸೇರಿ) ಮತ್ತು
ತುಳುನಾಡು(ಉಡುಪಿ, ದಕ್ಷಿಣ ಕನ್ನಡ, ಕೊಡಗಿನ ಭಾಗ) ಅಲ್ಲದೇ ಇನ್ನೂ ಅನೇಕ ಭಾಗಗಳಲ್ಲಿ ಅತ್ಯಂತ ಹಳೆಯದಾದ ಮತ್ತು ಅಷ್ಟೇ ಬೃಹತ್ತಾದ ಅನೇಕ ಮನೆಗಳಿವೆ. ಇವುಗಳು ಒಂದು ಸಮುದಾಯದ ಹಿರಿಯ ಅಥವಾ ಪ್ರತಿಷ್ಠಿತ ಕುಟುಂಬಗಳ ಮನೆಗಳು. ಈ ಮನೆಗಳಿಗೆ ಬೇರೆಬೇರೆ ಸಮುದಾಯಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಉದಾಹರಣೆಗೆ ಮಲೆಯಾಳಂ ಮಾತೃಭಾಷೆಯ ಹಿನ್ನೆಲೆ ಇರುವ ಸಮುದಾಯಗಳ ಪ್ರತಿಷ್ಠಿತ ಮನೆಗಳಿಗೆ ‘ತರವಾಡು’ ಎಂದು ಕರೆದರೆ, ಬಂಟ ಜನಾಂಗದ ಹಿರಿಮನೆಗಳಿಗೆ ‘ಗುತ್ತು’, ಜೈನ ಹಿರಿಮನೆಗಳಿಗೆ ‘ಬೂಡು’, ಬ್ರಾಹ್ಮಣರ ಮನೆಗಳಿಗೆ ‘ಇಲ್ಲಂ/ಇಲ್ಲ್’, ಗೌಡರ ಮತ್ತು ಕೊಡವರ ಹಿರಿಮನೆಗಳಿಗೆ ‘ಐನ್ ಮನೆ’ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಆ ಊರಿನ ಬಲ್ಲಾಳ, ಜಮೀನ್ದಾರ ಅಥವಾ ಸ್ಥಳೀಯಾಡಳಿತದ ನೇರ ಪ್ರತಿನಿಧಿಗಳ ಮನೆಗಳಾಗಿದ್ದವು.

ತಲತಲಾಂತರದಿಂದ ಹರಿದು ಬಂದ ಶ್ರೇಣೀಕೃತ ವ್ಯವಸ್ಥೆಯ ಭಾಗದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದು, ನೂರಾರು ಎಕರೆ ಭೂಮಿಯ ಮಾಲಕತ್ವ ಜತೆಗೆ ಊರಿನ ತೆರಿಗೆಯ ಬಾಬ್ತನ್ನು ಸಂಗ್ರಹಿಸುವ, ನ್ಯಾಯ ತೀರ್ಮಾನ ಮಾಡುವ ವರ್ಗಗಳು ಇಂತಹಾ ಮನೆಗಳನ್ನು ನಿರ್ಮಿಸಿ ಒಂದು ಕಾಲದಲ್ಲಿ ಪ್ರತಿಷ್ಠೆಯ ಛಾಪನ್ನು ಒತ್ತಿದ ಉದಾಹರಣೆಗಳು ಇಂದಿಗೂ ಕರಾವಳಿಯಾದ್ಯಂತ ಹರಡಿಕೊಂಡಿವೆ.
ಕೂಡುಕುಟುಂಬವಾಗಿ ಒಂದು ಕಡೆ ನೆಲೆನಿಂತಿದ್ದ ಈ ಆಡಳಿತ ವರ್ಗ, ಬೇರೆಬೇರೆ ಕಾರಣಗಳಿಗಾಗಿ ಇಂತಹಾ ಮನೆಗಳನ್ನು ನಿರ್ಮಿಸಿದ್ದಲ್ಲದೇ ನೂರಾರು ಜನರು ಒಂದೇ ಮನೆಯಲ್ಲಿ ಬಾಳಿ ಬದುಕಲು ಅವಕಾಶವನ್ನೂ ಮಾಡಿಕೊಟ್ಟಿತ್ತು. ತಮ್ಮ ದೈವದೇವರ ಆರಾಧನೆಗಾಗಿ ವಿಶೇಷ ನೆಲೆ, ತಾವು ಸಂಗ್ರಹಿಸುವ ತೆರೆ ಹಾಗೂ ತಾವೇ ಬೆಳೆದ ದವಸಧಾನ್ಯಗಳ ಸಂಗ್ರಹಕ್ಕೆ ಪ್ರತ್ಯೇಕ ದಾಸ್ತಾನು(ಪತ್ತಾಯ), ಈ ನೂರಾರು ಜನರ ದಿನನಿತ್ಯದ ಆಹಾರವಿಹಾರಗಳಿಗಾಗಿ ಬೃಹತ್ ಅಡುಗೆಮನೆ, ಶಯ್ಯಾಗೃಹ ಹೀಗೆ ಅನೇಕ ವಿಶೇಷಗಳು ಈ ಮನೆಯೊಳಗಿವೆ.
ಆದರೆ ಈ ಮನೆಗಳ ನಿರ್ಮಾಣದಲ್ಲಿ ಕರಾವಳಿಯಾದ್ಯಂತ ಅನೇಕ ಏಕರೂಪತೆಯನ್ನು ಕ್ಷೇತ್ರಕಾರ್ಯ ಸಂದರ್ಭದಲ್ಲಿ ಗಮನಿಸಿದ್ದೇವೆ. ಆದರೆ ಇಂತಹಾ ಮನೆಗಳಲ್ಲಿ ನಾಲ್ಕು ಸೂತ್ರ(ಸೂತ್ರವೆಂದರೆ ನಾಲ್ಕು ಛಾವಣಿಗಳಿಂದ ಒಳಭಾಗಕ್ಕೆ ಮಳೆನೀರು ಬೀಳುವಂತಿರುವ ರಚನೆ) ಎಂಟು, ಹದಿನಾರು ಹೀಗೆ ಬೆಳೆದು ಮೂವತ್ತೆರಡು ಸೂತ್ರದ ಮನೆಗಳೂ ಇದ್ದವು ಎನ್ನಲಾಗಿದೆ. ಮೂವತ್ತೆರಡು ಸೂತ್ರವೆಂದರೆ ಅದು ಅತ್ಯಂತ ಪ್ರತಿಷ್ಠಿತ ಅಥವಾ ಆ ಮನೆಯ ಯಜಮಾನ ಒಬ್ಬ ರಾಜನಂತವನೇ ಆಗಿರಬೇಕಿತ್ತು. ನಮ್ಮ ಅನೇಕ ಪಾಡ್ದನಗಳು ಇಂತಹಾ ಮನೆ ರಚಿಸಿದ, ಸಾವಿರಾರು ಎಕರೆ ಭೂಮಿಯಿಂದ ಭತ್ತ ಸಂಗ್ರಹಿಸಿ ಇಡುತ್ತಿದ್ದ ಬಲ್ಲಾಳರ ವಿವರಣೆ ನೀಡುತ್ತದೆ.
ಸಾಮಾನ್ಯವಾಗಿ ಇಂತಹಾ ಮನೆಗಳಲ್ಲಿ ಬಹುತೇಕ ಪೂರ್ವಾಭಿಮುಖವಾಗಿ ತಪ್ಪಿದ್ದಲ್ಲಿ ಉತ್ತರಕ್ಕೆ ಮುಖವಿರುವುದೂ ಇದೆ. ಈ ಮನೆಯ ದಕ್ಷಿಣ ಮತ್ತು ಪಶ್ಚಿಮಭಾಗದಲ್ಲಿ ದೊಡ್ಡ ಬೆಟ್ಟಗುಡ್ಡ ಇರುವುದು ಸಾಮಾನ್ಯ. ಮನೆಯ ಮುಂಭಾಗದಲ್ಲಿ ವಿಶಾಲವಾದ ‘ಬಾಗಿಲಗದ್ದೆ’ ಇದ್ದೇ ಇರುತ್ತದೆ(ಪೂಕರೆ, ಬಾಕಿತಿಮಾರ್ ಗದ್ದೆ) ಈ ಮನೆಗಳ ಪಶ್ಚಿಮದಲ್ಲಿ ಹೊಳೆ ಅಥವಾ ತೊರೆ ಹರಿಯುವುದು, ಈಶಾನ್ಯ ಭಾಗದಲ್ಲಿ ಆ ಮನೆಯ ಕುಡಿಯುವ ನೀರಿನ ಬಾವಿ/ಕೆರೆ, ಮನೆಯ ನಾಲ್ಕು ಬದಿಗಳ ಸುಮಾರು ನೂರು ಮೀ ಅಂತರದಲ್ಲಿ ನಾಗಬನ(ನಾಗನಿಗೂ ನೀರಿಗೂ ಜನಪದರಲ್ಲಿ ನೇರ ಸಂಬಂಧವಿದೆ)ಗಳಿರುತ್ತವೆ.

ಈ ಹಿರಿಮನೆಗಳ ಒಳಗೇ ಅನೇಕ ದೈವಗಳ ನೆಲೆಗಳೂ ಇರುತ್ತವೆ. ಸಾಮಾನ್ಯವಾಗಿ ಆ ಕುಟುಂಬದ ಹಿರಿ ದೈವವೊಂದನ್ನು ಆಪ್ತವಾಗಿ ಅಥವಾ ಹತ್ತಿರದಲ್ಲಿ ಇರಿಸಿಕೊಂಡಿದ್ದರೆ, ಉಳಿದ ದೈವಗಳು ಸ್ಥಾನಮಾನಕ್ಕನುಗುಣವಾಗಿ ಮನೆಯೊಳಗೆ ಅಥವಾ ಹೊರಗೆ ನೆಲೆಯಾಗಿರುತ್ತವೆ.
ಮನೆಗೆ ಪ್ರವೇಶ ಪಡೆಯುವ ಮುನ್ನವೇ ಒಂದು ಪ್ರವೇಶಗೃಹ/ ‘ಪಡಿಪ್ರೆ’ ಇರುತ್ತದೆ. ಮೂರು, ಐದು ಅಥವಾ ಏಳು ಮೆಟ್ಟಿಲು ಹತ್ತಿದ ನಂತರ ವಿಶಾಲ ಚಾವಡಿ, ಆ ಚಾವಡಿಗೊಳಗೆ ಕಲಾತ್ಮಕ ಕೆತ್ತನೆಯ ಮರದ (ಬೋದಿಗೆ)ಕಂಬ, ಮುಖ್ಯದ್ವಾರವೂ ಕೆತ್ತನೆಯಿಂದ ಕೂಡಿದ್ದು ಒಳಪ್ರವೇಶ ಮಾಡಿದಾಗ ಮೇಲೆ ಹೇಳಿದ ನಾಲ್ಕು ಸೂತ್ರ ಸಿಗುತ್ತದೆ. ಈ ನಾಲ್ಕು ಸೂತ್ರದ ಸುತ್ತ ದೈವಗಳ ಅಥವಾ ವಾಸ ಮಾಡುವ ಕುಟುಂಬಗಳ ಕೋಣೆಗಳಿರುತ್ತವೆ. ಪಕ್ಕದಲ್ಲಿ ಅಥವಾ ಪ್ರತ್ಯೇಕವಾಗಿ ಧಾನ್ಯ ಸಂಗ್ರಹಕ್ಕಾಗಿ ಬೃಹದಾಕಾರದ ಮರದ ಪತ್ತಾಯ(ಪೆಟ್ಟಿಗೆ) ಇರುತ್ತದೆ. ಈ ಪತ್ತಾಯದ ಗಾತ್ರವನ್ನು ಹೊಂದಿಕೊಂಡು ಆ ಮನೆಯ ಸಿರಿವಂತಿಕೆಯನ್ನು ಅಳೆಯವ ಪದ್ದತಿಯೂ ಇತ್ತು. ಅಡುಗೆ ಮನೆಯಲ್ಲಿ ಅನೇಕ ಒಲೆಗಳು, ಒಂದಷ್ಟು ಅರೆಯುವ ಕಲ್ಲುಗಳು, ಅಲ್ಲಿಂದಲೇ ಮಹಡಿಗೇರುವ ಏಣಿಯೂ ಇರುತ್ತದೆ. ಇಂತಹಾ ಮನೆಗಳಲ್ಲಿ ನಿತ್ಯ ಜನಜಂಗುಳಿ, ಮನೆಯೊಳಗೇ ಹಲವು ಕುಟುಂಬಗಳಿರುವ ಕಾರಣ ದಿನಚರಿಯಲ್ಲಿ ದೊಡ್ಡ ಬದಲಾವಣೆ ಇರುತ್ತಿರಲಿಲ್ಲ. ಹುಟ್ಟು, ಸಾವು ಜತೆಗೆ ನಾಮಕರಣ, ಮದುವೆ, ಸೀಮಂತ, ವಾರ್ಷಿಕ ದೈವ ನಡಾವಳಿ, ಮಾಸಿಕ ಆಚರಣೆ, ಹಬ್ಬಹರಿದಿನ ಮತ್ತಿತರ ಕ್ರಿಯಾಚರಣೆಗಳ ಸಂದರ್ಭದಲ್ಲಿ ಈ ಮನೆಯೊಳಗೆ ಗಿಜಿಗಿಜಿ. ಕೆಲವು ಕಡೆ, ಮನೆಯಿಂದ ಸಾಮಾನ್ಯ ನೂರು ಮೀಟರ್ ದೂರದಲ್ಲಿ(ಬಾಕಿತಿಮಾರ್ ಗದ್ದೆ) ಈ ಕುಟುಂಬದ ಸ್ಮಶಾನವೂ ಇರುತ್ತದೆ. ಆಯಾ ಸಮುದಾಯದ ನಿಯಮದಂತೆ ಹೂಳುವ, ಉರಿಸುವ, ಆ ಸ್ಥಳದಲ್ಲಿ ವ್ಯಕ್ತಿಯ ಸ್ಥಾನಕ್ಕನುಗುಣವಾಗಿ ಸಮಾಧಿ ಕಟ್ಟುವ ಪದ್ಧತಿಯೂ ಇತ್ತು.
ಇಂದು ಈ ಮನೆಗಳು ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ. ಇಂತಹಾ ಮನೆಗಳನ್ನು ನಿರ್ವಹಣೆ ಮಾಡುವುದೇ ಒಂದು ಸವಾಲು. ಅದಕ್ಕಿಂತಲೂ ಇಂದು ಬಹುತೇಕ ಈ ಮನೆಯೊಳಗೆ ವಾಸ್ತವ್ಯ ಮಾಡುವುದಕ್ಕೆ ಜನಗಳಿಲ್ಲ(ಭೂತ/ದೈವಗಳು ಮಾತ್ರ!) ಆದರೆ ಈ ಮನೆಯ ನಿರ್ಮಾಣ ವಿಧಾನವನ್ನೇ ಗಮನದಲ್ಲಿಟ್ಟ ಕರಾವಳಿಯ ಅನೇಕ ಬುದ್ದಿವಂತರು ವಾಸ್ತುವಿನ ಹೆಸರಿನಲ್ಲಿ ಒಂದಷ್ಟು ಗೋಡೆ ಕೆಡಹುವ, ಮತ್ತೆ ಕಟ್ಟಿಸಿ ದುಡ್ಡು ಹರಿದಾಡಿಸುವ ಕೆಲಸಗಳನ್ನೂ ಮಾಡುವುದಿದೆ. ಆದರೆ ಈ ಮನೆಗಳನ್ನು ನೋಡಿ ಅಧ್ಯಯನ ಮಾಡಿದ್ದೇ ಆದರೆ ಯಾರಿಗೂ ವಾಸ್ತು ಹೇಳಬಹುದು, ಜ್ಯೋತಿಷ್ಯವೂ ನುಡಿಯಬಹುದು. ಅದೇನೇ ಇದ್ದರೂ ಇಂದಿನ ಕಾಂಕ್ರೀಟ್ ಮನೆಗಳ ಮಧ್ಯೆ ಈ ಪಾರಂಪರಿಕ ಮನೆಗಳು ಕಿರೀಟವಿಲ್ಲದ ರಾಜರುಗಳ ಹಾಗೇ ಎನ್ನುವುದಂತೂ ಸತ್ಯ(ಇಪ್ಪತ್ತು ವರ್ಷಗಳ ನಂತರವೂ, ಎಪ್ಪತ್ನಾಲ್ಕರ ಈ ಹರೆಯದಲ್ಲಿ ಮತ್ತೆ ಅದೇ ಉತ್ಸಾಹದಿಂದ ಮನೆ ಸುತ್ತಿಸುತ್ತಾ ಚರ್ಚಿಸುತ್ತಾ ಇರುವ ಗುರುಗಳಾದ ಡಾ.ಕೆ ಕಮಲಾಕ್ಷ ಇವರಿಗೆ ಕೃತಜ್ಞ)

(ಡಾ.ಸುಂದರ ಕೇನಾಜೆ ಅವರು ಶಿಕ್ಷಕರು, ಜಾನಪದ ಸಂಶೋಧಕರು ಹಾಗೂ ಅಂಕಣಕಾರರು)