ಬರ್ಮಿಂಗ್ಹ್ಯಾಮ್: ಭಾರತ ಅಂಧರ ಮಹಿಳಾ ಕ್ರಿಕೆಟ್ ತಂಡವು ಶನಿವಾರ ಐಬಿಎಸ್ಎ ವಿಶ್ವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದೆ. ಕರ್ನಾಟಕದ ಆಟಗಾರ್ತಿ ವರ್ಷಾ ಉಮಾಪತಿ ನಾಯಕತ್ವದ ಭಾರತ ತಂಡವು ಫೈನಲ್ ಪಂದ್ಯದಲ್ಲಿ
ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್ಗಳಿಂದ ಜಯಿಸಿತು.ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 114 ರನ್ ಗಳಿಸಿತು. ಮಳೆ ಸುರಿದ ಕಾರಣ ಗೆಲುವಿನ ಗುರಿಯನ್ನು ಪರಿಷ್ಕರಿಸಲಾಯಿತು. 3.3 ಓವರ್ಗಳಲ್ಲಿ 42 ರನ್ಗಳ ಗುರಿ ಸಾಧಿಸಿದ ಭಾರತ ತಂಡವು ಜಯಭೇರಿ ಬಾರಿಸಿತು.
ವಿಶ್ವ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಅಂಧರ ಕ್ರಿಕೆಟ್ ಆಡಿಸಲಾಯಿತು.