ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೀಡಾಗಿದ್ದು, 50 ಮಂದಿ ಮೃತಪಟ್ಟಿದ್ದಾರೆ. ಸುಮಾರು 300 ಕ್ಕೂ ಅಧಿಕ
ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದೆ.ಈ ರೈಲು ಒಡಿಶಾದ ಬಾಲಸೋರ್ನಿಂದ ಸುಮಾರು
40 ಕಿಲೋಮೀಟರ್ ದೂರದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಬೋಗಿಗಳು ಹಳಿತಪ್ಪಿದವು. ಈ ಬೋಗಿಗಳಿಗೆ ಈ ಸಂದರ್ಭದಲ್ಲಿ ಮತ್ತೊಂದು ಹಳಿಯಲ್ಲಿ ಬಂದ ಹೌರಾ-ಯಶ್ವಂತ್ಪುರ ರೈಲು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಈ ಬೋಗಿಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಈ ರೈಲು ಚೆನ್ನೈ ಸೆಂಟ್ರಲ್ಗೆಹೋಗುತ್ತಿತ್ತು ಎಂದು ತಿಳಿದು ಬಂದಿದೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳು ಸ್ಥಳಕ್ಕೆ ತೆರಳಿವೆ. ಪ್ರಸ್ತುತ ಸ್ಥಳಗದಲ್ಲಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಮತ್ತು ಎಸ್ಆರ್ಸಿಗೆ ರಾಜ್ಯ ಮಟ್ಟದಿಂದ ಯಾವುದೇ ಹೆಚ್ಚುವರಿ ಸಹಾಯದ ಅಗತ್ಯವಿದ್ದರೆ ಸ್ಥಳಕ್ಕೆ ತಲುಪಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಲಭ್ಯವಾಗಿಲ್ಲ. ರೈಲು ಪಶ್ಚಿಮ ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ಹೊರಟು ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ಸೇರುತ್ತದೆ.
ರೈಲು ಮಧ್ಯಾಹ್ನ 3.30 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದು, ಸಂಜೆ 6.30 ಕ್ಕೆ ಬಾಲಸೋರ್ ನಿಲ್ದಾಣವನ್ನು ತಲುಪಿತು. ಇದು ನಾಳೆ ಸಂಜೆ 4.50ಕ್ಕೆ ಚೆನ್ನೈ ತಲುಪಬೇಕಿತ್ತು.
ಪ್ರಧಾನಿ ಮೋದಿ ಸಂತಾಪ: ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.