*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕಳೆದ 15 ದಿನಗಳಿಂದಲೂ ಹೆಚ್ಚು ಸಮಯದಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಎಡೆ ಬಿಡದೆ ಸುರಿಯುವ ಭಾರೀ ಮಳೆಯಿಂದ ಅಡಿಕೆ ಕೃಷಿಗೆ ಕೊಳೆ ರೋಗ ಹರಡುವ ಅತಂಕ ಎದುರಾಗಿದ್ದು ಅಡಿಕೆ ಕೃಷಿಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಿರುವ ಸಾಧ್ಯತೆ ಇದೆ ಎಂದು ಸುಳ್ಯ ತಾಲೂಕಿನ ಹಲವು ಮಂದಿ ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಎಡೆ ಬಿಡದೆ ಮಳೆ ಸುರಿಯುತ್ತಿದ್ದು ಅಡಿಕೆ ಕೃಷಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂಬುದು ಅಡಿಕೆ ಬೆಳೆಗಾರರ ಆತಂಕ. ಹಳ್ಳ ಕೊಳ್ಳ, ಹೊಳೆ, ನದಿಗಳು ತುಂಬಿ ಹರಿದ ಕಾರಣ ಹಲವು ಅಡಿಕೆ ತೋಟಗಳಿಗೆ ನೀರು ನುಗ್ಗಿ
ವಾರಗಟ್ಟಲೆ ತೋಟಗಳು ಜಲಾವೃತವಾಗಿತ್ತು. ಹೊಳೆ, ನದಿಗಳ ನೀರು ಇಳಿದರೂ ತೋಟಗಳಲ್ಲಿ ಒರತೆ, ನೀರು, ಕಣಿ ಪೂರ್ತಿ ನೀರು ತುಂಬಿ ತುಳುಕಿದೆ.ಮೇಲಿನಿಂದ ಎಡೆ ಬಿಡದೆ ಸುರಿಯುವ ಮಳೆ, ತೋಟದಲ್ಲಿ ತುಂಬಿರುವ ನೀರು ಅಡಿಕೆ ಕೃಷಿಗೆ ದೊಡ್ಡ ಹೊಡೆತ ನೀಡಬಹುದು ಎಂಬುದು ಕೃಷಿಕರ ಅಭಿಪ್ರಾಯ. ಸುಳ್ಯ ತಾಲೂಕಿನಲ್ಲಿ ಪ್ರತಿ ದಿನ ಸರಾಸರಿ 100-150 ಮಿ.ಮಿ. ಮಳೆ ಸುರಿಯುತ್ತಿದ್ದು
ಕಳೆದ 15 ದಿನಗಳಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ 1300 ರಿಂದ 1400 ಮಿ.ಮಿ.ಗಿಂತ ಅಧಿಕ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಪೂರ್ತಿ ಬರುವ ಮಳೆಯ ಸರಾಸರಿಗಿಂತಲೂ ಇದು ಅಧಿಕ. ಇದರಿಂದ ಕೊಳೆ ರೋಗ ಅಪ್ಪಳಿಸಲು ರಹದಾರಿಯಾಗಬಹುದು. ಈಗ ರೋಗ ಬಾದಿಸಿದೆಯಾ ಎಂಬುದು ಗೊತ್ತಾಗುವುದಿಲ್ಲ. ಮಳೆ ಬಿಟ್ಟು ಒಂದೆರಡು ದಿನ ಬಿಸಿಲು ಬಂದಾಗ ಕೊಳೆ ರೋಗ ಅಪ್ಪಳಿಸಿದೆಯಾ ಅಥವಾ ಬಂದರೂ ಯಾವ ಪ್ರಮಾಣದಲ್ಲಿ ಬಂದಿದೆ ಎಂಬ ತೀವ್ರತೆ ತಿಳಿಯುತ್ತದೆ ಎಂದು ಕೃಷಿಕರು ಹೇಳುತ್ತಾರೆ. 2018ರಲ್ಲಿ ಈ ರೀತಿಯ ರಣ ಭೀಕರ ಮಳೆ ನಿರಂತರ ಬಂದಿತ್ತು. ಆ ವರ್ಷ ಭಾರೀ ಪ್ರಮಾಣದಲ್ಲಿ ಕೊಳೆ ರೋಗ ಬಾದಿಸಿ ಕೃಷಿ ನಾಶ ಆಗಿತ್ತು ಎಂದು ಅಡಿಕೆ ಬೆಳೆಗಾರರು ನೆನಪಿಸುತ್ತಾರೆ. ಅದೇ ರೀತಿಯ ಮಳೆಗಾಲ ಈ ಬಾರಿ ಪುನರಾವರ್ತನೆ ಆಗಿದೆ ಎಂಬುದು ಕೃಷಿಕರ ಟೆನ್ಷನ್ ಹೆಚ್ಚಲು ಕಾರಣವಾಗಿದೆ.
ಔಷಧಿ ಸಿಂಪಡಣೆ ಅಸಾಧ್ಯ:
ಮಳೆಗಾಲ ಆರಂಭಕ್ಕೆ ಮುನ್ನ ಅಡಿಕೆ ಬೆಳೆಗಾರರು ಒಂದು ಬಾರಿ ಔಷಧಿ ಸಿಂಪಡಣೆ ಮಾಡಿದ್ದರು. ಒಮ್ಮೆ ಔಷಧಿ ಸಿಂಪಡಣೆ ಮಾಡಿದರೆ ಒಂದು ಸಾವಿರ ಮಿಲಿ ಮೀಟರ್ ಮಳೆಯನ್ನು ರೋಗದಿಂದ ತಡೆಯುವ ಶಕ್ತಿ ಇರುತ್ತದೆ ಎಂಬುದು ಕೃಷಿಕರ ಲೆಕ್ಕಾಚಾರ. ಆದರೆ ಈಗ ಅದಕ್ಕಿಂತ ಹೆಚ್ಚು ಮಳೆ ಸುರಿದಿರುವ ಕಾರಣ ಮತ್ತು ಅವಧಿ ಮುಗಿದಿದೆ. ಆದರೆ ಅವಧಿ ಮುಗಿದರೂ ಈಗ ಔಷಧಿ ಸಿಂಪಡಿಸುವ ಸ್ಥಿತಿ ಇಲ್ಲ. ಹಲವು ಕಡೆಗಳಲ್ಲಿ ಒಂದು ಬಾರಿಯೂ ಸಿಂಪಡಣೆ ಮಾಡದ ತೋಟಗಳೂ ಇದೆ.
ಅಡಿಕೆ ಈಗಲೂ ಉದುರುತಿದೆ:
ಮಳೆಗಾಲ ಆರಂಭಕ್ಕೆ ಮುನ್ನ ಹಲವು ಅಡಿಕೆ ತೋಟಗಳಲ್ಲಿ ನಳ್ಳಿ ಉದುರುವುದು ವ್ಯಾಪಕವಾಗಿ ಕಂಡು ಬಂದಿತ್ತು. ಇದರಿಂದ ಹಲವು ತೋಟಗಳಲ್ಲಿ ಭಾರೀ ಪ್ರಮಾಣದಲ್ಲಿ ಅಡಿಕೆ ನಷ್ಟ ಆಗಿತ್ತು. ಹವಾಮಾನ ವೈಪರೀತ್ಯ, ಉಷ್ಣಾಂಶದ ಏರುಪೇರು, ಫಂಗಸ್ ಬಾದೆ, ಕೀಟ ಬಾದೆಯಿಂದ ಈ ರೀತಿ ನಳ್ಳಿ ಉದುರುತ್ತಿತ್ತು. ಕೆಲವೆಡೆ ಅದು ಮುಂದುವರಿದಿದ್ದು ಬೆಳೆದು ದೊಡ್ಡದಾದ ಅಡಿಕೆ ಕೂಡ ಈಗಲೂ ಬಿದ್ದು ಹೋಗುತ್ತದೆ ಎಂದು ಕೃಷಿಕರು ಹೇಳುತ್ತಾರೆ.
ಈ ರೀತಿ ನಿರಂತರ ಮಳೆ ಸುರಿದಿರುವುದು ಅಡಿಕೆ ಕೃಷಿಗೆ ಮಾರಕವಾಗಿ ಪರಿಣಮಿಸುವ ಆತಂಕ ಇದೆ.2018ರಲ್ಲಿ ಸಮಾನ ರೀತಿಯಲ್ಲಿ ಮಳೆ ಸುರಿದಿತ್ತು.ಆ ವರ್ಷ ಕೊಳೆ ರೋಗ ಬಾದೆಯಿಂದ ಭಾರೀ ಪ್ರಮಾಣದಲ್ಲಿ ಅಡಿಕೆ ಕೃಷಿ ನಶಿಸಿ ಹೋಗಿತ್ತು.
-ಎಂ.ಡಿ.ವಿಜಯಕುಮಾರ್
ಕೃಷಿಕರು.ಮಡಪ್ಪಾಡಿ.
ಮಳೆಗಾಲಕ್ಕೆ ಮುನ್ನ ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆ ಮಾಡಿದ್ದರೂ ಈಗ ಅವಧಿ ಮುಗಿದಿದೆ. ಹಲವು ಕೃಷಿಕರಿಗೆ ಒಮ್ಮೆಯೂ ಸಮರ್ಪಕವಾಗಿ ಔಷಧಿ ಸಿಂಪಡಣೆ ಮಾಡಲೂ ಸಾಧ್ಯವಾಗಲಿಲ್ಲ. ಇದರಿಂದ ಕೊಳೆ ರೋಗ ಬರುವ ಸಾಧ್ಯತೆ ಇದೆ. ನಳ್ಳಿ ಉದುರುವುದು ಮುಂದುವರಿದು ಈಗ ಬೆಳೆದ ಅಡಿಕೆ ಬೀಳುವುದೂ ಕಂಡು ಬರುತ್ತಿದೆ”
-ಜಯಪ್ರಕಾಶ್ ಕೆ.
ಅಡಿಕೆ ಕೃಷಿಕರು. ಪೇರಾಲು