*ಡಾ.ಸುಂದರ ಕೇನಾಜೆ.
ಹನ್ನೊಂದನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ ಇತಿಹಾಸ ತಜ್ಞ ಅಲ್ಬೆರೂನಿ ಹೇಳುತ್ತಾನೆ,”ಪ್ರಾಚೀನ ಭಾರತೀಯರು ಇತರ ಅನೇಕ ವಿಷಯಗಳಲ್ಲಿ ಪಂಡಿತರಾಗಿದ್ದರೂ ಶ್ರದ್ದಾಯುಕ್ತವಾಗಿ ತಮ್ಮ ಇತಿಹಾಸ ರಚನೆಯತ್ತ ಗಮನ ಹರಿಸಿಲ್ಲ, ಯಾವುದಾದರೂ ವೃತ್ತಾಂತದ ಬಗ್ಗೆ ಯಾರಾದರೂ ವಿಚಾರಿಸಿದಲ್ಲಿ ಏಕಪ್ರಕಾರವಾಗಿ ಕಥೆ ಹೇಳಲು ಪ್ರಾರಂಭಿಸುತ್ತಾರೆ” ಎಂದು. ಈ ಕಾರಣದಿಂದಲೋ ಏನೋ ಭಾರತದಲ್ಲಿ ನಾನಾ ರೀತಿಯ ಕಥೆಗಳೇ ಹೆಚ್ಚಾಗಿ ಸಿಗುತ್ತಿರುವುದು. ಇಂದು ಕೂಡ ಅನೇಕರಿಗೆ ಚಾರಿತ್ರಿಕ ಸಂಗತಿಗಳಲ್ಲಿ ಆಸಕ್ತಿಯಾಗಲಿ, ಅಸ್ಥೆಯಾಗಲಿ ಇರುವುದು ಕಡಿಮೆಯೇ. ಚಾರಿತ್ರಿಕ ಸಂಗತಿಗಳನ್ನು
ದಾಖಲಿಸದೇ ಇರುವ, ತಮಗೆ ಬೇಕಾದಂತೆ ರೂಪಿಸುವ ಅಥವಾ ಅದನ್ನು ತಿರುಚಿ ತಿದ್ದುವ ಕಾರ್ಯಗಳು ಹಿಂದಿಗಿಂತ ಇಂದೇ ಹೆಚ್ಚು. ಚರಿತ್ರೆ ಎನ್ನುವುದು ಸತ್ಯದ ಪ್ರತಿಪಾದನೆ, ಅದನ್ನು ಸಂಶೋಧನಾ ವಿಧಾನದಿಂದಲೇ ತಿಳಿಯಬೇಕು. ಅದಕ್ಕಾಗಿ ಇರುವ ಮೂಲಾಧಾರಗಳ ಮೂಲಕವೇ ಅದನ್ನು ಕಟ್ಟಬೇಕೆಂಬ ಪ್ರಜ್ಞೆ ಅನೇಕ ಡಿಗ್ರಿಗಳನ್ನು ಪಡೆದವರಿಗೂ ಇಲ್ಲದಿರುವುದು ಆಶ್ಚರ್ಯ. ಚರಿತ್ರೆಯನ್ನು ಅಸಡ್ಡೆಯಿಂದ ನೋಡುವುದು, ಅದರಲ್ಲೇನಿದೆ ಎಂದು ಉಡಾಫೆಯಿಂದ ಮಾತನಾಡುವುದು ಸಾಮಾನ್ಯ. ಭೂತದ ಘಟನೆಗಳನ್ನು ವರ್ತಮಾನದಲ್ಲಿ ಕರಾರುವಕ್ಕಾಗಿ ನೋಡಿ ಸಕರಾತ್ಮಕ ಭವಿಷ್ಯವನ್ನು ಕಟ್ಟಲು ಚರಿತ್ರೆಯ ಅರಿವಿರಬೇಕು. ಭವಿಷ್ಯವಿರುವುದು ಭೂತದ ಘಟನೆಯಲ್ಲಿ ಎನ್ನುವ ಸತ್ಯ ಗೊತ್ತಾದವನು ಅದನ್ನು ಗೌರವಿಸುತ್ತಾನೆ. ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳುತ್ತಾನೆ. ಹಾಗಾಗಿ ಹೊಸ ತಲೆಮಾರಿಗೆ ಚರಿತ್ರೆ ಕಲಿಸುವುದು ಎಂದೆಂದಿಗೂ ಅನಿವಾರ್ಯ.
ಅನೇಕ ಲಿಖಿತ ಗ್ರಂಥಗಳು, ಕಡತಗಳು, ಶಾಸನಗಳು, ಅಲಿಖಿತ ಉತ್ಖನನ ವಸ್ತುಗಳು, ನಾಣ್ಯಗಳು, ಚಿತ್ರ-ಶಿಲ್ಪಕಲೆಗಳು ಹಾಗೂ ಸ್ಮಾರಕಗಳು ಇವೇ ಮೊದಲಾದವು ನಮ್ಮ ಚರಿತ್ರೆ ಕಟ್ಟುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿವೆ. ಈ ದೇಶದಲ್ಲಿ ಜನರಲ್ ಕನ್ನಿಂಗ್ ಹ್ಯಾಮ್ ನ ಮೇಲ್ವಿಚಾರಣೆಯಲ್ಲಿ 1862 ರಿಂದ ಆರಂಭವಾದ ‘ಪ್ರಾಚ್ಯ ಸಂಶೋಧನಾ ಇಲಾಖೆ’ ಭಾರತೀಯ ಚರಿತ್ರೆಯನ್ನು ವೈಜ್ಞಾನಿಕವಾಗಿ ಕಟ್ಟುವ ಕಾರ್ಯವನ್ನು ಮಾಡಿತು. ಬ್ರಿಟೀಷ್ ಕಾಲದಲ್ಲಿ ಆರಂಭಗೊಂಡ ಈ ಕಾರ್ಯ ಮುಂದುವರಿದು ಇಂದಿಗೂ ಉತ್ಖನನ, ಶೋಧ, ದಾಖಲೀಕರಣವನ್ನು ನಡೆಸುತ್ತಲೇ ಇದೆ. ಇನ್ನೂ ಭೂಗರ್ಭದಲ್ಲಿ ಅಡಗಿರುವ ಅದೆಷ್ಟೋ ಸಂಗತಿಗಳು ಬೆಳಕು ಕಾಣದೇ ಚರಿತ್ರೆಯ

ಪುಟಗಳನ್ನು ಅಪೂರ್ಣವಾಗಿಸಿದ್ದೂ ಇದೆ.
ಚರಿತ್ರೆಯ ಸಂಶೋಧನೆ ಎಷ್ಟು ಮುಖ್ಯವೋ ಅದನ್ನು ಅರ್ಥೈಸಿ ನಿಖರವಾಗಿ ಮತ್ತು ಅಷ್ಟೇ ವಸ್ತುನಿಷ್ಠವಾಗಿ ಮುಂದಿನ ತಲೆಮಾರಿಗೆ ವರ್ಗಾಯಿಸುವುದೂ ಮುಖ್ಯ. ಪೂರ್ವಾಗ್ರಹವಿಲ್ಲದೇ ಚರಿತ್ರೆಯನ್ನು ನೋಡುವ ವಿಧಾನವೇ ಅತ್ಯಂತ ವೈಜ್ಞಾನಿಕ. ಪುರಾಣ, ಐತಿಹ್ಯ, ಜಾನಪದ ಇತ್ಯಾದಿಗಳ ವ್ಯತ್ಯಾಸದ ಅರಿವಿಲ್ಲದೇ ಚರಿತ್ರೆಯನ್ನು ಕಲಿಯುವ ವಿಧಾನವೂ ಅಕ್ಷಮ್ಯ. ಇದರ ಜತೆಗೆ ಐತಿಹಾಸಿಕ ದಾಖಲೆ, ಸ್ಮಾರಕ, ವಸ್ತುಗಳನ್ನು ಪ್ರೀತಿಸುವ ಗುಣವೂ ಪ್ರಬುದ್ದತೆಯ ಲಕ್ಷಣ. ಇಂದಿನ ಡಿಜಿಟಲ್ ವ್ಯವಸ್ಥೆ ಅನೇಕ ಅರೆಬರೆ ಅಥವಾ ತನಗೆ ಬೇಕಾದಂತೆ ರೂಪಿಸಿದ ಚರಿತ್ರೆಯನ್ನು ಪ್ರಕಟಿಸಿ ಭಾವವಿರೇಚನ ಕಾರ್ಯಗಳನ್ನು ಮಾಡುವುದರಿಂದ ಚರಿತ್ರೆಯ ಚೌಕಟ್ಟಿಗೆ ಅಪಚಾರ ಮಾಡುವ ಮತ್ತು ಅದರ ವೈಜ್ಞಾನಿಕ ಆಶಯಕ್ಕೆ ಧಕ್ಕೆ ತರುವ ಅಥವಾ ಚರಿತ್ರೆ ಎನ್ನುವುದೇ ಅಪಾಯಕಾರಿ ಎನ್ನುವ ಹಾಗೇ ಕಾಣುವ ಅಡ್ಡ ದಾರಿಗಳನ್ನು ತೋರಿಸುತ್ತಿವೆ. ಜಾತಿ, ಜನಾಂಗ, ಧರ್ಮ, ಸಿದ್ದಾಂತಗಳನ್ನು ಮೀರಿ ಮುಕ್ತವಾಗಿ ಚರಿತ್ರೆಯನ್ನು ನೋಡುವುದು ಇಂದಿನ ಅತೀ ಅಗತ್ಯ.

ಹೊಸ ತಲೆಮಾರಿಗೆ ಚರಿತ್ರೆಯ ಬಗ್ಗೆ ಪ್ರೀತಿಯನ್ನೂ ಆಸಕ್ತಿಯನ್ನು ಮೂಡಿಸಬಹುದಾದ ಕೆಲವು ಸುಲಭದ ಕೆಲಸಗಳನ್ನು ಇಲ್ಲಿ ಗುರುತಿಸುತ್ತಿದ್ದೇನೆ. ಪ್ರತೀ ಹಳ್ಳಿಯಿಂದ ಹಿಡಿದು ರಾಜ್ಯ, ರಾಷ್ಟ್ರ ಅಥವಾ ಜಗತ್ತಿಗೆ ಚರಿತ್ರೆ ವಿಸ್ತರಿಸಿರುವಾಗ ಪ್ರತೀ ತಾಲೂಕುಗಳಲ್ಲೂ ಚಾರಿತ್ರಿಕ ಸಂಗತಿಗಳಿರುವುದರಲ್ಲಿ ಸಂಶಯವಿಲ್ಲ. ಕಾಲಗಣನೆಯ ನೆಲೆಯಲ್ಲಿ ಇತ್ತೀಚಿನ ಮತ್ತು ಹಿಂದಿನ ಎನ್ನುವ ವ್ಯತ್ಯಾಸವಿರಬಹುದು. ಆದರೆ ಚರಿತ್ರೆಯೇ ಇಲ್ಲ ಎಂದಿಲ್ಲ. ಇದನ್ನು ಸಾರ್ವಜನಿಕವಾಗಿ ತಿಳಿಸುವ ಮೂಲಕ ಆ ಊರಿನ ಬಗ್ಗೆ ಗೌರವ, ಅಭಿಮಾನ ಮೂಡಿಸುವ ಕೆಲಸಗಳನ್ನು ಹೀಗೂ ನಡೆಸಬಹುದು. ನೋಡಿ, ಬೆಳಗಾವಿ ಜಿಲ್ಲೆಯ ಬೈಲುಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಸ್ವಾತಂತ್ರ್ಯ ವೀರಸೇನಾನಿ ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಚರಿತ್ರೆಯ ಒಂದು ಘಟನೆಯನ್ನು ವಿಸ್ತೃತವಾಗಿ ಮತ್ತು ಆಕರ್ಷಕವಾಗಿ ವಿವರಿಸುವ, ಚರಿತ್ರೆಯ ಬಗ್ಗೆ ಮತ್ತು ಚಾರಿತ್ರಿಕ ವ್ಯಕ್ತಿಯ ಬಗ್ಗೆ ಗೌರವ ಮೂಡಿಸುವ ರಚನೆಗಳಲ್ಲಿ ಒಂದು. ಹತ್ತು ಎಕರೆ ಜಾಗದಲ್ಲಿ ಅಲ್ಲಿ ರೂಪಿಸಿದ ಸಾವಿರಾರು ಶಿಲ್ಪಗಳು ಒಂದು ಕಾಲದ ಘಟನೆಯನ್ನು ಪರಿಣಾಮಕಾರಿಯಾಗಿ ಹೇಳುತ್ತಿವೆ. ಇಂತಹದ್ದೇ ಸಣ್ಣ ಪಾರ್ಕ್ ಸಂತ ಸೇವಾಲಾಲ್ ಕುರಿತು ದಾವಣಗೆರೆಯ ಹೊನ್ನಾಳಿಯಲ್ಲಿದೆ. ಬುಡಕಟ್ಟು ಸಮುದಾಯಗಳ ಬದುಕನ್ನು ಕಟ್ಟಿಕೊಡುವ ರಾಕ್ ಗಾರ್ಡನ್ ಕಾರವಾರದಲ್ಲೊಂದಿದೆ. ವಚನ ಶ್ರೇಷ್ಠತೆಯನ್ನು ಬಿಂಬಿಸುವ

ಚಿತ್ರದುರ್ಗದ ಮುರುಘ ಮಠದ ಪಾರ್ಕ್, ಮಹಿಳಾ ಸಬಲೀಕರಣವನ್ನು ಬಿಂಬಿಸುವ ಅಕ್ಕಮಹಾದೇವಿ ಮಹಿಳಾ ವಿವಿಯ ಪಾರ್ಕ್, ಗ್ರಾಮೀಣ ಕೃಷಿ ಬದಕುನ್ನು ಚಿತ್ರಿಸುವ ಶಿಗ್ಗಾವಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್, ಕಾರ್ಕಳದ ಕೋಟಿ-ಚೆನ್ನಯ ಥೀಮ್ ಪಾರ್ಕ್… ಹೀಗೆ ಒಂದು ಕಾಲದ ಚರಿತ್ರೆ, ಸಾಮಾಜಿಕ, ಧಾರ್ಮಿಕ ಸ್ಥಿತಿಗತಿಯನ್ನು ಅತ್ಯಂತ ಆಸಕ್ತಿದಾಯಕವಾಗಿ ಅಭಿವ್ಯಕ್ತಿಸುವ ಹಲವು ರಾಕ್ ಗಾರ್ಡನ್ ಗಳು ಕರ್ನಾಟಕದಲ್ಲಿವೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಚರಿತ್ರೆಯನ್ನು ಶಿಲ್ಪಗಳ ಮೂಲಕ ವಿವರಿಸಿದ ಸರಕಾರದ ಯೋಜನೆ ಶ್ಲಾಘನೀಯವಾದುದು. ಒಂದು ಸಿನಿಮಾ, ನಾಟಕ ನೀಡುವ ಪರಿಣಾಮಕ್ಕಿಂತಲೂ ವಾಸ್ತವವಾದುದು. ಈ ರೀತಿಯಾಗಿ ಚರಿತ್ರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವುದಾದರೆ ಈ ರಾಜ್ಯದಲ್ಲಿ ಇನ್ನೂ ಅದೆಷ್ಟೋ ಇವೆ. ಅಮರ ಸುಳ್ಯ, ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಟಿಪ್ಪುಸುಲ್ತಾನ್, ಹಲಗಲಿ ಬೇಡರು….. ಹೀಗೆ ಬಹುತೇಕ ತಾಲೂಕಿಗೊಂದರಂತೆ ಹಿಂದೆ ನಡೆದ ಘಟನೆಗಳು ಚರಿತ್ರೆಯ ಪುಟಗಳಲ್ಲಿವೆ. ಇವುಗಳನ್ನು ಮತ್ತೆ ದೃಶ್ಯ ರೂಪದಲ್ಲಿ ಪ್ರಸ್ತುತ ಪಡಿಸಬಹುದು, ಆ ಮೂಲಕ ಚರಿತ್ರೆಯನ್ನು ಗೌರವಿಸುವ ಮನಸ್ಥಿತಿಯನ್ನು ಬೆಳೆಸಬಹುದು. ಯದ್ವಾತದ್ವ ಪ್ರತಿಮೆ ರೂಪಿಸುವ, ಇದ್ದ ಚಾರಿತ್ರಿಕ, ಧಾರ್ಮಿಕ ಕೇಂದ್ರಗಳನ್ನು ಕೆಡವಿ ಹೊಸದಾಗಿ ಕಟ್ಟಿ ಕುರುಹುಗಳನ್ನು ಅಳಿಸಿ ಹಾಕುವ ಕೆಲಸಗಳ ಬದಲು ಈ ರೀತಿ ಚಾರಿತ್ರಿಕ ಸಂಗತಿಗಳನ್ನು ಅಲ್ಲಲ್ಲಿ ನಿರ್ಮಿಸುವುದು ಭವಿಷ್ಯವನ್ನು ವಾಸ್ತವದಲ್ಲಿ ನೋಡುವುದಕ್ಕೆ

ಸಹಕಾರಿಯಾಗಬಹುದು. ಆದ್ದರಿಂದ ಅಲ್ಬೆರೂನಿಯಂತವರು ಮುಂದೊಂದು ಕಾಲದಲ್ಲಿ, “ರಚಿಸಿದ ಚರಿತ್ರೆಯನ್ನು ಉಳಿಸುವ ಮತ್ತು ಅದನ್ನು ಹೊಸ ಪೀಳಿಗೆಗೆ ವರ್ಗಾಯಿಸುವ ಕಲೆಯೂ ಭಾರತೀಯರಿಗೆ ಗೊತ್ತಿಲ್ಲ” ಎನ್ನುವ ಸತ್ಯವೊಂದನ್ನು ಹೇಳುವ ಸಾಧ್ಯತೆಗಿಂತ ಮೊದಲೇ ಮಾಡದಿರುವ ಉತ್ಖನನಗಳನ್ನು ಮಾಡುವ, ಸ್ಮಾರಕಗಳನ್ನು ಉಳಿಸುವ ಮತ್ತು ಉಳಿಸಿದ್ದನ್ನು ಹೀಗೆ ಜನಸಾಮಾನ್ಯರಿಗೂ ತಿಳಿಸುವ ಯೋಜನೆಗಳು ಹೆಚ್ಚುಹೆಚ್ಚು ನಡೆಯಬೇಕು ಮತ್ತು ರೂಪಿಸಿದ ಯೋಜನೆಗಳನ್ನು ನಿರ್ವಹಣೆ ಮಾಡುವ ಮನಸ್ಥಿತಿಯೂ ಮೂಡಬೇಕು, ಇದೇ ಆಶಯ ಇಲ್ಲಿಯದು.

(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು, ಲೇಖಕರು ಹಾಗೂ ಅಂಕಣಕಾರರು)