ಡಾಮ್ನಿಕಾ: ಭಾರತದ ಆಫ್ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ಮೋಡಿಯ ಮುಂದೆ ತರಗೆಲೆಗಳಂತೆ ಉದುರಿದ ವೆಸ್ಟ್ ಇಂಡೀಸ್ ತಂಡವು ಇಲ್ಲಿ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನೀಂಗ್ಸ್ನಲ್ಲಿ 64.3 ಓವರ್ಗಳಲ್ಲಿ 150 ರನ್ಗೆ ಆಲೌಟ್ ಆಗಿದೆ.ಮೊದಲ ದಿನದ ಆಟದ ಮುಕ್ತಾಯಕ್ಕೆ ಭಾರತ ವಿಕೆಟ್
ನಷ್ಟವಿಲ್ಲದೆ 80 ರನ್ ಗಳಿಸಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ಗಳಾದ ಕ್ರೇಗ್ ಬ್ರಾಥ್ವೇಟ್ (20; 46ಎ) ಮತ್ತು ತೇಜನಾರಾಯಣ ಚಂದ್ರಪಾಲ್ (12; 44ಎ) ಬೇಗನೇ ಮರಳಿದರು. 47 ರನ್ ಗಳಿಸಿದ ಅಲಿಕ್ ಅತಾಂಜೆ ಟಾಪ್ ಸ್ಕೋರರ್ ಆದರು. ಜೇಸನ್ ಹೋಳ್ಡರ್ 18, ರಕೀಂ ಕಾರ್ನ್ವಾಲ್ ಅಜೇಯ 19 ರನ್ ಗಳಿಸಿದರು.
ರವಿಚಂದ್ರನ್ ಅಶ್ವಿನ್ 60 ರನ್ ನೀಡಿ 5 ವಿಕೆಟ್ ಪಡೆದರೆ ರವೀಂದ್ರ ಜಡೇಜ 26 ರನ್ ನೀಡಿ 3 ವಿಕೆಟ್ ಕಿತ್ತರು. ಒಂದೊಂದು ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಸಹ ಭಾರತ ತಂಡ ಮೇಲುಗೈ ಸಾಧಿಸಲು ನೆರವಾದರು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಭಾರತ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದೆ. ಪದಾರ್ಪಣೆ ಪಂದ್ಯ ಆಡುತ್ತಿರುವ ಯಶಸ್ವಿ ಜೈಸ್ವಾಲ್ (40) ಮತ್ತು ನಾಯಕ ರೋಹಿತ್ ಶರ್ಮ (30) ಕ್ರೀಸ್ನಲ್ಲಿದ್ದಾರೆ.