ಅಹಮದಾಬಾದ್: ಶನಿವಾರ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗುತ್ತಿವೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ 31 ವರ್ಷಗಳಲ್ಲಿ ಇಲ್ಲಿಯವರೆಗೆ ನಡೆದ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡದ ಎದುರು ಭಾರತ ತಂಡವು ಒಂದು ಬಾರಿಯೂ
ಸೋತಿಲ್ಲ. ಇಂದು ಮತ್ತೊಂದು ಜಯದ ಮೂಲಕ ಅಜೇಯ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ವಿಶ್ವಕಪ್ ಟೂರ್ನಿಗಳಲ್ಲಿ ಉಭಯ ತಂಡಗಳು ಏಳು ಬಾರಿ ಮುಖಾಮುಖಿಯಾಗಿವೆ. ಎಲ್ಲ ಸಲವೂ ಭಾರತವೇ ಜಯಿಸಿದೆ. ಕಳೆದ ತಿಂಗಳಯ ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಗುಂಪು ಹಂತದಲ್ಲಿ ಒಮ್ಮೆ ಹಾಗೂ ಸೂಪರ್ ಫೋರ್ ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದ್ದವು. ಗುಂಪು ಹಂತದ ಪಂದ್ಯ ಮಳೆಗಾಹುತಿಯಾಗಿತ್ತು. ನಾಲ್ಕರ ಘಟ್ಟದಲ್ಲಿ ಭಾರತ ಗೆದ್ದಿತ್ತು. ಇಂದಿನ
ಪಂದ್ಯವು ಉಭಯ ತಂಡಗಳ ಬೌಲರ್ಗಳ ನಡುವಣ ಹಣಾಹಣಿಯೆಂದೇ ಬಿಂಬಿತವಾಗಿದೆ. ಭಾರತದ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತದ ಬೌಲಿಂಗ್ ಪಡೆ ಹಾಗೂ ಶಾಹಿನ್ ಅಫ್ರಿದಿ ನೇತೃತ್ವದ ಬೌಲಿಂಗ್ ಬಲಿಷ್ಠವಾಗಿದೆ. ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ ಅಫ್ಗನ್ ವಿರುದ್ಧ ಭರ್ಜರಿ ಶತಕ ಬಾರಿಸಿದ್ದರು. ಕಳೆದೆರಡು ಪಂದ್ಯಗಳಲ್ಲಿ ವಿರಾಟ್ ಅರ್ಧಶತಕಗಳನ್ನು ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ ಅವರೂ ರನ್ ಬೇಟೆಯಡಲು ಸಮರ್ಥರಾಗಿದ್ದಾರೆ. ಜ್ವರದಿಂದ ಬಳಲಿ ಎರಡು ಪಂದ್ಯಗಳಿಂದ ದೂರ ಉಳಿದಿದ್ದ ಶುಭ್ಮನ್ ಗಿಲ್ ಇಂದು ಅಂಗಳಕ್ಕೆ ಇಳಿಯುವ ಸಾಧ್ಯತೆ ಇದೆ.
ಪಾಕ್ ತಂಡದಲ್ಲಿ ನಾಯಕ ಬಾಬರ್ ಆಜಂ ಮತ್ತು ಅನುಭವಿ ಫಕಾರ್ ಜಮಾನ್ ಅವರಿಗೆ ಲಯ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಮಿಂಚುತ್ತಿದ್ದಾರೆ. ತಂಡವು ಎರಡೂ ಪಂದ್ಯಗಳಲ್ಲಿ ಜಯಿಸಲು ತಮ್ಮ ಬ್ಯಾಟಿಂಗ್ ಮೂಲಕ ಉತ್ತಮ ಕಾಣಿಕೆ ನೀಡಿದ್ದಾರೆ. ಇಬ್ಬರೂ ಶತಕ ದಾಖಲಿಸಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಆರ್. ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್, ಫಕರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ ಶಫೀಕ್, ಮೊಹಮ್ಮದ್ ರಿಜ್ವಾನ್, ಸಾದ್ ಶಕೀಲ್, ಇಫ್ತಿಕಾರ್ ಅಹಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮೀರ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಆಫ್ರಿದಿ, ಮೊಹಮ್ಮದ್ ವಸೀಂ.
ಪಂದ್ಯ ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಹಾಟ್ಸ್ಟಾರ್ ಆ್ಯಪ್