*ಗಂಗಾಧರ ಕಲ್ಲಪಳ್ಳಿ.
ಬನಾರಿ: ತನ್ನ ಎಂಟನೇ ವರ್ಷದಿಂದ ಆರಂಭಿಸಿದ ಯಕ್ಷ ಕಲಾ ಸೇವೆಯನ್ನು 75 ರ ಹರೆಯದಲ್ಲಿಯೂ ಮುಂದುವರಿಸುವವವರು ಯಕ್ಷಗಾನ ಕಲೆಯ ಅನನ್ಯ ಆರಾಧಕರು, ಹಿರಿಯ ಯಕ್ಷಗಾನ ಪ್ರಸಂಗಕರ್ತರು, ಭಾಗವತರು ಹಾಗು ಯಕ್ಷಗಾನ ಗುರುಗಳೂ ಆದ ವಿಶ್ವವಿನೋದ ಬನಾರಿಯವರು. ಯಕ್ಷ ರಂಗದ ಸವ್ಯಸಾಚಿಗೆ
ಈಗ 75 ರ ಸಂಭ್ರಮ. ಈ ಸಂಭ್ರಮದ ಅಂಗವಾಗಿ ಅವರ ಶಿಷ್ಯರು, ಬಂಧು ಮಿತ್ರರು ಸೇರಿದ ವಿಶ್ವ ವಿನೋದ ಬನಾರಿ ಅಭಿನಂದನಾ ಸಮಿತಿಯ ನೇತೃತ್ವದಲ್ಲಿ ಇಂದು ಬನಾರಿಯಲ್ಲಿ ವಿಶ್ವವಿನೋದ ಯಕ್ಷ ಕಲಾರವ ಎಂಬ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನ ಕಲೆಯ ಆರಾಧಕರು,ಯಕ್ಷಗಾನ ಗುರುಗಳೂ,
ಪ್ರಸಂಗಕರ್ತರೂ ಆದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಪುತ್ರರಾದ ವಿಶ್ವ ವಿನೋದ ಅವರು ತನ್ನ ತಂದೆಯ ಗರಡಿಯಲ್ಲಿ ಯಕ್ಷಗಾನದ ಬಾಲ ಪಾಠವನ್ನು ಕಲಿತವರು. ತನ್ನ ಎಂಟನೇ ವರ್ಷದಲ್ಲಿ ವೇಷ ಹಾಕಿ ವೇದಿಕೆ ಏರಿದರು. ಬಾಲಲೀಲೆಯ ಕೃಷ್ಣ, ಸಂಪೂರ್ಣ ರಾಮಾಯಣದ ಅಂಗದ, ಶಿವ ಪಂಚಾಕ್ಷರಿಯ ಸಿತಕಾತ, ಶ್ರೀಕೃಷ್ಣ, ವಿಷ್ಣು ಹೀಗೆ ಹತ್ತಾರು ವೇಷಗಳನ್ನು ಮಾಡಿದ ವಿಶ್ವ ವಿನೋದರು ಅರ್ಥಗಾರಿಕೆಯನ್ನೂ ಕರಗತ ಮಾಡಿಕೊಂಡರು. ಬಳಿಕ ಭಾಗವತಿಕೆಯನ್ನು ಅಭ್ಯಸಿಸಿದ ಅವರು ಹವ್ಯಾಸಿ ಭಾಗವತರಾಗಿ ನೂರಾರು ಯಕ್ಷಗಾನಕ್ಕೆ ಜೀವ ತುಂಬಿದರು. ತಂದೆಯಂತೆಯೇ ಯಕ್ಷಗಾನ ಪ್ರಸಂಗ ರಚನೆಯನ್ನೂ ಮಾಡಿದ ಅವರು ಸೌಭಾಗ್ಯ ವಿಜಯ, ತೊಡಿಕಾನ ಕ್ಷೇತ್ರ ಮಹಾತ್ಮೆ, ಶಬರಿಮಲೆ ಅಯ್ಯಪ್ಪ, ಕೃಷ್ಣ ಸಂಧಾನ, ಮಾಗಧ ವಧೆ, ದಜಮಕ್ಷಾಧ್ವರ ಸೇರಿ 30 ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಕನ್ನಡ, ಹವ್ಯಕ ಭಾಷೆ, ತುಳು, ಮಲಯಾಳಂ ಭಾಷೆಗಳಲ್ಲಿ ಹೀಗಿ ವಿವಿಧ ಭಾಷೆಗಳಲ್ಲಿ ಪ್ರಸಂಗ ರಚನೆ ಮಾಡಿದ ಹಿರಿಮೆ ಇದರದ್ದು. ಪುರಾಣ ಕಥೆಗಳು ಮಾತ್ರವಲ್ಲದೆ ಕೊರೋನಾ, ಮದ್ಯಾಸುರರಗಳೆ, ಪರಿಸರ ರಕ್ಷಣೆ ಸೇರಿ ಸಾಮಾಜಿಕ ಮತ್ತು ಪ್ರಚಲಿತ ವಿಷಯಗಳ ಬಗ್ಗೆಯೂ ಪ್ರಸಂಗ ರಚನೆ ಮಾಡಿದ್ದಾರೆ. ನೂರಾರು ಮಂದಿಗೆ ಭಾಗವತಿಕೆಯ ಬಾಲ ಪಾಠ ಕಲಿಸಿದ್ದಾರೆ. ತನ್ನ 75ನೇ ವರ್ಷದಲ್ಲಿಯೂ ಅಧಮ್ಯ ಯಕ್ಷ ಪ್ರೀತಿಯನ್ನು ಮುಂದುವರಿಸಿರುವ ಇವರು ಹಲವು ಮಂದಿ ಶಿಷ್ಯರಿಗೆ ಭಾಗವತಿಕೆಯ ಪಾಠ ಹೇಳಿ ಕೊಡುತ್ತಿದ್ದಾರೆ.
ಕಾಲಮಿತಿಯ ಯಕ್ಷಗಾನ ಉತ್ತಮ:
ಕಳೆದ ಆರೂವರೆ ದಶಕಗಳ ಕಾಲ ನಿರಂತರ ಯಕ್ಷ ಕಲೆಯ ಸೇವೆಯಲ್ಲಿರುವ ವಿಶ್ವ ವಿನೋದ ಬನಾರಿ ಅವರು ಯಕ್ಷಗಾನ ಕಲೆಯ ಬೆಳವಣಿಗೆಯನ್ನು ಹತ್ತಿರದಿಂದ ಕಂಡವರು. ಕಲೆಯ ಬೆಳವಣಿಗೆಗೆ ನಿರಂತರ ಪ್ರೋತ್ಸಾಹ ನೀಡುವವರು. ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಕೇಂದ್ರ, ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಾರಥಿಗಳಲ್ಲಿ ಓರ್ವರು. ‘ಯಕ್ಷಗಾನ ಕಲೆಯಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆ ಆಗಿದೆ. ಇದು ಯಕ್ಷಗಾನದ ಸುವರ್ಣ ಯುಗ ಎಂದೇ ಹೇಳಬಹುದು ಎಂಬುದು ಬನಾರಿಯವರ ಮನದಾಳದ ಮಾತು. ಕಲೆಯು ನಿಂತ ನೀರಲ್ಲ. ಅದು ನಿರಂತರ ಹರಿಯುವ ನದಿಯಂತೆ. ಕಾಲ ಕಾಲಕ್ಕೆ ಆಗಬೇಕಾದ ಬದಲಾವಣೆ
ಯಕ್ಷಗಾನದಲ್ಲಿಯೂ ಆಗಿದೆ. ವೇಷ ಭೂಷಣಗಳಲ್ಲಿ, ಶೈಲಿಯಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳೇ ಕಂಡಿದೆ. ಕಾಲಮಿತಿಯ ಯಕ್ಷಗಾನ ಪ್ರದರ್ಶನ ಉತ್ತಮ ಬೆಳವಣಿಗೆ. ಯಕ್ಷಗಾನೀಯತೆಯನ್ನು ಕಾಪಾಡಿಕೊಂಡು ಕಾಲಮಿತಿಯಲ್ಲಿ ಪ್ರದರ್ಶನ ನೀಡುವುದರಿಂದ ಕಲೆಗೆ ಏನೂ ತೊಂದರೆ ಇಲ್ಲ ಎನ್ನುತ್ತಾರವರು. ಪ್ರಸಂಗ ಮತ್ತು ಪ್ರಸಂಗಕರ್ತ ಪರಿಪೂರ್ಣ ಆಗಬೇಕಾದರೆ ಪದ್ಯ ರಚನೆ ಮತ್ತು ಕಥಾ ಸಂಯೋಜನೆ ಒಬ್ಬನೇ ಮಾಡಬೇಕು ಎಂದು ಅವರು ಹೇಳುತ್ತಾರೆ. ಯಕ್ಷಗಾನ ನಾಟ್ಯವೈಭವ ಕಲೆಯ ಆಸ್ವಾದನೆಗೆ ಉತ್ತಮವಾದರೂ ಇದರಲ್ಲಿ ಯಕ್ಷಗಾನದ ಹಾಡುಗಳನ್ನೇ ಬಳಸಿದರೆ ಉತ್ತಮ ಎಂಬುದು ಅವರ ಅಭಿಪ್ರಾಯ. ಶಾಸ್ತ್ರೀಯ ಸಂಗೀತದ ರಾಗದ ಪರಿಚಯ ಇದ್ದರೆ, ಯಕ್ಷಗಾನದಲ್ಲಿ ರಾಗ ಶುದ್ಧತೆಗೆ ಒಳ್ಳೆಯದು. ಪ್ರತಿಭೆ ಇದ್ದವರಿಗೆ ಮೇಲೆರಲು ಯಕ್ಷಗಾನ ಉತ್ತಮ ವೇದಿಕೆ. ಮಕ್ಕಳು, ಯುವ ಜನಾಂಗ ಇನ್ನಷ್ಟು ಯಕ್ಷಗಾನದ ಕಡೆಗೆ ಆಕರ್ಷಿತರಾಗಬೇಕು. ಯಕ್ಷಗಾನ ಕಲಾವಿದನಿಗೆ ಬಾಲ ಪಾಠ ಗಟ್ಟಿಯಾಗಿರಬೇಕು. ಕಲಿಕೆ ನಿರಂತರವಾಗಿರಬೇಕು. ಕಲಿಯುವವರೂ, ಕಲಿಸುವವರೂ ನಿರಂತರ ಕಲಿಯುತ್ತಾ ಇರಬೇಕು ಎಂದು ಅವರು ಹೇಳಿದರು.
ವಿಶ್ವ ವಿನೋದ ಯಕ್ಷ ಕಲಾರವ:
ಯಕ್ಷ ಕಲಾರವದ ಅಂಗವಾಗಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ದಿನಪೂರ್ತಿ ವೈವಿಧ್ಯ ಕಾರ್ಯಕ್ರಮಗಳು ಮೂಡಿ ಬರಲಿದೆ.
ಬೆಳಿಗ್ಗೆ 9 ರಿಂದ 10.30ರ ತನಕ ಬನಾರಿ ಶಿಷ್ಯ ವೃಂದದಿಂದ ವಿಶ್ವಯಕ್ಷಗಾಯನಾಭಿವಂದನೆ ಗಾನವೈಭವ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುವರು. ಯಕ್ಷಗಾನ ಗೋಷ್ಠಿ ಯಕ್ಷಗಾನ ಹಾಡುಗಾರಿಕೆ ಸಾಂಪ್ರದಾಯಿಕ ಮಟ್ಟುಗಳು – ಒಂದು ಪ್ರಾತ್ಯಕ್ಷಿಕೆ ನಡೆಯಲಿದೆ. ಮಧ್ಯಾಹ್ನ ಭೋಜನದ ಬಳಿಕ ಉಡುಪಿಯ ಕೊಡವೂರು ನೃತ್ಯ ನಿಕೇತನ ಕಲಾವಿದರಿಂದ ನೃತ್ಯ ಸಿಂಚನ ನಡೆಯಲಿದೆ. ಅಪರಾಹ್ನ 3 ಗಂಟೆಯಿಂದ ಅಭಿನಂದನಾ ಸಮಾರಂಭ ನಡೆಯಲಿದೆ.
ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸಂಜೆ 5 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಂವಾದ ಸೌರಭ ಸಂಜೆ 6.30 ರಿಂದ ಕಲಾಸಂಘದ ಕೀರಿಕ್ಕಾಡು ಯಕ್ಷಗಾನ ಅಧ್ಯಯನ ಕೇಂದ್ರದ ಬಾಲಕಲಾವಿದರಿಂದ ಯಕ್ಷಗಾನ ಬಯಲಾಟ ‘ವೀರ ಬಬ್ರುವಾಹನ’ ನಡೆಯಲಿದೆ . ರಾತ್ರಿ 8 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ‘ಮಹಿಷ ಮರ್ದಿನಿ’ ನಡೆಯಲಿದೆ .