*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ಅದೊಂದು ಕಾಲವಿತ್ತು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶವಾದ ದೇಲಂಪಾಡಿಯಲ್ಲಿ ಯಕ್ಷಗಾನ ಕಲೆಯನ್ನು ಕಲಿಯದವರು, ಅದರ ಬಗ್ಗೆ ಆಸಕ್ತಿ ಇಲ್ಲದವರು ಯಾರೂ ಇಲ್ಲ ಎಂಬ ಸ್ಥಿತಿಯಿದ್ದ ದಿನಗಳು. ಯಕ್ಷಗಾನದ ಬಗ್ಗೆ ಆಸಕ್ತಿ,ಅರಿವು ಇರುವವರೇ ಎಲ್ಲರೂ, ಪ್ರತಿ ಮನೆಯಲ್ಲೂ ಯಕ್ಷಗಾನ ಬಲ್ಲವರು, ಕಲಾವಿದರು ತುಂಬಿದ್ದರು. ಯಕ್ಷಗಾನವನ್ನು ಪ್ರಾಣ ವಾಯುವಿನಂತೆ ಜೀವನದ ಭಾಗವಾಗಿಸಿ ಆರಾಧಿಸುವ ಗ್ರಾಮ. ಆಧುನಿಕ ಕಲೆ ಮತ್ತು ಮಾಧ್ಯಮಗಳ
ಭರಾಟೆಯಲ್ಲೂ ದೇಲಂಪಾಡಿಯ ಯಕ್ಷಗಾನ ಪ್ರೀತಿಗೇನೂ ಕಮ್ಮಿಯಾಗಿಲ್ಲ. ಯಕ್ಷಗಾನ ಗ್ರಾಮವೆಂದೇ ಪ್ರಸಿದ್ಧವಾದ ದೇಲಂಪಾಡಿಗೆ ಮುಕುಟಮಣಿಯಾಗಿ ಬೆಳಗುವ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರವು ಇಲ್ಲಿನ ಜನರ ಹೃದಯದಲ್ಲಿ, ಬದುಕಿನಲ್ಲಿ ಯಕ್ಷಗಾನವನ್ನು ಬೆಳಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಎಂಟು ದಶಕಗಳ ಇತಿಹಾಸವಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘವು ಅನನ್ಯ ಯಕ್ಷಗಾನ ಸೇವೆಯ ಮೂಲಕ ಮನೆ ಮಾತಾಗಿ ಬೆಳೆದು ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿ ಬೆಳಗುತಿದೆ. ಭೂರಮೆಯ ಸ್ವರ್ಗದಂತಿರುವ ಉಭಯ ರಾಜ್ಯಗಳ ಸಾಂಸ್ಕೃತಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಈ ಚಿಕ್ಕ ಮತ್ತು ಚೊಕ್ಕ ಗ್ರಾಮದಲ್ಲಿ ಯಕ್ಷಗಾನದ ಕಂಪು ಅರಳಿಸಿದ ಮತ್ತು ಗ್ರಾಮದ ಪ್ರತಿಯೊಬ್ಬರಲ್ಲೂ ಯಕ್ಷ ಪ್ರೇಮ ಬಿತ್ತಿದ ಕೀರ್ತಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘಕ್ಕಿದೆ. ನಿರಂತರ 80 ವರ್ಷಗಳ ಯಕ್ಷ ಅಭ್ಯಾಸ ಇಲ್ಲಿನ ಹಿರಿಮೆ. ಹಿಂದೆಲ್ಲ 100 ಕ್ಕೂ ಅಧಿಕ ಮಂದಿ ಬನಾರಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಅಭ್ಯಾಸಕ್ಕೆ ಬರುತ್ತಿದ್ದರು. ಈಗಲೂ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಮಂದಿ ಆಸಕ್ತರು ಅಭ್ಯಾಸಕ್ಕೆ ಬರುತ್ತಾರೆ. ಭಾಗವತಿಕೆ, ಚೆಂಡೆ,ಮದ್ದಳೆ, ಅರ್ಥಗಾರಿಕೆ ಅಭ್ಯಾಸ,ನೃತ್ಯ ಕಲಿಯುವಿಕೆ ಇಲ್ಲಿನ ನಿರಂತರ ಪ್ರಕ್ರಿಯೆ. ಮಹಿಳೆಯರೂ, ಮಕ್ಕಳು ಸೇರಿ ಎಲ್ಲರೂ ಇಲ್ಲಿ ಯಕ್ಷಗಾನ ಕಲಿಯುತ್ತಾರೆ. ಶ್ರೀಕೃಷ್ಣನ ಸಾನ್ನಿಧ್ಯವಿರುವ
ಕೇಂದ್ರವಾಗಿರುವ ಬನಾರಿ ಯಕ್ಷಗಾನ ಸಂಘದಲ್ಲಿ ಅಭ್ಯಾಸದೊಂದಿಗೆ ತಾಳಮದ್ದಳೆ,ಯಕ್ಷಗಾನ ಬಯಲಾಟಗಳೂ ನಡೆಯುತ್ತವೆ. ಹರಕೆ ರೂಪದಲ್ಲೂ ತಾಳಮದ್ದಳೆ ನಡೆಯುತ್ತದೆ. ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅಮೃತ ಮಹೋತ್ಸವ ಅದ್ದೂರಿಯಾಗಿ ಇತ್ತೀಚೆಗೆ ಆಚರಿಸಲಾಗಿದೆ. ಪ್ರತಿವರ್ಷ ಅದ್ದೂರಿ ವಾರ್ಷಿಕೋತ್ಸವ , ಕೀರಿಕ್ಕಾಡು ಸಂಸ್ಕರಣೆ, ಕಲಾವಿದರಿಗೆ ಸನ್ಮಾನ ನಡೆಯುತ್ತಿದೆ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಹೆಸರಿನಲ್ಲಿ ಕೀರಿಕ್ಕಾಡು ಪ್ರಶಸ್ತಿ ನೀಡಿ ಯಕ್ಷ ಕಲಾವಿದರನ್ನು ಸನ್ಮಾನಿಸಲಾಗುತ್ತಿದೆ . ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಅವರ ಮಕ್ಕಳೂ ಯಕ್ಷಗಾನದ ಮೇರು ಕಲಾವಿದರೂ ಆದ ಡಾ.ರಮಾನಂದ ಬನಾರಿ , ವಿಶ್ವವಿನೋದ ಬನಾರಿ ಮತ್ತು ತಂಡ ಕಲಾಸಂಘದ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ.
ಯಕ್ಷಗಾನ ಶಾಲೆ:
ಯಕ್ಷಗಾನ ಶಾಲೆ ಯಕ್ಷಗಾನ ಕಲಿಸಲೆಂದು 8 ದಶಕಗಳ ಹಿಂದೆ ಸ್ಥಾಪಿತವಾದ ಶಾಲೆ ಬನಾರಿ ಯಕ್ಷಗಾನ ಕಲಾಸಂಘ. ಯಕ್ಷಗಾನ ಕಲೆಯ ಅನನ್ಯ ಆರಾಧಕರೂ,ಕಲಾವಿದರೂ , ಪ್ರಸಂಗ ಸಾಹಿತಿಗಳೂ , ಯಕ್ಷಗಾನ ಗುರುಗಳೂ ಆಗಿದ್ದ ದಿ.ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ 1944 ರಲ್ಲಿ ಈ ಯಕ್ಷ ಕಲಾಶಾಲೆ ಸ್ಥಾಪಿಸಿ ದೇಲಂಪಾಡಿಯನ್ನು ಕಲಾಗ್ರಾಮವಾಗಿಸಿದರು. ಉಚಿತವಾಗಿ ತರಬೇತಿ ನೀಡಿ ಸ್ವಂತ ಕಲಾತಂಡವನ್ನು ಕಟ್ಟಿ ಅತಿಥಿ ಕಲಾವಿದರನ್ನೂ ಸೇರಿಸಿ ತಾಳಮದ್ದಳೆಗಳನ್ನೂ , ಯಕ್ಷಗಾನ ಬಯಲಾಟ ನಡೆಸಲು ಪ್ರಾರಂಭಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಯಕ್ಷ ಪರಂಪರೆ ಇಂದಿಗೂ ಮುಂದುವರಿದಿದೆ . ಎಂಟು ದಶಕಗಳಲ್ಲಿ ಅಸಂಖ್ಯ ಕಲಾವಿದರು ಗೆಜ್ಜೆ ಕಟ್ಟಿ ಈ ಮಣ್ಣನ್ನು ಪಾವನಗೊಳಿಸಿದ್ದಾರೆ. ವಿಷ್ಣು ಭಟ್ಟರು ತನ್ನ ಮನೆಯ ಚಾವಡಿಯಲ್ಲಿ ತರಬೇತಿ ಆರಂಭಿಸಿದ ಕಲಾಸಂಘ ನಿರಂತರ 80 ವರ್ಷ ಕಾಲ ಕಲಾಸೇವೆ ಮುಂದುವರಿಸುತ್ತಾ ಬಂದಿದೆ.
ಯಕ್ಷಗಾನ ಅಧ್ಯಯನ ಕೇಂದ್ರ:
ಕರಾವಳಿ ಜಿಲ್ಲೆಯಲ್ಲೇ ಸುದೀರ್ಘ ಕಾಲ ಯಕ್ಷಗಾನ ಸೇವೆ ಮಾಡಿದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಯಕ್ಷ ಕಲೆಯ ಸಂಶೋಧನಾ ಕೇಂದ್ರವಾಗಬೇಕು ಎಂದು ಮೊದಲು ಆಶಯ ವ್ಯಕ್ತಪಡಿಸಿದವರು ಬನಾರಿಗೆ ಅತಿ ಸಮೀಪದ ದೇವರಗುಂಡದವರಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು. ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬನಾರಿ ಯಕ್ಷಗಾನ ಸಂಘವನ್ನು ಅಧ್ಯಯನ ಕೇಂದ್ರವಾಗಿಸುವ ನಿಟ್ಟಿ ನಲ್ಲಿ ಅನುದಾನವನ್ನೂ ಒದಗಿಸಿದ್ದರು. ಸರ್ಕಾರದ ಆರ್ಥಿಕ ನೆರವಿನೊಂದಿಗೆ ಯಕ್ಷಗಾನ ಕಲಾಸಂಘಕ್ಕೆ ಕೆಲವು ವರ್ಷಗಳ ಹಿಂದೆ ಸುಂದರ ಕಟ್ಟಡ ತಲೆಯೆತ್ತಿದೆ. ಜತೆಗೆ ಈ ಯಕ್ಷಗಾನ ಕಲಾಶಾಲೆಯು ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿ ಮಾರ್ಪಾಡಾಗಿದೆ. ಒಟ್ಟಿನಲ್ಲಿ ಯಕ್ಷ ಗ್ರಾಮದ ಸಾಂಸ್ಕೃತಿಕ ಕೇಂದ್ರದಲ್ಲಿ
ಯಕ್ಷ ಕಲಿಕೆ, ಪ್ರದರ್ಶನ, ಯಕ್ಷಗಾನ ಅಧ್ಯಯನ, ಆರಾಧನೆ ಸೇರಿ ಯಕ್ಷ ಕಲರವ. ನಿತ್ಯ ನಿರಂತರ..!