*ಅನಿಲ್ ಎಚ್.ಟಿ.
ಅದೊಂದು ಅಪೂರ್ವ ಅನುಭವ..! ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿ ಚೆನ್ನೈಗೆ ಮೊದಲ ಪಯಣ ಪ್ರಾರಂಭಿಸಿದ್ದ ವಂದೇ ಭಾರತ್ ಎಂಬ ವಿನೂತನ ರೈಲಿನಲ್ಲಿ ಅದು ಮೈಸೂರಿಗೆ ಬಂದ ಎರಡನೇ ದಿನವೇ ಪ್ರಯಾಣಿಸಲು ಅವಕಾಶ ದೊರಕಿದ ಕ್ಷಣ. ನಿಜಕ್ಕೂ ಅಪೂರ್ವ.. ದೇಶದ ಅತ್ಯಾಧುನಿಕ ಮತ್ತು ಸೆಮಿ ಹೈಸ್ಪೀಡ್ ರೈಲು ಎಂಬ ಹೆಗ್ಗಳಿಕೆಯಟ್ರೈನ್ 18 ಅಥವಾ ವಂದೇ ಭಾರತ್ ಚಾಲನೆಗೊಂಡ ಎರಡನೇ ದಿನದಲ್ಲಿಯೇ ಮೈಸೂರು ರೈಲು ನಿಲ್ದಾಣದಲ್ಲಿ ಅದನ್ನು ಬರಮಾಡಿಕೊಂಡವರಲ್ಲಿ ನಾನೂ ಓರ್ವನಾಗಿದ್ದೆ.!
ಮೈಸೂರಿನಲ್ಲಿಯೇ ವಂದೇಭಾರತ್ ನೋಡಲು ಜನ ಪ್ರವಾಹವೇ ಕಂಡುಬಂದಿತ್ತು. ವಂದೇಭಾರತ್ ಮುಂಬದಿ ಸೆಲ್ಫಿ ಕ್ಲಿಕ್ಕಿಸುವವರು. ಪೋಟೋ ತೆಗೆಸಿಕೊಳ್ಳುವವರ ಸಂಭ್ರಮ ನೋಡುವುದೇ ಚಂದ. ಇಂಥವರ ಸಂಭ್ರಮಕ್ಕಾದರೂ ತಿಂಗಳಿಗೊಂದು ಹೊಸ ವಿನ್ಯಾಸದ ರೈಲು ಚಾಲನೆಗೊಳ್ಳಬಾರದೇ ಎಂದೂ ಅನ್ನಿಸಿತ್ತು..!!!!
ವಂದೇಭಾರತ್ ಹೊರವಿನ್ಯಾಸವೇ ವಿಶಿಷ್ಟವಾಗಿದ್ದರೆ ವಂದೇ ಭಾರತ್

ರೈಲಿನ ಒಳವಿನ್ಯಾಸ ಕೂಡ ಇದರ ವೇಗದಂತೆಯೇ ಪ್ರಯಾಣಿಕರ ಮಚ್ಚುಗೆ ಗಳಿಸಿದೆ.ದೇಶದ 5 ನೇ ಮತ್ತು ದಕ್ಷಿಣ ಭಾರತದ ಮೊದಲನೇ ವಂದೇಭಾರತ್ ರೈಲು ಪ್ರಾರಂಭಿಕ ದಿನಗಳಿಂದಲೇ ಉತ್ತಮ ಸ್ಪಂದನೆ ದೊರಕಿಸಿಕೊಂಡಿದೆ.ನೀಲಿಯೊಂದಿಗೆ ಶ್ವೇತವಣ೯ದಿಂದ ಕಂಗೊಳಿಸುತ್ತಿರುವ ವಂದೇಭಾರತ್ ಮೈಸೂರು – ಬೆಂಗಳೂರು – ಚೆನ್ನೈ ನಡುವಿನ ರೈಲು ಪ್ರಯಾಣಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಶತಾಬ್ದಿ ಹೊರತು ಪಡಿಸಿದಂತೆ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಅತ್ಯಾಧುನಿಕ ಸೌಕರ್ಯಗಳ ಮತ್ತೊಂದು ರೈಲಾಗಿರುವ ವಂದೇಭಾರತ್ ವೇಗದಲ್ಲಿ ಶತಾಬ್ದಿಯನ್ನೂ ಮೀರಿಸಿದೆ.ಮೈಸೂರು ಚೆನ್ನೈ ನಡುವೆ ಅತ್ಯಾಧುನಿಕ ರೈಲಾಗಿ ಶತಾಬ್ದಿ ಎಕ್ಸ್ ಪ್ರೆಸ್ ಪ್ರಯಾಣ ಆರಂಭಿಸಿದ 28 ವರ್ಷಗಳ ಬಳಿಕ ಮತ್ತೊಂದು ಅತ್ಯಾಧುನಿಕ ರೈಲು ಇದೇ ಮಾರ್ಗದಲ್ಲಿ ಪ್ರಯಾಣ ಪ್ರಾರಂಭಿಸಿದೆ.
ಗಂಟೆಗೆ 160 ಕಿ.ಮೀ ವೇಗದ ಸಾಮರ್ಥ್ಯವಿರುವ ವಂದೇಭಾರತ್ ಸದ್ಯಕ್ಕೆ ಮೈಸೂರು – ಚೆನ್ನೈ ನಡುವೆ 100 ಕಿ.ಮೀ. ವೇಗದೊಂದಿಗೆ ಸಂಚರಿಸುತ್ತಿದೆ.ರೈಲಿನಲ್ಲಿ ಏರೋಡೈನಾಮಿಕ್ಸ್ ಸೌಲಭ್ಯವಿರುವುದರಿಂದ ಗಾಳಿಯ ಪ್ರಬಲ ವೇಗವನ್ನೂ ಭೇದಿಸಿ ರೈಲು ವೇಗವಾಗಿ ಸಾಗುತ್ತದೆ. ಬೇರೆ ರೈಲಿನಂತೆ ಪ್ರತ್ಯೇಕ ಇಂಜಿನ್ ಹೊಂದಿರದ ವಂದೇಭಾರತ್ ಮುಂಬದಿಯೇ ಆಕರ್ಷಕ ವಿನ್ಯಾಸದೊಂದಿಗೆ ಮೇಡ್ ಇನ್ ಇಂಡಿಯಾ ಪರಿಕಲ್ಪನೆಗೆ ಸಾಕ್ಷಿ ಹೇಳುತ್ತಿದೆ.ಹಳಿಯ ಮೇಲೆ ವೇಗದಿಂದ ಸಾಗುವ ವಿಮಾನದ ಅನುಭವ ತರಬಲ್ಲ ವಂದೇಭಾರತ್ ವಿಮಾನದಂತೆ ಎಲ್ಲಾ ಐಷಾರಾಮಿ ಸೌಲಭ್ಯವನ್ನೂ ತನ್ನಲ್ಲಿ ಹೊಂದಿದೆ.

ಸಂಪೂಣ೯ ಹವಾನಿಯಂತ್ರಿತವಾಗಿರುವ 16 ಬೋಗಿಗಳಲ್ಲಿ 1230 ಮಂದಿ ಹಾಯಾಗಿ ಕೂರಬಹುದಾದ ಐಷಾರಾಮಿ ಆಸನವೂ ವಂದೇಭಾರತ್ ಆಕರ್ಷಣೆಯಾಗಿದ್ದು, ವೈಫೈ ಸೌಲಭ್ಯವಿರುವುದರಿಂದ ..
ಉದ್ಯೋಗಿಗಳಿಗೆ ವರ್ಕ್ ಫ್ರಂ.. ವಂದೇಭಾರತ್ ಕೂಡ ಸುಲಭ ಸಾಧ್ಯವಾಗಿದೆ!!
ಚಾರ್ಜಿಂಗ್ ಪಾಯಿಂಟ್, ಮಿನಿ ರೀಡಿಂಗ್ ಲೈಟ್ ಕೂಡ ಆಸನದ ಬಳಿಯಿದೆ. ಬ್ರೈಲ್ ಲಿಪಿ, ವಿಶೇಷ ಚೇತನರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕೂಡ ವಂದೇಭಾರತ್ ವಿಶೇಷತೆ. ಬೋಗಿಯಿಂದ ಬೋಗಿಯ ಮಧ್ಯೆ ಸ್ವಯಂಚಾಲಿತ ಬಾಗಿಲು, ಸಿಸಿ ಕ್ಯಾಮರ, ಬಯೋಟಾಯ್ಲೆಟ್ ಕೂಡ ವಂದೇಭಾರತ್ನಲ್ಲಿದೆ. ಪ್ರತೀ ಬೋಗಿಯಲ್ಲಿಯೂ ಪ್ರಯಾಣಿಕರಿಗೆ ನೆರವು ನೀಡಲು ಮತ್ತು ಉಪಹಾರ ವಿತರಿಸಲು ತಲಾ ಇಬ್ಬರು ಸಿಬ್ಬಂದಿಗಳಿದ್ದಾರೆ. ಎಕ್ಸಿಕ್ಯೂಟೂವ್ ಕ್ಲಾಸ್ ನಲ್ಲಿ ಚೇರ್ಗಳು 180 ಡಿಗ್ರಿ ತಿರುಗುತ್ತದೆ. ಅಂದರೆ ಚೇರ್ ತಿರುಗಿಸಿಕೊಂಡು ಕೆಲಹೊತ್ತು ಕಿಟಕಿಯಾಚೆ ನೋಡುತ್ತಾ ಕೂರಬಹುದು.ಮೈಸೂರಿನಿಂದ ಮಧ್ಯಾಹ್ನ 1.05 ಗಂಟೆಗೆ ಹೊರಟು ಬೆಂಗಳೂರಿಗೆ 2.55 ಕ್ಕೆ ತಲುಪಿ ಚೆನ್ನೈಗೆ 7.35 ಗಂಟೆಗೆ ತಲುಪುವ ವಂದೇಭಾರತ್ ಚೆನ್ನೈನಿಂದ ಮುಂಜಾನೆ 5.50 ಗಂಟೆಗೆ ಹೊರಟು ಬೆಂಗಳೂರಿಗೆ 10.25 ಗಂಟೆಗೆ ತಲುಪಿ, ಮೈಸೂರಿಗೆ ಮಧ್ಯಾಹ್ನ 12.15 ಗಂಟೆಗೆ ತಲುಪುತ್ತದೆ. ಬೆಂಗಳೂರಿನಲ್ಲಿ ಕೇವಲ 5 ನಿಮಿಷ ಮಾತ್ರ ನಿಲುಗಡೆಯಾಗಿ ಮತ್ತೆ ಮುಂದೆ ಸಾಗುತ್ತದೆ.

ನವದೆಹಲಿ – ವಾರಣಾಸಿ, ನವದೆಹಲಿ – ವೈಷ್ಮೋದೇವಿ, ಗಾಂಧಿ ನಗರ – ಮುಂಬೈ, ನವದೆಹಲಿ – ಉನಾ , ಮೈಸೂರು – ಚೆನ್ನೈ ಮಾರ್ಗ ಸೇರಿದಂತೆ ಪ್ರಸ್ತುತ ಭಾರತದಲ್ಲಿ 5 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿದೆ.ಕವಚ್ ತಾಂತ್ರಿಕ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಅಳವಡಿಸುವ ಮೂಲಕ ಎದುರಿನಿಂದ ಆಕಸ್ಮಿಕವಾಗಿ ರೈಲು ಬಂದರೆ ಡಿಕ್ಕಿಯಾಗುವುದನ್ನು ತಡೆಯಲಾಗುತ್ತದೆ. ಪ್ರಸ್ತುತ, ವಂದೇಭಾರತ್ ನಲ್ಲಿ ತುರ್ತು ಸಂದರ್ಭದಲ್ಲಿ ರೈಲು ನಿಲುಗಡೆಗೊಳ್ಳಲು ಚೈನ್ ಎಳೆಯುವ ಹಳೇ ವ್ಯವಸ್ಥೆಯಿಲ್ಲ. ಬದಲಿಗೆ ಪ್ರತೀ ಬೋಗಿಯಲ್ಲಿಯೂ ರೈಲಿನ ಚಾಲಕ (ಲೋಕೋ ಪೈಲಟ್ ) ಜತೆ ಮಾತನಾಡಲು ಅನುಕೂಲವಾಗುವಂತೆ ಸ್ಕೀಕರ್ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ಬಳಸಿ ರೈಲು ನಿಲುಗಡೆಗೊಳ್ಳುವಂತೆ ಮಾಡಲು ಸಾಧ್ಯವಿದೆ ಎಂದು ದಕ್ಷಿಣ ರೈಲ್ವೇ ವಿಭಾಗದ ಪ್ರಧಾನ ಮೆಕ್ಯಾನಿಕಲ್ ಇಂಜಿನಿಯರ್ ಸುಬ್ಬರಾವ್ ಮಾಹಿತಿ ನೀಡಿದರು.
ಮೈಸೂರು – ಬೆಂಗಳೂರು – ಚೆನ್ನೈ , ಚೆನ್ನೈ – ಬೆಂಗಳೂರು – ಮೈಸೂರಿಗೆ ವಂದೇಭಾರತ್ ನಲ್ಲಿ ಸಂಚರಿಸಿದ ಸಂದಭ೯ ಕೊನೆಗೆ ಅನ್ನಿಸಿದ್ದು ಇಷ್ಟೇ..
ವಿದೇಶಗಳಲ್ಲಿ ವೇಗ, ಐಷಾರಾಮಿ ರೈಲು ನೋಡಿ ಮನಸೋತಿದ್ದವರು ಖಂಡಿತಾ ವಂದೇಭಾರತ್ ನೋಡಿದರೆ..ಸಾಗಿದರೆ.. ನವಭಾರತದ ಕನಸು ಸಾಕಾರಗೊಳ್ಳುತ್ತಿದೆ ಎಂಬ ಭಾವನೆ ಬಂದೇ ಬರುತ್ತದೆ.

ಇಲ್ಲ.. ಇಲ್ಲ.. ವಂದೇಭಾರತ್ ಹಾಗಿರಬೇಕಿತ್ತು.. ಹೀಗಿರಬೇಕಾಗಿತ್ತು.. ವಿದೇಶಗಳಲ್ಲಿ ಇನ್ನೂ ವೇಗವಿದೆ. ಅಲ್ಲಿ ರೈಲಿನ ಮೂತಿ ಬುಲೆಟ್ ತರ ಇದೆ. ಎಸಿ ಮತ್ತಷ್ಟು ಕೂಲ್ ಆಗಿದೆ. ಭಾರತದಲ್ಲಿ ಇನ್ನೂ ಹಾಗೆಲ್ಲಾ ಆಗಿಲ್ಲ..ತಿಂಡಿ ಸರಿ ಕೊಡೋಲ್ಲ..ಭಾರತದಲ್ಲಿ ಏನೂ ಆಗಿಲ್ಲ ಬಿಡ್ರಿ.. ಅಂತೆಲ್ಲಾ ಹೀಗಳೆಯುವವರು ಇದ್ದೇ ಇದ್ದಾರೆ.ಇರಲಿ ಬಿಡಿ.. ಅವರವರ ಭಾವನೆಗಳು ಅವರವರಿಗೆ…!!!
ಎಲ್ಲಿಯವರೆಗೆ ರೈಲ್ವೇ ಟ್ರಾಕ್ ನ್ನು ಶೌಚಾಲಯವಾಗಿ ಬಳಸುವವರು…
ರೈಲ್ವೇ ನಿಲ್ದಾಣದಲ್ಲಿಯೇ ಹಲ್ಲುಜ್ಜಿ ಪ್ಲಾಟ್ ಫಾರಂಗೆ ಉಗಿಯುವವರು,
ಪೊಲೀಸ್ ಬರುವವರೆಗೆ ಬೀಡಿ, ಸಿಗರೇಟ್ ರೈಲಿನಲ್ಲಿ ಸೇದುವವರು,
ರೈಲ್ವೇ ಟಾಯ್ಲೆಟ್ ಬಳಸಿ ನೀರು ಹಾಕೋದು ತನ್ನ ಹೊಣೆಯಲ್ಲ ಅಂಥ ಬಾಗಿಲು ಮಾತ್ರ ಹಾಕಿ ಬರುವವರು, ರೈಲಿನಲ್ಲಿ, ನಿಲ್ದಾಣಗಳಲ್ಲಿ

ಕಂಡಕಂಡಲ್ಲಿ ಪ್ಲಾಸ್ಟಿಕ್ , ತ್ಯಾಜ್ಯ, ಊಟ, ತಿಂಡಿ ಬಿಸಾಡಿ.. ಇಂಡಿಯಾದಲ್ಲಿ ಏನೂ ಸರಿಯಿಲ್ಲ ಅನ್ನುವವರು…ಇರುವವರೆಗೆ…..ಇಸ್ಟೇ..!
ಇಂಥವರ ಮಧ್ಯೆಯೇ ಭಾರತೀಯ ರೈಲ್ವೆಯ ಹೆಮ್ಮೆಯ ಶತಾಬ್ದಿ.. ಮೆಚ್ಚಿನ ವಂದೇ ಭಾರತ್ ವೇಗವಾಗಿ ಮುಂದೆ ಓಡುತ್ತಲೇ ಇರುತ್ತದೆ. ತೆಗಳುವವರನ್ನು ಹಿಂದಿಕ್ಕಿ..
ಸಾಗುತ್ತಲೇ ಇರುತ್ತದೆ.
ಇದು.. ವಂದೇ ಭಾರತ್
ಇದು .. ವಂದೇ ಮಾತರಂ…!!

(ಅನಿಲ್ ಎಚ್.ಟಿ.ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು)