ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕೆಳಗಡೆ ಇರುವ ಸಂಸ್ಥೆಗಳಲ್ಲಿ ಯಾವುದೇ ಗೊಂದಲಗಳಾಗಲೀ, ಭಿನ್ನಾಭಿಪ್ರಾಯಗಳಾಗಲೀ ಇಲ್ಲ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹೇಳಿದ್ದಾರೆ. ಡಾ.ಕೆ.ವಿ.ರೇಣುಕಾಪ್ರಸಾದ್ ಅವರು ನಡೆಸಿದ ಪತ್ರಿಕಾಗೋಷ್ಠಿಗೆ ಸ್ಪಷ್ಟೀಕರಣ ನೀಡಲು ಸುಳ್ಯ ಆಯುರ್ವೇದ ಕಾಲೇಜಿನ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ವಿದ್ಯಾಸಂಸ್ಥೆಗಳ ದೈನಂದಿನ ಚಟುವಟಿಕೆಗಳ ಮೇಲೆ
ವ್ಯತಿರಿಕ್ತ ಪರಿಣಾಮ ಆಗಿರುವ ಬಗ್ಗೆ ಯಾವುದೇ ಮಾಹಿತಿಗಳು ಆಡಳಿತ ಮಂಡಳಿಯ ಗಮನಕ್ಕೆ ಬಂದಿರುವುದಿಲ್ಲ ಹಾಗೂ ಇದು ಸತ್ಯಕ್ಕೆ ದೂರವಾಗಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸೊಸೈಟಿಯ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳ,ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ಪೋಷಕರ ಯಾವುದೇ ರೀತಿಯ ಕುಂದು ಕೊರತೆಗಳನ್ನು ಹೋಗಲಾಡಿಸಲು ನಮ್ಮ ಆಡಳಿತ ಮಂಡಳಿ ಸಂಪೂರ್ಣವಾಗಿ ಕಟಿಬದ್ಧವಾಗಿದೆ. ಹಾಗಾಗಿ ಈ ಬಗ್ಗೆ ನಮ್ಮ ವಿದ್ಯಾ ಸಂಸ್ಥೆಗಳ ಸಿಬ್ಬಂದಿಗಳು, ವಿದ್ಯಾರ್ಥಿಗಳು ಗೊಂದಲಗೊಳ್ಳುವ ಅಗತ್ಯವಿಲ್ಲ ಮತ್ತು ಯಾವುದೇ ಪ್ರತಿಭಟನೆ ಮಾಡುವ ಅವಶ್ಯಕತೆ ಇರುವುದಿಲ್ಲ.ಸಿಬ್ಬಂದಿಗಳು ಆಡಳಿತ ಮಂಡಳಿಯ ಗಮನಕ್ಕೆ ತಾರದೇ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸದೇ,ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಅವರು ಹೇಳಿದರು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸಂಸ್ಥೆಯು ಸೊಸೈಟಿ ಕಾಯಿದೆ ಪ್ರಕಾರ ನೋಂದಣಿಯಾಗಿ ನಡೆಯುತಿದೆ.
ಡಾ.ರೇಣುಕಾಪ್ರಸಾದ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆರವು ಮಾಡಿರುವುದು ಹಾಗೂ ಡಾ.ಜ್ಯೋತಿ ಆರ್ ಪ್ರಸಾದ್ ಮತ್ತು ಡಾ.ಅಭಿಜ್ಞಾ ರವರನ್ನು ಆಡಳಿತ ಮಂಡಳಿ ನಿರ್ದೇಶಕ ಸ್ಥಾನದಿಂದ ತೆರವುಗೊಳಿಸಿರುವುದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ವಾರ್ಷಿಕ ಮಹಾಸಭೆಯಲ್ಲಿ ಕೈಗೊಂಡ ಬಹುಮತದ ನೀತಿ ನಿಯಮಾವಳಿಗಳ ಪ್ರಕಾರವೇ ಸಡೆಸಲಾಗಿದೆ. ಸಂಸ್ಥೆಯ ಸದಸ್ಯರಾಗಿರುವ ಅವರಿಗೆ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಆಡಳಿತ ಮಂಡಳಿಯ ಎಲ್ಲಾ ಹುದ್ದೆಗಳಿಗೆ ಸ್ಪರ್ಧಿಸಿ ಅದನ್ನು ಪಡೆಯುವ ಅವಕಾಶ ಇದೆ ಎಂದು ಡಾ.ಚಿದಾನಂದ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ. ಕೆ.ವಿ.ಹೇಮನಾಥ್, ಜಗದೀಶ್ ಅಡ್ತಲೆ, ಪ್ರದೀಪ್ ಕುಮಾರ್ ಕೆ.ಎಲ್ ಉಪಸ್ಥಿತರಿದ್ದರು.