ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ರಸ್ತೆ, ನೀರು ಸೇರಿದಂತೆ ಮೂಲಭೂತ ಅಭಿವೃದ್ಧಿ ಕಾಣದೆ ಜನರು ಭ್ರಮ ನಿರಶನಗೊಂಡಿದ್ದಾರೆ. ಸುಳ್ಯದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸುಳ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ನಡೆದ ಚುನಾವಣಾ ಸಂಪರ್ಕ
ಅಭಿಯಾನದಲ್ಲಿ ಮನೆ ಮನೆ ಭೇಟಿ ನೀಡಿದಾಗ ಜನರು ಬದಲಾವಣೆ ಬಯಸಿರುವುದು ಕಂಡು ಬಂದಿದೆ. ಕಳೆದ ಅನೇಕ ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ.ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ. ಇದರಿಂದ ಜನರು ಭ್ರಮ ನಿರಶನಗೊಂಡಿದ್ದಾರೆ. ಅರಂತೋಡು-ತೊಡಿಕಾನ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಕಾಂಗ್ರೆಸ್ ಶಾಸಕರು ಬಂದರೆ ಅರಂತೋಡು ತೊಡಿಕಾನ ಭಾಗದ ಅಭಿವೃದ್ಧಿಗೆ 20 ಕೋಟಿ ಅನುದಾನ ತರಿಸುತ್ತೇವೆ.ಇದಕ್ಕೆ ನಾನು ಗ್ಯಾರಂಟಿ ಎಂದ ಶಹೀದ್ ಕಾಂಗ್ರೆಸ್ನ ಎಲ್ಲಾ ಮುಖಂಡರು ಸೇರಿ ಪ್ರಯತ್ನ ನಡೆಸಿ ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ತರಿಸುತ್ತೇವೆ ಎಂದು ಹೇಳಿದರು. 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ 6 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಇದನ್ನು ಈಡೇರಿಸಿಯೇ ಈಡೇರಿಸುತ್ತೇವೆ.
ಕಳೆದ ಬಾರಿ ಸಿದ್ದರಾಮಯ್ಯ ಸರಕಾರ ನೀಡಿದ 165 ಭರವಸೆಗಳಲ್ಲಿ 158 ನ್ನು ಈಡೇರಿಸಿದ್ದೇವೆ. ಈ ಬಾರಿಯೂ ಎಲ್ಲಾ ಭರವಸೆಗಳ ಈಡೇರಿಕೆಗೆ ಬದ್ಧರಾಗಿದ್ದೇವೆ ಎಂದು ಹೇಳಿದರು. ಜನರಿಗೆ ಅಭಿವೃದ್ಧಿ ಬೇಕೇ ಹೊರತು ಭಾವನೆಗಳು ಬೇಕಾಗಿಲ್ಲ ಎಂದ ಅವರು ಕಳೆದ ವರ್ಷ ಸಂಪಾಜೆ ಭಾಗದಲ್ಲಿ ಪ್ರಾಕೃತಿಕ ವಿಕೋಪ, ಭೂಪಂಪ ಉಂಟಾದ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಈಡಾಗಿದ್ದರೂ ಸರಕಾರ ಸ್ಪಂದಿಸಿಲ್ಲ. ಯಾವುದೇ ಪರಿಹಾರ ನೀಡಿಲ್ಲ, ಹೊಳೆಯಲ್ಲಿ ತುಂಬಿರುವ ಹೂಳೆತ್ತಲು ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ ಮಾತನಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಿಂದ ಕ್ಷೇತ್ರದಲ್ಲಿ ಸಂಚಲನ ಮೂಡಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ ಸೇರಿದಂತೆ ಕೃಷಿಕರ ಸಮಸ್ಯೆ, ಕ್ಷೇತ್ರದ ಮೂಲಭೂತ ಸಮಸ್ಯೆಗಳ ಬಗ್ಗೆ ಖರ್ಗ ಅವರಿಗೆ ಅರಿವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸುಳ್ಯ ಕ್ಷೇತ್ರದಲ್ಲಿ ಜಿ.ಕೃಷ್ಣಪ್ಪ ಜಯ ಗಳಿಸಿದರೆ ಸುಳ್ಯಕ್ಕೆ ಎಲ್ಲಾ ನಾಯಕರ ಮೂಲಕ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಣೆ ಮಾಡಿಸುತ್ತೇವೆ ಎಂದು ಹೇಳಿದರು.