ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಎರಡನೇ ಟೆಸ್ಟ್ನ ಅಂತಿಮ ದಿನವಾದ ಸೋಮವಾರ ಮಳೆಯ ಕಾರಣ ಆಟ ನಡೆಯಲಿಲ್ಲ. ಚಹಾ ವಿರಾಮದವರೆಗೂ ಮಳೆ ನಿಲ್ಲದ ಕಾರಣ ದಿನದಾಟವನ್ನು ರದ್ದುಗೊಳಿಸಲಾಯಿತು. ಇದರಿಂದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.ಮೊದಲ ಟೆಸ್ಟ್ ಪಂದ್ಯವನ್ನು
ಇನಿಂಗ್ಸ್ ಹಾಗೂ 141 ರನ್ಗಳಿಂದ ಗೆದ್ದಿದ್ದ ರೋಹಿತ್ ಶರ್ಮಾ ಬಳಗ, ಎರಡು ಪಂದ್ಯಗಳ ಸರಣಿಯನ್ನು 1–0 ರಲ್ಲಿ ತನ್ನದಾಗಿಸಿಕೊಂಡಿತು.
ಪಂದ್ಯದ ನಾಲ್ಕನೇ ದಿನವಾದ ಭಾನುವಾರ 365 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಆತಿಥೇಯ ತಂಡವು 32 ಓವರ್ಗಳಲ್ಲಿ 2 ವಿಕೆಟ್ಗಳಿಗೆ 76 ರನ್ ಗಳಿಸಿತ್ತು. ವಿಂಡೀಸ್ ಗೆಲುವಿಗೆ ಇನ್ನೂ 289 ರನ್ಗಳು ಬೇಕಿದ್ದವು, ಭಾರತಕ್ಕೆ ಎಂಟು ವಿಕೆಟ್ಗಳ ಅಗತ್ಯವಿತ್ತು. ಆದರೆ ಮಳೆಯದ್ದೇ ಆಟ ನಡೆಯಿತು.
ಭಾರತ ತಂಡವು ಎರಡನೇ ಇನಿಂಗ್ಸ್ನಲ್ಲಿ 24 ಓವರ್ಗಳಲ್ಲಿ 2 ವಿಕೆಟ್ಗಳಿಗೆ 181 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ (57; 44ಎ) ಹಾಗೂ ಇಶಾನ್ ಕಿಶನ್ (ಔಟಾಗದೆ 52; 34ಎ) ಅವರು ವೇಗದ ಅರ್ಧಶತಕಗಳನ್ನು ಗಳಿಸಿದರು. ಮೊದಲ ಇನ್ನೀಂಗ್ಸ್ನಲ್ಲಿ ಭಾರತ 438 ರನ್ ಮತ್ತು ವೆಸ್ಟ್ ಇಂಡೀಸ್ 255 ರನ್ ಗಳಿಸಿತ್ತು.