ಸುಳ್ಯ: ಮನಸ್ಸನ್ನು ಸೆಳೆಯುವ, ಮನಸ್ಸಿನಾಳಕ್ಕೆ ಇಳಿದು ಹೃದಯವನ್ನು ಅರಳಿಸುವ ಅದ್ಭುತ ಸಿದ್ದಿ ಚಿತ್ರಕಲೆಗಿದೆ. ಚಿತ್ರಕಲೆಯ ಮೂಲಕ ಸ್ವಚ್ಚತೆಯ ಅರಿವು ಮತ್ತು ಜಾಗೃತಿ ಮೂಡಿಸುವ ಅಭಿಯಾನ ಈಗ ಸುಳ್ಯ ನಗರದಲ್ಲಿ ನಡೆಯುತಿದೆ. ಇದರ ಅಂಗವಾಗಿ ಸುಳ್ಯ ನಗರದಲ್ಲಿ ಸ್ವಚ್ಛತೆಯ ಸಂದೇಶ ಮತ್ತು ಜಾಗೃತಿ ಸಾರುವ ಚಿತ್ರಗಳು ವಿವಿಧ ಕಡೆಗಳಲ್ಲಿ ಅರಳಲಿದೆ. ನಗರ ಪಂಚಾಯತ್ ಅನುದಾನದಲ್ಲಿ ಸುಳ್ಯದ ಪಶುವೈದ್ಯಕೀಯ ಇಲಾಖೆಯ ಕಟ್ಟಡದ ಕಂಪೌಂಡ್ನ ಹೊರ ಭಾಗದಲ್ಲಿ
ಚಿತ್ರ ರಚನೆ ಆರಂಭಿಸಲಾಗಿದೆ. ಶಿವ ಆರ್ಟ್ಸ್ನ ಶಿವರಾಮ ಚೊಕ್ಕಾಡಿ ನೇತೃತ್ವದಲ್ಲಿ ಕಲಾವಿದರು ವೈವಿಧ್ಯಮಯ ಮತ್ತು ಆಕರ್ಷಕ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಸ್ವಚ್ಛ ಭಾರತದ ಕಲ್ಪನೆಯ ಸಂದೇಶದ ಸಾರುವ ಚಿತ್ರ, ಮಹಾತ್ಮಾ ಗಾಂಧೀಜಿಯವರ ಚಿತ್ರ. ಶಾಲೆಗಳಲ್ಲಿನ ಸ್ವಚ್ಛತೆ ಸಾರುವ ಚಿತ್ರ, ಪೌರ ಕಾರ್ಮಿಕರು ನಗರ ಸ್ವಚ್ಛತೆ ಮಾಡುವ ಚಿತ್ರ, ಪ್ಲಾಸ್ಟಿಕ್ ತ್ಯಾಜ್ಯದ ನಿರ್ಮೂಲನೆಯ ಚಿತ್ರ, ಹಸುವೊಂದು ಪ್ಲಾಸ್ಟಿಕ್ ತಿಂದಾಗ ಅದರ ದೇಹದಲ್ಲಿ ಉಂಟಾಗುವ ಸಮಸ್ಯೆ ಮತ್ತು ದುಷ್ಪರಿಣಾಮದ ಚಿತ್ರ ಹೀಗೆ ವಿವಿಧ ಸಂದೇಶಗಳನ್ನು ಸಾರುವ ಚಿತ್ರಗಳನ್ನು ಬಿಡಿಸಲಾಗುತ್ತಿದೆ.
ಚಿತ್ರ ಕಲಾವಿದರಾದ ಶಿವ ಆರ್ಟ್ಸ್ನ ಶಿವರಾಮ ಚೊಕ್ಕಾಡಿ, ಮಾಧವ ಐವರ್ನಾಡು, ಈಶ್ವರ ಎಲಿಮಲೆ, ಹರೀಶ್ ಕಳಂಜ ಚಿತ್ರ ರಚನೆಯಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯ ಹೊರ ಭಾಗದ ಕಂಪೌಂಡ್ನಲ್ಲಿ ಆರು ಚಿತ್ರಗಳು ರಚಿಸಲಾಗುತ್ತದೆ. ಮುಂದಿನ ಹಂತದಲ್ಲಿ ವಿವಿಧ ಕಡೆಗಳಲ್ಲಿ ಈ ರೀತಿಯ ಜಾಗೃತಿ ಸಂದೇಶ ಸಾರುವ ಚಿತ್ರಗಳು ಅರಳಲಿದೆ.
ಸ್ಚಚ್ಛತೆಯ ಕಡೆಗೆ ಒಂದು ಹೆಜ್ಜೆ ಎಂಬುದು ನಗರ ಪಂಚಾಯತ್ನ ಧ್ಯೇಯ ವಾಕ್ಯ.ಸ್ವಚ್ಛತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತಿದೆ.ಕಸದ ಬಗ್ಗೆ, ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಚಿತ್ರಕಲೆಯ ಮೂಲಕ ಸಂದೇಶ ಸಾರುವ ಒಂದು ಪ್ರಯತ್ನ ಈ ಚಿತ್ರಕಲಾ ಅಭಿಯಾನ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಹೆಚ್.ಎಂ.ಸುಧಾಕರ್ ಹೇಳಿದ್ದಾರೆ. ಪ್ಲಾಸ್ಟಿಕ್ ಬಳಕೆ, ಪರಿಸರದಲ್ಲಿ, ಪ್ರಾಣಿ ಪಕ್ಷಿಗಳ ಮೇಲೆ ಎಂತಹಾ ದುಷ್ಪರಿಣಾಮ ಬೀರುತಿದೆ ಎಂಬುದನ್ನು ಚಿತ್ರದ ಮೂಲಕ ತಿಳಿಸುವ ಪ್ರಯತ್ನ.
ಇದೀಗ ಕೆಲವು ಚಿತ್ರಗಳನ್ನು ಬಿಡಿಸಲಾಗುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ಚಿತ್ರ ರಚನೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ಅವರು.
“ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರದ ಮೇಲೆ, ಅದನ್ನು ತಿನ್ನುವ ಪ್ರಾಣಿಗಳ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ಹಸುವೊಂದು ಪ್ಲಾಸ್ಟಿಕ್ ತಿಂದರೆ ಕರುಳಿನಲ್ಲಿ ಪ್ಲಾಸ್ಟಿಕ್ನಿಂದ ಆಹಾರ ಪದಾರ್ಥಗಳು ಗಟ್ಟಿಯಾಗುತ್ತದೆ. ಅಜೀರ್ಣವಾಗಿ ಜಠರದಲ್ಲಿ ಉರಿಊತ ಉಂಟಾಗುತ್ತದೆ. ಚೂಪಾದ ವಸ್ತುಗಳು ಹೃದಯಕ್ಕೆ ಚುಚ್ಚಿ ಅವು ಸಾಯುವ ಸ್ಥಿತಿ ನಿರ್ಮಾಣ ಆಗುತ್ತದೆ. ಇದನ್ನು ವಿವರಿಸುವ ಮಾಹಿತಿ ನೀಡುವ ಜಾಗೃತಿ ಮೂಡಿಸುವ ಚಿತ್ರ ಸುಂದರವಾಗಿ ಮೂಡಿ ಬಂದಿದೆ”
-ಡಾ.ನಿತಿನ್ ಪ್ರಭು.
ಪಶು ವೈದ್ಯಾಧಿಕಾರಿ
ಪಶು ವೈದ್ಯಕಿಯ ಇಲಾಖೆ ಸುಳ್ಯ.
“ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ತಮ್ಮ ಕಟ್ಟಡದ ಗೋಡೆಗಳಲ್ಲಿ, ಕಂಪೌಂಡ್ ವಾಲ್ನಲ್ಲಿ ಈ ರೀತಿಯ ಚಿತ್ರಗಳನ್ನು ರಚಿಸಬೇಕು. ಇದರಿಂದ ಗೋಡೆಗಳು ಸುಂದರವಾಗಿ ಕಾಣುತ್ತದೆ ಮತ್ತು ಜಾಗೃತಿ ಸಂದೇಶ ನೀಡಿದಂತಾಗುತ್ತದೆ”
ಹೆಚ್.ಎಂ.ಸುಧಾಕರ.
ಮುಖ್ಯಾಧಿಕಾರಿ
ನ.ಪಂ.ಸುಳ್ಯ.