ಸುಳ್ಯ: ಸುಳ್ಯ ನಗರ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಒಳಗೊಂಡ ‘ಅಮರ ಸುಳ್ಯ ರಮಣೀಯ ತಂಡ’ದ ವತಿಯಿಂದ ಪ್ರತಿ ವಾರ ನಡೆಸುವ ಸುಳ್ಯ ನಗರ ಸ್ವಚ್ಛತಾ ಅಭಿಯಾನ 36 ವಾರ ಪೂರ್ತಿಗೊಂಡಿದೆ.ಇಂದು ಬೆಳಿಗ್ಗೆ ನಾವೂರು ಭಾಗದಲ್ಲಿ 36ನೇ ವಾರದ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.
ನಗರ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು, ವರ್ತಕರ ಸಂಘ ಸೇರಿ ವಿವಿಧ ಸಂಘ ಸಂಸ್ಥೆಗಳು ಕೈ ಜೋಡಿಸಿ ಪ್ರತಿ
ಗುರುವಾರ ಬೆಳಿಗ್ಗೆ 7 ರಿಂದ 8 ಗಂಟೆ ತನಕ ಒಂದು ಗಂಟೆ ಕಾಲ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ. ನಗರದ ಒಂದೊಂದು ಪ್ರದೇಶವನ್ನು ಆಯ್ಕೆ ಮಾಡಿ ಅಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ನಗರ ಪಂಚಾಯತ್ ಒಂದು ದಿನದ ಮೊದಲು ಕರ ಪತ್ರವನ್ನು ಆಯಾ ಪ್ರದೇಶದಲ್ಲಿ ಹಂಚಿ ಮಾಹಿತಿ ಮತ್ತು ಸ್ವಚ್ಛತೆಯ ಸಂದೇಶ ಸಾರುತ್ತಾರೆ. ಅಮರ ಸುಳ್ಯ ರಮಣೀಯ ಸುಳ್ಯ ಸ್ವಚ್ಛತಾ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು ವಾಟ್ಸಾಪ್ ಗ್ರೂಪ್ ಮೂಲಕ ಮಾಹಿತಿ ಹಂಚಿ ಕೊಳ್ಳಲಾಗುತಿದೆ. ಪ್ರತಿ ವಾರ ಆಯ್ದ ಪ್ರದೇಶದ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಗುತ್ತದೆ. ಸಂಗ್ರಹಿಸಿದ ಕಸವನ್ನು ನಗರ ಪಂಚಾಯತ್ನ ಕಸದ ವಾಹನಕ್ಕೆ ಹಾಕಿ ನಗರ ಪಂಚಾಯತ್ ಆ ಕಸವನ್ನು ವಿಲೇವಾರಿ ಮಾಡುತ್ತದೆ. ನಗರ ಪಂಚಾಯತ್ ಜೊತೆಗೆ ವರ್ತಕರ ಸಂಘ, ರೆಡ್ ಕ್ರಾಸ್, ರೋಟರಿ ಕ್ಲಬ್, ರೋಟರಿ ಕ್ಲಬ್ ಸುಳ್ಯ ಸಿಟಿ, ಲಯನ್ಸ್ ಕ್ಲಬ್, ನಗರ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಪೌರ ಕಾರ್ಮಿಕರು, ಸ್ಥಳೀಯ ವರ್ತಕರು, ನಾಗರಿಕರು ಭಾಗವಹಿಸುತ್ತಾರೆ. ಹಿರಿಯರು ಸೇರಿದಂತೆ ಹಲವು ಮಂದಿ ನಿರಂತರ ಸ್ವಚ್ಛತಾ ಕಾರ್ಯದಲ್ಲಿ
ಭಾಗವಹಿಸುತ್ತಾರೆ. ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಅವರು ಪ್ರತಿ ವಾರ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಸ್ವಚ್ಛತೆ ಮಾಡುವುದರ ಜೊತೆಗೆ ಪ್ರೋತ್ಸಾಹ ನೀಡುತ್ತಾರೆ.
ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನಗರ ಪಂಚಾಯತ್ ಹಿರಿಯ ಸದಸ್ಯ ಬುದ್ಧ ನಾಯ್ಕ್, ನ.ಪಂ. ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ, ಪ್ರೊ.ಸಂಜೀವ ಕುದ್ಪಾಜೆ, ಆರೋಗ್ಯ ಇಲಾಖೆಯ ಪ್ರಮೀಳಾ, ಡಾ. ಶ್ರೀಕೃಷ್ಣ ಭಟ್, ಪಿ.ಆರ್.ಚಂದ್ರಶೇಖರ, ವಿನೋದ್ ಲಸ್ರಾದೋ, ಸಿ.ಎಚ್.ಪ್ರಭಾಕರನ್ ನಾಯರ್, ಜನಾರ್ಧನ ದೋಳ, ದೇವದಾಸ್, ಆನಂದ ಪಾತಿಕಲ್ಲು, ಲತಾ ಕುದ್ಪಾಜೆ, ಶ್ರೀದೇವಿ ನಾಗರಾಜ ಭಟ್, ಅಬ್ದುಲ್ ರಹಿಮಾನ್ ಪಟೇಲ್ ಮೊಬೈಲ್, ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಮುರಳೀಧರ ರೈ, ಕಾರ್ಯದರ್ಶಿ ಶಿವಪ್ರಸಾದ್, ನಗರ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಹಲವು ಮಂದಿ ನಿರಂತರ ವಾರಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸುತ್ತಾರೆ.
ಕಳೆದ ನವೆಂಬರ್ ತಿಂಗಳಲ್ಲಿ ಈ ಅಭಿಯಾನ ಆರಂಭಗೊಂಡಿತ್ತು. ನಗರ ಪಂಚಾಯತ್ ಆಡಳಿತ ಮತ್ತು ವರ್ತಕರ ಸಂಘದ ಪದಾಧಿಕಾರಿಗಳ ಆಸಕ್ತಿ ವಹಿಸಿ ಆರಂಭಿಸಿದ ಅಭಿಯಾನಕ್ಕೆ ಹಲವು ಸಂಘ ಸಂಸ್ಥೆಗಳು ಆಸಕ್ತಿಯಿಂದ ಕೈ ಜೋಡಿಸಿದ್ದಾರೆ. ಕೆಲವು ವಾರದಲ್ಲಿ ಎರಡು ಬಾರಿ ಸ್ವಚ್ಛತಾ ಅಭಿಯಾನ ನಡೆಸಿದ್ದೂ ಇದೆ.
‘ಸ್ವಚ್ಛತಾ ಅಭಿಯಾನದಲ್ಲಿ ಹಲವು ಮಂದಿ ವರ್ತಕರು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಕ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುತ್ತಾರೆ. ನಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇನ್ನಷ್ಟು ಮಂದಿ ತಮ್ಮ ಭಾಗದಲ್ಲಿ ಸ್ವಚ್ಛತಾ ಅಭಿಯಾನ ನಡೆಸಬೇಕು ಎನ್ನುತ್ತಾರೆ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ.
‘ ಸ್ವಚ್ಛತಾ ಅಭಿಯಾನ ಆರಂಭವಾದ ಬಳಿಕ ನಗರದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದರ ಜೊತೆಗೆ ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ಸಾಧ್ಯವಾಗಿದೆ ಎನ್ನುತ್ತಾರೆ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ.