*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಆಧುನಿಕ ಯುಗದಲ್ಲಿ ಬೆರಳ ತುದಿಯಲ್ಲಿ ಜಗತ್ತೇ ತೆರೆದುಕೊಳ್ಳುತ್ತದೆ. ಆದರೆ ಇಲ್ಲಿ ಬೆರಳ ತುದಿಯಲ್ಲಿ ಕ್ಲಾಸ್ ರೂಮೊಂದು ತೆರೆದುಕೊಳ್ಳುತ್ತದೆ. ಇಲ್ಲಿಂದ ಟೀಚರ್ ಹೇಳಿ ಕೊಡುವ ಪಾಠ ಕಿಲೋಮಿಟರ್ ಗಟ್ಟಲೆ ದೂರದ ಗಡಿಯಾಚೆಯ ಶಾಲೆಯ ವಿದ್ಯಾರ್ಥಿಗಳು ಆಲಿಸಿಕೊಂಡು ಪಾಠವನ್ನು ಮನನ ಮಾಡುತ್ತಾರೆ. ಇದು ಸುಳ್ಯದ ಸ್ನೇಹ ಶಾಲೆ ನಿರ್ಮಸಿದ ಶಿಕ್ಷಣ ಸೇತು.. ಸ್ನೇಹ ಶಾಲೆಯ ಶಿಕ್ಷಕರು ಹೇಳಿ ಕೊಡುವ ವಿಜ್ಞಾನ ಪಾಠವನ್ನು ಗಡಿಯಾಚೆ ಕೊಡಗಿನ ಕರಿಕೆ ಸರಕಾರಿ ಪ್ರೌಢ ಶಾಲೆಯ ಮಕ್ಕಳು ಕೇಳಿಸಿಕೊಳ್ಳುತ್ತಾರೆ. ಪ್ರಕೃತಿ ಸಿರಿ ದೇವಿಯ
ಡಾ.ದಾಮ್ಲೆ ಅವರು ವರ್ಚುವಲ್ ತರಗತಿ ಮೂಲಕ ಮಕ್ಕಳೊಂದಿಗೆ ಸಂವಾದ ನಡೆಸುವುದು
ಮಡಿಲ ಸ್ನೇಹ ಶಾಲೆ ಹಲವು ವೈಶಿಷ್ಟ್ಯಗಳ, ಪ್ರಯೋಗಗಳ ಆಗರ.ಕರಿಕೆ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರ ಕೊರತೆ ಉಂಟಾಗಿ ಮಕ್ಕಳಿಗೆ ಪಾಠ ನಡೆಯದ ಸಂದರ್ಭ ಎದುರಾದಾಗ ಸ್ನೇಹ ಶಿಕ್ಷಣ ಸಂಸ್ಥೆ ಆರಂಭಿಸಿದ ಹೊಸ ಪ್ರಯೋಗ ಈ ವರ್ಚುವಲ್ ತರಗತಿಗಳು. ಕಳೆದ ನವೆಂಬರ್ ತಿಂಗಳಿನಿಂದ ಸ್ನೇಹ ಶಾಲೆಯ ಶಿಕ್ಷಕರು ವರ್ಚುವಲ್ ಮಾದರಿಯಲ್ಲಿ ಕರಿಕೆ ಶಾಲೆಯ ಮಕ್ಕಳಿಗೆ ಪಾಠ ಬೋಧಿಸುತ್ತಾರೆ. ಸ್ನೇಹ ಶಾಲೆಯ ಶಿಕ್ಷಕಿಯರಾದ ಪ್ರತಿಮಾ ಕುಮಾರಿ ಕೆ.ಎಸ್. ಮಾಡುವ ಜೀವಶಾಸ್ತ್ರ (ಬಯೋಲಜಿ) ಪಾಠ, ಅಮೃತಾ ಕೆ ಮಾಡುವ ರಸಾಯನ ಶಾಸ್ತ್ರ (ಕೆಮಿಸ್ಟ್ರಿ) ಪಾಠಗಳನ್ನು ಸುಮಾರು 30 ಕಿ.ಮಿ.ದೂರದ ಕರಿಕೆ ಶಾಲೆಯ ಕೊಠಡಿಯಲ್ಲಿ ಕುಳಿತು ಕೇಳುವ ಮಕ್ಕಳಿಗೆ ಮಾಮೂಲಿ ತರಗತಿಯಲ್ಲಿ ಪಾಠ ಕೇಳಿದಷ್ಟೇ ಸಲೀಸಾದ ಅನುಭವ. ವರ್ಚುವಲ್ ತರಗತಿಯಾದರೂ ಶಿಕ್ಷಕಿಯರು ಪ್ರತಿ ವಿದ್ಯಾರ್ಥಿಯ ಹೆಸರನ್ನೂ ಕರೆದು
ಪ್ರಶ್ನೆ ಕೇಳುತ್ತಾರೆ. ಪಾಠದ ಎಳೆ ಎಳೆಯನ್ನೂ ಇವರು ವಿವರಿಸಿ ಹೇಳಿದರೆ, ಅರ್ಥ ಆಗದನ್ನು ವಿದ್ಯಾರ್ಥಿಗಳು ಮತ್ತೆ ಕೇಳಿ ಮನನ ಮಾಡುತ್ತಾರೆ. ಸುಳ್ಯ ಸ್ನೇಹ ಶಾಲೆಯ ತರಗತಿಯಲ್ಲಿ ಶಿಕ್ಷಕರು ಮಾಡುವ ಪಾಠಗಳು ಡಿಜಿಟಲ್ ಬೋರ್ಡ್ನಿಂದ ಗೂಗಲ್ ಮೀಟ್ನ ಸ್ಕ್ರೀನ್ ಶೇರ್ ಮೂಲಕ ಕರಿಕೆ ಶಾಲೆಯ ತರಗತಿಯ ಲ್ಯಾಪ್ಟಾಪ್ಗೆ.. ಅಲ್ಲಿಂದ ಪ್ರಾಜೆಕ್ಟರ್ ಮೂಲಕ ದೊಡ್ಡ ಪರದೆಯಲ್ಲಿ ಮಕ್ಕಳ ಮುಂದೆ ತೆರೆದು ಕೊಳ್ಳುತ್ತದೆ. ಕರಿಕೆ ಪ್ರೌಢ ಶಾಲೆಯ 8,9 ಮತ್ತು10ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಪ್ರತಿ ತರಗತಿಗಳಿಗೆ,ತಲಾ ಎರಡು ಕ್ಲಾಸ್ಗಳಂತೆ ಬಯೋಲಜಿ ಮತ್ತು ಕೆಮಿಸ್ಟ್ರಿ ಪಾಠವನ್ನು ಈ ರೀತಿ ಶಿಕ್ಷಕಿಯರಾದ ಪ್ರತಿಮಾ ಕುಮಾರಿ ಹಾಗೂ ಅಮೃತಾ ಮಾಡುತ್ತಾರೆ. ಕರಿಕೆ ಶಾಲೆಯ ಭೌತಶಾಸ್ತ್ರ ಶಿಕ್ಷಕರಾದ ಹರೀಶ್ ಶಾಲೆಯಲ್ಲಿ ವರ್ಚುವಲ್ ತರಗತಿಗಳಿಗೆ ಅಗತ್ಯ ನೆರವನ್ನು ನೀಡುತ್ತಾರೆ. ವಿವೇಕಾನಂದ ಯೂತ್ ಮೂವ್ಮೆಂಟ್ ವರ್ಚುವಲ್ ಕ್ಲಾಸ್ಗೆ ಬೇಕಾಗಿ ಕರಿಕೆ ಶಾಲೆಗೆ ಪರದೆ, ಪ್ರಾಜೆಕ್ಟರ್,ಲ್ಯಾಪ್ಟಾಪ್ ನೀಡಿ ಸ್ಮಾರ್ಟ್ ಕ್ಲಾಸ್ ರೂಪಿಸಿದ್ದಾರೆ. ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಪೂರ್ಣ ಸಹಕಾರ ನೀಡಿದೆ. ಗಡಿನಾಡ ಅಭಿವೃದ್ಧಿ ಪ್ರಾಧಿಕಾರದವರು ಸ್ನೇಹ ಶಾಲೆಗೆ ಡಿಜಿಟಲ್ ಬೋರ್ಡ್ ನೀಡಿತ್ತು. ಅದನ್ನು ವರ್ಚುವಲ್ ತರಗತಿಗೆ ಬಳಸಿಕೊಳ್ಳಲಾಗುತ್ತದೆ.
ಸ್ನೇಹ ಸೇತು ಆರಂಭಗೊಂಡದ್ದು ಹೇಗೆ..?
2023ರ ಜುಲೈ, ಆಗಸ್ಟ್ ತಿಂಗಳಲ್ಲಿ ಕರಿಕೆ ಶಾಲೆಯಲ್ಲಿದ್ದ ಕೆಲವು ಶಿಕ್ಷಕರು ವರ್ಗಾವಣೆಯಾಗಿ ತೆರಳಿದರು. ಇದರಿಂದ ಶಾಲೆಯಲ್ಲಿ ಮಕ್ಕಳಿಗೆ ಪಾಠ ಪ್ರವಚನಕ್ಕೆ ಸಮಸ್ಯೆಯಾಗಿತ್ತು.ಕೆಲವು ಶಿಕ್ಷಕರ ನೇಮಕ, ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದ್ದರೂ ವಿಜ್ಞಾನ ವಿಭಾಗದಲ್ಲಿ ಶಿಕ್ಷಕರ ಕೊರತೆ ಎದುರಾಯಿತು. ಈ ಸಂದರ್ಭದಲ್ಲಿ
ಕೊಡಗು ಜಿಲ್ಲಾ ಪ್ರಭಾರ ಡಿಡಿಪಿಐ ಆಗಿದ್ದ ಸೌಮ್ಯ ಅವರು ವಿಜ್ಞಾನ ವಿಷಯಕ್ಕೆ ಅತಿಥಿ ಶಿಕ್ಷಕರಿದ್ದರೆ ಕಳಿಸುವಂತೆ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅವರಿಗೆ ತಿಳಿಸಿದ್ದರು. ಆದರೆ ಶಿಕ್ಷಕರನ್ನು ಕಳಿಸಲಾಗಲಿಲ್ಲ. ಬದಲಾಗಿ ಡಾ.ದಾಮ್ಲೆ ಅವರಿಗೆ ಹೊಳೆದ ವಿಚಾರ ವರ್ಚುವಲ್ ತರಗತಿ.ತಮ್ಮ ಶಾಲೆಯ ವಿಜ್ಞಾನ ಶಿಕ್ಷಕರು ಹಾಗೂ ಡಿಜಿಟಲ್ ಬೋರ್ಡ್ ಬಳಸಿ ಕ್ಲಾಸ್ ನೀಡುವುದಾಗಿ ಡಾ.ದಾಮ್ಲೆ ಅವರು ತಿಳಿಸಿದರು. ಅದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಪ್ಪಿ ಈ ವರ್ಚುವಲ್ ತರಗತಿಗಳು ಆರಂಭಗೊಂಡಿತು. ನವೆಂಬರ್ ತಿಂಗಳಿನಿಂದ
ಶಿಕ್ಚಕಿಯರಾದ ಪ್ರತಿಮಾಕುಮಾರಿ ಮತ್ತು ಅಮೃತಾ
ಆರಂಭಗೊಂಡು ಸುಮಾರು 5 ತಿಂಗಳಿನಿಂದ ಈ ರೀತಿಯ ತರಗತಿಗಳು ನಡೆಯುತ್ತಿದೆ. ಇದೀಗ ತರಗತಿಯ ಸಿಲಬಸ್ ಮುಗಿಯುತ್ತಾ ಬಂದಿದ್ದು ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುತ್ತಿದ್ದಾರೆ. ಆಧುನಿಕ ವ್ಯವಸ್ಥೆಯನ್ನು ಬಳಸಿ ಶಿಕ್ಷಣ ಸೇತು ನಿರ್ಮಿಸಿ ಪಾಠಗಳು ಆಗದೆ ಮಕ್ಕಳಿಗೆ ಅನ್ಯಾಯ ಆಗಬಾರದು ಎಂದು ನಡೆಸಿದ ಪ್ರಯೋಗ ಮುಂದುವರಿದಿದೆ.
ಕರಿಕೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸ್ನೇಹ ಶಾಲೆಗೆ ಭೇಟಿ ನೀಡಿ ಇಲ್ಲಿನ ಶೈಕ್ಷಣಿಕ ವಾತಾವರಣದಲ್ಲಿ ಸಂಭ್ರಮಿಸಿದ್ದಾರೆ. ಸ್ನೇಹ ಶಾಲೆಯ ಅಧ್ಯಕ್ಷ ಡಾ.ದಾಮ್ಲೆ, ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ, ಶಿಕ್ಷಕರು ಕರಿಕೆ ಶಾಲೆಗೂ ಭೇಟಿ ನೀಡಿ ಸ್ನೇಹ ಹಂಚಿದ್ದಾರೆ…
‘ಮಕ್ಕಳಿಗೆ ಪಾಠದ ಕೊರತೆಯಿಂದ ವಿಫಲ ಫಲಿತಾಂಶ ಬಂದರೆ ಅದಕ್ಕಿಂತ ದುರದೃಷ್ಟಕರ ವಿಚಾರ ಬೇರೊಂದಿಲ್ಲ. ಪ್ರತಿಯೊಂದು ಮಗುವಿಗೂ ಅರ್ಹ ಶಿಕ್ಷಣ ನೀಡಬೇಕಾಗಿರುವುದು ಸಮಾಜದ ಜವಾಬ್ದಾರಿಯೂ ಹೌದು. ಆದುದರಿಂದ ಕರಿಕೆ ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾದಾಗ ಈ ರೀತಿಯ ಪ್ರಯೋಗ ಮಾಡಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಡಾ.ಚಂದ್ರಶೇಖರ ದಾಮ್ಲೆ
ಶಿಕ್ಷಣ ತಜ್ಞರು.
ಅಧ್ಯಕ್ಷರು ಸ್ನೇಹ ಶಿಕ್ಷಣ ಸಂಸ್ಥೆ.
ವರ್ಚುವಲ್ ತರಗತಿಗಳ ಮೂಲಕ ಸ್ನೇಹ ಶಿಕ್ಷಣ ಸಂಸ್ಥೆಯ ವತಿಯಿಂದ ಕರಿಕೆ ಸರಕಾರಿ ಪ್ರೌಢ ಶಾಲೆಗೆ ಅತ್ಯುತ್ತಮ ಸೇವೆ ನೀಡಿದ್ದಾರೆ.ಇದೊಂದು ತ್ಯಾಗವೇ ಸರಿ.ಇದರಿಂದ ಮಕ್ಕಳಿಗೆ ತುಂಬಾ ಅನುಕೂಲ ಆಗಿದೆ.
-ಸತ್ಯನಾಥನ್.
ಎಸ್ಡಿಎಂಸಿ ಸದಸ್ಯರು.
ಸರಕಾರಿ ಪ್ರೌಢ ಶಾಲೆ ಕರಿಕೆ.