ಸುಳ್ಯ:ಬೇಸಿಗೆ ರಜೆ ಮುಗಿದು 2023–24ನೇ ಸಾಲಿನ ಶೈಕ್ಷಣಿಕ ಅವಧಿ ಮೇ 29ರಿಂದ ಆರಂಭವಾಗಲಿದ್ದು, 31ರಂದು ರಾಜ್ಯದಾದ್ಯಂತ ಏಕಕಾಲಕ್ಕೆ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ. ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು 29ರಂದು ಶಾಲೆಗೆ ಬಂದು
ಸಿದ್ಧತೆ ನಡೆಸಬೇಕು. ಶಾಲೆಗಳನ್ನು ಸಿಂಗರಿಸಬೇಕು. ಹಬ್ಬದ ವಾತಾವರಣ ನಿರ್ಮಿಸಬೇಕು. 31ರಂದು ಶಾಲಾ ಆರಂಭೋತ್ಸವ ಏರ್ಪಡಿಸಿ, ಅಂದಿನಿಂದಲೇ ತರಗತಿ ಆರಂಭಿಸಬೇಕು. ಜೂನ್ 30ರ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಅಕ್ಟೋಬರ್.7ರವರೆಗೆ (2023) ಮೊದಲ ಅವಧಿಯ ತರಗತಿಗಳು ನಡೆಯಲಿವೆ. ಅ.8ರಿಂದ 24ರವರೆಗೆ ದಸರಾ ರಜೆ. ಮತ್ತೆ ಅ. 25ರಿಂದ 2024ರ ಏಪ್ರಿಲ್ 10ರವರೆಗೆ ಎರಡನೇ ಅವಧಿಯ ತರಗತಿಗಳು ನಡೆಯಲಿವೆ. ಏ.11ರಿಂದ ಮೇ 28ರ ವರೆಗೆ ಬೇಸಿಗೆ ರಜೆ ನೀಡಲಾಗುತ್ತದೆ.
ಸುಳ್ಯದಲ್ಲಿ ಸಿದ್ಧತೆ:
ಸುಳ್ಯ ತಾಲೂಕಿನಲ್ಲಿಯೂ ಇಂದಿನಿಂದ ಶಾಲೆಗಳು ತೆರೆದು ಶಾಲಾರಂಭಕ್ಕೆ ಸಿದ್ಧತೆಗಳು ನಡೆದಿದೆ. ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಶಾಲೆಗೆ ಆಗಮಿಸಿ ಸಿದ್ಧತೆಗಳನ್ನು ಮಾಡಲಿದ್ದಾರೆ. ಶಾಲಾ ಆರಂಭಕ್ಕೆ ಎಲ್ಲಾ ಸಿದ್ದತೆಗಳು ನಡೆದಿದೆ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ತಿಳಿಸಿದ್ದಾರೆ. ಎಲ್ಲಾ ಕಡೆ ಸಿದ್ಧತೆಗಳ ಬಗ್ಗೆ ಸಭೆಗಳನ್ನು ನಡೆಸಲಾಗಿದೆ. 31 ರಂದು ಶಾಲಾ ಪ್ರಾರಂಭೋತ್ಸವ ನಡೆದು ತರಗತಿಗಳು ಆರಂಭಗೊಳ್ಳಲಿದೆ. ತಾಲೂಕಿನ ಎಲ್ಲಾ ಶಾಲೆಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರಗಳು ಬಂದಿದೆ. ಜೂನ್ ಒಂದರಂದು ಶಾಲೆಗಳಲ್ಲಿ ವಿತರಣೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜೂ.30ರವರೆಗೆ ಪ್ರವೇಶಕ್ಕೆ ಅವಕಾಶ ಇದೆ.