ಅಹಮದಾಬಾದ್: ಭಾನುವಾರ ರಾತ್ರಿ ನಡೆಯಬೇಕಿದ್ದ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಣ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಇದರಿಂದ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಯಿತು.
ಐಪಿಎಲ್ ಟೂರ್ನಿಯ 16 ವರ್ಷಗಳ ಇತಿಹಾಸದಲ್ಲಿ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಿದ್ದು ಇದೇ ಮೊದಲು. ಭಾನುವಾರ ರಾತ್ರಿ
7.30ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಪಂದ್ಯಕ್ಕೆ ಟಾಸ್ ಹಾಕುವ ಅರ್ಧಗಂಟೆಗೂ ಮುನ್ನ, ಸಂಜೆ 6.30ರ ವೇಳೆಗೆ ರಭಸವಾಗಿ ಮಳೆ ಸುರಿಯಲಾರಂಭಿಸಿತು.
ಮೈದಾನ ಸಿಬ್ಬಂದಿ ಪಿಚ್ಗಳಿಗೆ ಹೊದಿಕೆ ಹಾಕಿದರು. ಟಾರ್ಪಾಲಿನ್ಗಳನ್ನು ಹೊದಿಸಲಾಯಿತು. ಆದರೆ ಗುಡುಗು ಮತ್ತು ಮಿಂಚು ಸಹಿತ ಮಳೆಯ ಆರ್ಭಟ ಹೆಚ್ಚಿದ್ದರಿಂದ ಕ್ರೀಡಾಂಗಣದಲ್ಲಿ ನೀರು ಹರಿಯಿತು. 8.30ರ ಸುಮಾರಿಗೆ ಮಳೆ ನಿಂತ ನಂತರ ಅಂಪೈರ್ಗಳು ಮೈದಾನ ಪರಿಶೀಲಿಸಿದರು. ಟಾಸ್ ಮಾಡಲು ಸಿದ್ಧತೆಗಳೂ ನಡೆದವು. ಉಭಯ ತಂಡಗಳ ಆಟಗಾರರು ಮೈದಾನಕ್ಕಿಳಿದು ತಾಲೀಮು ಆರಂಭಿಸಿದರು. ಆದರೆ ಇದೇ ಸಂದರ್ಭದಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿತು. ರಾತ್ರಿ 10.30ರವರೆಗೂ ಮಳೆ ಮುಂದುವರಿಯಿತು. ಪಿಚ್ಗೆ ಹಾಕಿದ್ದ ಹೊದಿಕೆ ಮತ್ತು ಔಟ್ಫೀಲ್ಡ್ನಲ್ಲಿ ಸಾಕಷ್ಟು ನೀರು ನಿಂತಿತು.ರಾತ್ರಿ 10.55ರ ವೇಳೆಗೆ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಮತ್ತು ಅಂಪೈರ್ಗಳು ಸಮಾಲೋಚನೆ ನಡೆಸಿ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲು ನಿರ್ಧರಿಸಿದರು.
ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸುವ ಛಲದಲ್ಲಿದೆ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು ಐದನೇ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಪಂದ್ಯ ಆರಂಭ: ರಾತ್ರಿ 7.30