ಸಂಪಾಜೆ: ಸುತ್ತಲೂ ಹರಡಿರುವ ಗಿರಿ ಶೃಂಗಗಳ ಮಧ್ಯೆ ಹಸಿರು ಹೊದ್ದು ಮಲಗಿರುವ ಪ್ರಕೃತಿ ಸಿರಿಯಿಂದ ಸಂಪತ್ಪರಿಭತವಾದ ನಾಡು ದಕ್ಷಿಣ ಕನ್ನಡ ಜಿಲ್ಲೆಯ ತುತ್ತ ತುದಿಯ ಗ್ರಾಮ ಸಂಪಾಜೆ. ಅಭಿವೃದ್ಧಿಯ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವ ಸಂಪಾಜೆ ಗ್ರಾಮಕ್ಕೆ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರದ ಹಿರಿಮೆ.ಕಳೆದ ವರ್ಷವೇ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದರೂ ಇದೀಗ ಪ್ರಶಸ್ತಿ ಮೊತ್ತ ಬಿಡುಗಡೆ ಮಾಡಿದ್ದು ಸುಳ್ಯ ತಾಲೂಕಿನಿಂದ ಸಂಪಾಜೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಜಿ.ಕೆ.ಹಮೀದ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2014ರಲ್ಲಿ ಸಂಪಾಜೆ ಗ್ರಾಮ ಪಂಚಾಯತ್‌ಗೆ ಗಾಂಧಿ
ಗ್ರಾಮ ಪುರಸ್ಕಾರ ಬಂದಿತ್ತು. ಇದೀಗ ಜಿ.ಕೆ.ಹಮೀದ್ ಸಾರಥ್ಯದಲ್ಲಿಯೇ ಸಂಪಾಜೆಗೆ ಮತ್ತೊಮ್ಮೆ ಗಾಂಧಿ ಗ್ರಾಮ ಪುರಸ್ಕಾರ ಅರಸಿ ಬಂದಿದೆ.
ಅಭಿವೃದ್ಧಿ ಪರ್ವ:
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಕೊಡಗು ಜಿಲ್ಲೆಯ ಸರ ಹದಿನಲ್ಲಿರುವ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದ್ದು ಕಳೆದ ಒಂದು ದಶಕದಿಂದೀಚೆಗೆ ಸರ್ವತೋಮುಖ ಅಭಿವೃದ್ಧಿಗೆಯೆಡೆಗೆ ಮುಖ ಮಾಡಿದೆ. ಅಭಿವೃದ್ಧಿಯ ಪಥದಲ್ಲಿರುವ ಗ್ರಾಮ ಪಂಚಾಯತ್‌ಗೆ ಮತ್ತೆ ಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದು ಆಡಳಿತದ ಯಶಸ್ವಿಗೆ ಮತ್ತು ಗ್ರಾಮಾಭಿವೃದ್ಧಿಯ ಕಾಳಜಿಗೆ ಸಾಕ್ಷಿಯಾಗಿದೆ.ಪಂಚಾಯತ್ ಮುಂಭಾಗದಲ್ಲಿ ನಿರ್ಮಾಣವಾದ ಸುಂದರ ಉದ್ಯಾನವನ ಕಣ್ಮನ ಸೆಳೆಯುತಿದೆ. ಡಿಜಿಟಲ್ ಲೈಬ್ರೆರಿ ನಿರ್ಮಾಣ ಮಾಡಲಾಗಿದೆ. ಕೋಟಿಗೂ ಮಿಕ್ಕಿ ಅನುದಾನಲ್ಲಿ ಗ್ರಾಮದಲ್ಲಿ ಹಲವು ಗ್ರಾಮೀಣ ರಸ್ತೆಗಳ ಕಾಂಕ್ರಿಟೀಕರಣ, ಡಾಮರೀಕರಣ ಕಾಮಗಾರಿ ನಡೆಸಲಾಗಿದೆ. ಇದರಲ್ಲಿ ಹಲವು ಕಾಮಗಾರಿ ಮುಗಿದಿದ್ದು ಕೆಲವು ಪ್ರಗತಿಯಲ್ಲಿದೆ. ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮಾಡಲಾಗಿದೆ.
ಶಾಲೆ, ಅಂಗನವಾಡಿ,ಆರೋಗ್ಯ ಕೇಂದ್ರಗಳ ಆವರಣ ಗೋಡೆ ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಯೋಜನೆ ರೂಪಿಸಲಾಗಿದೆ.ವಿವಿಧೆಡೆ ಬೃಹತ್ ಟ್ಯಾಂಕ್‌ಗಳ ನಿರ್ಮಾಣ, ಪೈಪ್ ಲೈನ್ ಕಾಮಗಾರಿ ನಡೆಸಲಾಗಿದೆ. ಇದರಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದೆ. 200ಕ್ಕೂ ಅಧಿಕ ಕುಟುಂಬಗಳಿಗೆ ನೀರಿನ ಟ್ಯಾಂಕ್‌ಗಳನ್ನು ವಿತರಿಸಲಾಗಿದೆ. ಗ್ರಾಮದ ಬಹು ವರ್ಷಗಳ ಬೇಡಿಕೆ 33 ಕೆವಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕೆ ಸ್ಥಳ ಕಾಯ್ದಿರಿಸಲಾಗಿದೆ. ಕಸ ವಿಲೇವಾರಿ ಘಟಕ ಮಂಜೂರಾಗಿದ್ದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು ನಿರಂತರ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕಸ ಸಾಗಾಟಕ್ಕಾಗಿ
ವಾಹನವನ್ನು ಖರೀದಿಸಿದೆ. ಸಂಜೀವಿನಿ ಸಂಘ ಗಳಿಗೆ ಸಾಲ ಸೌಲಭ್ಯ, ಬೀದಿ ದೀಪ ,ಹೈಮಾಸ್ಟ್ ಸೋಲಾರ್ ದೀಪ ಅಳವಡಿಕೆ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಬಡ ಕುಟುಂಬಗಳಿಗೆ ಮನೆ ಮಂಜೂರಾತಿ, ವಿಕಲ ಚೇತನರಿಗೆ ವಿವಿಧ ಅಗತ್ಯ ವಸ್ತುಗಳ ಕೊಡುಗೆ ಹೀಗೆ ಗ್ರಾಮದಲ್ಲಿ ಹತ್ತಾರು ಅಭಿವೃದ್ಧಿ ಮತ್ತು ಜನಪರ ಕೆಲಸಗಳನ್ನು ಕೈಗೆತ್ತಿಕೊಂಡಿದೆ.ಉದ್ಯೋಗ ಖಾತರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತಿದೆ. ಮಾನವ ದಿನಗಳ ಸೃಷ್ಠಿಯಲ್ಲಿ ತಾಲೂಕಿನಲ್ಲಿ ಸಂಪಾಜೆ ಎರಡನೇ ಸ್ಥಾನದಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಮತ್ತು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ನ ಕಾರ್ಯ ನಿರ್ವಹಣೆ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮ ಪಂಚಾಯತ್‌ನ ಹಲವಾರು ಯೋಜನೆ , ಯೋಚನೆಗಳು ಉತ್ತಮ ಆಡಳಿತಕ್ಕೆ ಹಿಡಿದ
ಕನ್ನಡಿಯಾಗಿದೆ. ಗ್ರಾಮದ ಅಭಿವೃದ್ಧಿಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ , ವಿಧಾನ ಪರಿಷತ್‌ನ ವಿಪಕ್ಷ ನಾಯಕರಾದ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್,ಮಂಜುನಾಥ ಭಂಡಾರಿ, ಸಲೀಂ ಅಹಮ್ಮದ್ , ನಝೀರ್ ಅಹಮ್ಮದ್, ಮೋಹನ್ ಕೊಂಡಜ್ಜಿ , ಬಿ.ಎಂ.ಫಾರೂಕ್ ಅನುದಾನ ಒದಗಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಇವರಿಗೆ ಗ್ರಾಮ ಪಂಚಾಯತ್ ವತಿಯಿಂದ ವಿಶೇಷ ಕೃತಜ್ಞತೆ ಸಲ್ಲಿಸುವುದಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಹೇಳುತ್ತಾರೆ.
ಪ್ರಮುಖ ವಾಣೀಜ್ಯ ಪಟ್ಟಣ:
ಸುಳ್ಯ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯದಿಂದ 25 ಕಿಮೀ ದೂರದಲ್ಲಿ ಹೆದ್ದಾರಿಗೆ ತಾಗಿಕೊಂಡಿರುವ ಸಂಪಾಜೆಯ ಮುಖ್ಯ ವಾಣೀಜ್ಯ ಪಟ್ಟಣ ಕಲ್ಲುಗುಂಡಿ. ಸಂಪಾಜೆ ಗ್ರಾಮ ಪಂಚಾಯತ್ ಕಚೇರಿ ಒಳಪಟ್ಟ ವಾಣಿಜ್ಯ ಕೇಂದ್ರವಾಗಿದ್ದು ನಿರಂತರ ಜನಸಂಪರ್ಕವನ್ನು ಹೊಂದಿರುವ ಪಟ್ಟಣವಾಗಿ ಬೆಳೆಯುತ್ತಿದೆ. ಸರ್ವಧರ್ಮ ಸಮನ್ವಯತೆಯ ಸಹಬಾಳ್ವೆಯನ್ನು ಇಲ್ಲಿ ಕಾಣಬಹುದಾಗಿದೆ. ಕಲ್ಲುಗುಂಡಿ ಮಹಾವಿಷ್ಣುಮೂರ್ತಿ ದೈವಸ್ಥಾನ , ಜುಮ್ಯಾಮಸೀದಿ , ಸಂತ ಕ್ಷೇವಿಯರ್ ಚರ್ಚೆ ಪ್ರಮುಖ ಆರಾಧನ ಕೇಂದ್ರವಾಗಿದ್ದು, ಹಲವಾರು ದೈವಸ್ಥಾನಗಳು, ಭಜನಾ ಮಂದಿರಗಳು ಗ್ರಾಮಕ್ಕೆ ಶೋಭೆ ತಂದಿವೆ ಸರಕಾರಿ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು , ಸಹಕಾರಿ ಸಂಘಗಳು , ರಾಷ್ಟ್ರೀಕೃತ ಬ್ಯಾಂಕ್‌ಗಳು , ವಾಣಿಜ್ಯ ಕಟ್ಟಡಗಳು , ಆರೋಗ್ಯ ಕೇಂದ್ರಗಳು , ಗ್ರಾಮ ಪಂಚಾಯತ್‌ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಎಲ್ಲಾ ಸದಸ್ಯರ ಸಹಕಾರ , ಪಂಚಾಯತ್ ಎಲ್ಲಾ ಸದಸ್ಯರು ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಸಹಕಾರ , ವಿಶೇಷವಾಗಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರ ಮೂಲಕ ಹಲವು ಕಾಮಗಾರಿಗಳಿಗೆ ಅನುದಾನ ಒದಗಿಸಿರುವುದು, ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕ್ಕೊಂಗಾಜೆಯವರ ಸಹಕಾರ , ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ, ಕಾರ್ಯದರ್ಶಿ ರಹೀಂ ಬೀಜದಕಟ್ಟೆ, ಕೆ.ವಿ.ಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ.ಯವರ ಸಹಕಾರ , ಸಂಪಾಜೆ ಗ್ರಾಮದ ಧ.ಗ್ರಾ.ಯೋಜನೆ , ಎಸ್ಎಸ್ಎಫ್ ಹಾಗೂ
ಎಸ್‌ಕೆಎಸ್‌ಎಸ್‌ಎಫ್ ತಂಡ ಯಶಸ್ವಿ ಯುವಕ ಮಂಡಲ ಕಲ್ಲುಗುಂಡಿ , ವಿಷ್ಣು ಬಳಗ ಕಡಪಾಲ , ಸ್ತ್ರೀ ಶಕ್ತಿ , ಸಂಜೀವಿನಿ , ಅಂಗನವಾಡಿ ಆಶಾಕಾರ್ಯಕರ್ತೆಯರ ಸಹಕಾರ , ಲಯನ್ಸ್ ಕ್ಲಬ್ , ವರ್ತಕರ ಸಂಘ , ಆರಕ್ಷಕ ಸಿಬ್ಬಂದಿಗಳ ಸಹಕಾರ ಹಾಗೂ ಎಲ್ಲಾ ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ.ವಿಶೇಷವಾಗಿ ಜಿ.ಪಂ. ಇಂಜಿನಿಯರಿಂಗ್ ಉಪ ವಿಭಾಗದ ಸಹಕಾರ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಎಸ್ . ಮತ್ತು ಸಿಬ್ಬಂದಿ ವರ್ಗ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಸಹಕಾರ ಗ್ರಾಮದ ಅಭಿವೃದ್ಧಿಗೆ ಸದಾ ದೊರಕಿದೆ ಎಂದು ಜಿ.ಕೆ.ಹಮೀದ್ ಹೇಳುತ್ತಾರೆ.
‘ಸಚಿವರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಹೀಗೆ ಎಲ್ಲರೂ ಪಕ್ಷ ಭೇದ ಮರೆತು ಕೈ ಜೋಡಿಸಿದ ಕಾರಣ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕೆಲಸ ನಡೆಸಲು ಸಾಧ್ಯವಾಗಿದೆ ಮತ್ತು ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರದ ಗೌರವ ಬಂದಿದೆ. ಗ್ರಾಮದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತಿದೆ. ಅದಕ್ಕಾಗಿ ಎಲ್ಲರ ಸಹಕಾರ ಬೇಕಾಗಿದೆ. -ಜಿ.ಕೆ.ಹಮೀದ್ ಗೂನಡ್ಕ , ಅಧ್ಯಕ್ಷರು , ಗ್ರಾ.ಪಂ.ಸಂಪಾಜೆ