*ಅನಿಲ್ ಎಚ್.ಟಿ.
ಸಿನಿಮಾ ಮುಗಿಯುತ್ತಿದ್ದಂತೆಯೇ ಸದಾ ಡಿಶುಂಡಿಶುಂ, ನಾಯಕನ ಸೂಪರ್ ಪವರ್ ಲೈಕ್ ಮಾಡುವ ಮನೋಭಾವದ ಪಕ್ಕದಲ್ಲಿ ಕುಳಿತಿದ್ದ ಗೆಳೆಯ ಮತ್ತು ಆತನ ಪಕ್ಕದಲ್ಲಿ ಕುಳಿತಿದ್ದ ….ಸಿನಿಮಾ ಎಂದರೆ ರಂಗುರಂಗಿನ ಹಾಡು, ಫಾರಿನ್ ಲೋಕೇಶನ್, ಹಿರೋಯಿನ್ ಹಿರೋ ರೋಮ್ಯಾನ್ಸ್ ಮಾಡಿಕೊಂಡು ಸಾಂಗ್ ಹೇಳುವ ದೖಶ್ಯಗಳಿದ್ದರೆ ಮಾತ್ರ ಅದು ಸಿನಿಮಾ ಎಂದು ನಂಬಿಕೊಂಡಿದ್ದ ಆತನ ಪತ್ನಿ ಇಬ್ಬರೂ ಜೋರಾಗಿ ಚಪ್ಪಾಳೆ ತಟ್ಟತೊಡಗಿದ್ದರು.
ಏನಾಯಿತ್ರೋ ಅಂದೆ.. ಫಿಲಂ ಅಂದರೆ.. ಹೀಗಿರಬೇಕು ಗುರೂ.. ಎಂಥ ಸಿನಿಮಾ ಮಾರಾಯ.. ನಾನು ಲೈಫ್ನಲ್ಲಿ ನೋಡಿದ ಫೆಂಟಾಸ್ಟಿಕ್ ಸಿನಿಮಾ ಇದು ಅಂದು ಬಿಟ್ಟ. ಆತನ ಪಕ್ಕದಲ್ಲಿದ್ದಾಕೆ ಇನ್ನೂ ಚಪ್ಪಾಳೆ ಹೊಡೆಯುತ್ತಳೇ ಇದ್ದಳು.!!!
ಇದು.. ಸಿನಿಮಾ.. ಸಿನಿಮಾ ಅಂದರೆ ಇದು ಎಂಬ ಮನೋಭಾವನೆಗೆ
ಕಾರಣವಾಗಿರುವುದೇ ಕಾಂತಾರ ಎಂಬ ಸಿನಿಮಾದ ಮೋಡಿ.
ಕನ್ನಡದ ಸಿನಿಮಾ ಕಥೆಗಳೂ ಬದಲಾಗುತ್ತಿದೆ.. ಅಂತೆಯೇ ಕನ್ನಡ ಸಿನಿಮಾ ಪ್ರೇಕ್ಷಕರು ಕೂಡ…
ಕರಾವಳಿ ಅಥವಾ ತುಳು ನಾಡಿನಲ್ಲಿ ದೈವಕೋಲಗಳಿಗೆ, ಭೂತಾರಾಧನೆಗೆ ಮಹತ್ವದ ಸ್ಥಾನವಿದೆ. ಇಲ್ಲಿನವರ ಬಹುತೇಕ ಕುಟುಂಬದಲ್ಲಿಯೂ ದೈವಾರಾಧನೆ, ಭೂತಾರಾದನೆ ಪರಂಪರಾಗತವಾಗಿ ನಡೆದು ಬಂದಿದೆ. ಯಾವುದೇ ಹಬ್ಬ ತಪ್ಪಿಸಿಯಾರು.. ಕುಟುಂಬದಲ್ಲಿ ಭೂತಾರಾಧನೆ, ದೈವಾರಾಧನೆ ತಪ್ಪಿಸಲಿಕ್ಕಿಲ್ಲ. ಹಲವು ಹತ್ತು ದೈವಗಳಲ್ಲಿ ಪಂಜುಲಿ೯ ಆರಾಧನೆಗೆ ತುಳು ನಾಡಿನಲ್ಲಿ ಪ್ರಮುಖ ಸ್ಥಾನವಿದೆ.
ಇಂಥ ಆಚರಣೆ, ಆರಾಧನೆಯೇ ಕಾಂತಾರದ ಪ್ರಮುಖ ಕಥಾ ವಸ್ತು.
ತುಳು ನಾಡಿನ ಈ ವಿಶಿಷ್ಟ ಆಚರಣೆ ಬಗ್ಗೆ ಈವರೆಗೂ ಯಾರೂ ತೆರೆದಿಡದ ಹೊಸ ಕಥೆಯನ್ನು ಅತ್ಯಂತ ಸೊಗಸಾಗಿ ಎಲ್ಲಿಯೂ ಪರಂಪರೆಗೆ, ದೈವನಂಬಿಕೆಗೆ ಲೋಪಬಾರದಂತೆ ಕಾಂತಾರದ ಮೂಲಕ ನಿದೇ೯ಶಕ ರಿಷಬ್ ಶೆಟ್ಟಿ ಸಮರ್ಪುಸಿದ್ದಾರೆ. ಬಹಳ ಸೂಕ್ಷ್ಯವಾದ ಕಥೆಯನ್ನು ಸೂಕ್ಷ್ಯವಾಗಿಯೇ ಎಲ್ಲಿಯೂ ಭಕ್ತರ ಮನಸ್ಸಿಗೆ ಬೇಸರವಾಗದಂತೆ ಪ್ರೇಕ್ಷಕರ ಕಂಗಳಿಗೆ ಒಪ್ಪಿಸಿದ್ದಾರೆ.
ಹೊಸತನದ ಕಥೆ. ಹೊಸತನದ ನಿರೂಪಣೆ.. ಹೊಸತನದ ಕ್ಲೆಮ್ಯಾಕ್ಸ್ ಮೂಲಕ ಕಾಂತಾರ ಗೆದ್ದಿದೆ. ಕನ್ನಡ ಸಿನಿಮಾರಂಗದ ಹೊಸತನವನ್ನು ಅಪೂರ್ವ ರೀತಿಯಲ್ಲಿ ಪ್ರೇಕ್ಷಕರು ಗೆಲ್ಲಿಸಿದ್ದಾರೆ.
ರಿಷಬ್ ಶೆಟ್ಟಿ ಚಿತ್ರಗಳಲ್ಲಿ ಡೈಲಾಗ್ಗಳ ರಸದೌತಣ ಇದ್ದೇ ಇರುತ್ತದೆ. ಕಾಂತಾರದಲ್ಲಿಯೂ ಕ್ಷಣ ಕ್ಷಣಕ್ಕೂ ನಗಿಸುವ ಡೈಲಾಗ್ಗಳಿವೆ. ತುಳುನಾಡ ಕನ್ನಡವನ್ನು ಬಹಳ ವೇಗವಾಗಿ ಅರ್ಥ ಮಾಡಿಕೊಳ್ಳುವವರಿಗೆ ಈ ಡೈಲಾಗ್ಗಳು ಸಲೀಸಾಗಿ ಅರ್ಥವಾಗಿಬಿಡುತ್ತದೆ.
ಕಾಂತಾರದಲ್ಲಿನ ಒಂದೊಂದು ಪಾತ್ರವೂ ತನ್ನದೇ ರೀತಿಯಲ್ಲಿ ವೈಭವೀಕರಿಸಲ್ಪಟ್ಟಿದೆ. ನಾಯಕ ಶಿವನ ಗೆಳೆಯರಂತೂ ಒಬ್ಬೊಬ್ಬರೂ ಆ ಪಾತ್ರವೇ ತಾವಾಗಿ ನಟಿಸಿದ್ದಾರೆ. ಹೊಸ ಕಥೆ ಹೇಳುವ ತಮಿಳು ಚಿತ್ರರಂಗದ ನಾಯಕಿಯನ್ನೂ ಮೀರಿಸುವಂತೆ ಕಾಂತಾರದಲ್ಲಿ ಸಪ್ತಮಿ ಗೌಡ ಸರಳ, ಸಹಜವಾಗಿ ಮಿಂಚಿದ್ದಾರೆ . ಅರಣ್ಯಾಧಿಕಾರಿ ಪಾತ್ರಕ್ಕೆ ಕಿಶೋರ್ ಸರಿಸಾಟಿ. ಚಿತ್ರದ ಬಹುಮುಖ್ಯ ಪಾತ್ರಕ್ಕೆ ಅಚ್ಯುತ ಕುಮಾರ್ ಬಿಟ್ಟರೆ ಬೇರೆ ಯಾರನ್ನು ಊಹಿಸಲೂ ಸಾಧ್ಯವಿಲ್ಲ. ರಿಷಬ್ ಅಮ್ಮನ ಪಾತ್ರದಲ್ಲಿ ಮಾನಸಿ ಸುಧೀರ್ ಉತ್ತಮ ಆಯ್ಕೆ.
ನಿರ್ದೇಶಕ ಕಂ ಚಿತ್ರದ ಹೀರೋ ರಿಷಬ್ ಶೆಟ್ಟಿ, ಶಿವನ ಪಾತ್ರದಲ್ಲಿ ಜೀವಂತಿಕೆ ಮೂಡಿಸಿದ್ದಾರೆ. ತಾವೇ ಶಿವನ ಪಾತ್ರವಾಗಿ ರಿಷಬ್ ನಟಿಸಿದ್ದಷ್ಟೇ ಅಲ್ಲ. ಶಿವನೊಂದಿಗೆ ಕಾಂತಾರ ಎಂಬ ಚಿತ್ರವನ್ನೂ ಅದ್ಬುತವಾಗಿ ಗೆಲ್ಲಿಸಿದ್ದಾರೆ. ಚಿತ್ರದ ಕೊನೇ 15 ನಿಮಿಷಗಳಲ್ಲಂತೂ ರಿಷಬ್ ಶೆಟ್ಟಿ ನಟನೆ ಊಹೆಗೂ ಮೀರಿದ್ದು… ನೋಡಿಯೇ ಈ ನಟನೆಯನ್ನು ಸವಿಯಬೇಕು.
ದಕ್ಷಿಣ ಕನ್ನಡದಲ್ಲಿನ ರಿಶಬ್ ಶೆಟ್ಟಿ ಸ್ವಂತ ಗ್ರಾಮ ಕೆರಾಡಿಯಲ್ಲಿಯೇ ಚಿತ್ರೀಕರಣವಾಗಿದ್ದು, ಹೀಗಾಗಿ ರಿಷಬ್ ನೆಟಿವಿಟಿ ಚಿತ್ರದುದ್ದಕ್ಕೂ ಇದೆ ಎಂದು ಧಾರಾಳವಾಗಿ ಹೇಳಬಹುದು. ಕೆರಾಡಿಯ ಕಾಡು ಕಟ್ಟಿಕೊಡುವ ರಾತ್ರಿಯ ರೌದ್ರತೆ, ಹಗಲಿನ ರಮಣೀಯತೆಯನ್ನು ಕ್ಯಾಮರ ಮನ್ ಅರವಿಂದ್ ಕಶ್ಯಪ್ ತನ್ನ ಮೂರನೇ ಕಣ್ಣಿನಲ್ಲಿ ಸೊಗಸಾಗಿ ಸೆರೆಹಿಡಿದಿದ್ದಾರೆ.
ಅಜನೀಶ್ ಲೋಕೇಶ್ ಸಂಗೀತ ಅಚ್ಚುಕಟ್ಟಾಗಿದ್ದರೂ ಕೆಲವೊಂದು ಕಡೆ ಡೈಲಾಗ್ ನ್ನೂ ಮೀರಿ ಮ್ಯೂಸಿಕ್ ಕೇಳುತ್ತಿದೆ. ಆದರೆ ಹಾಡಿನ ಹಿನ್ನಲೆ ಸಂಗೀತದಲ್ಲಿ ಅಜನೀಶ್ ಕೆಲಸ ಸೂಪರ್ಬ್. ಕಾಂತಾರದಲ್ಲಿ ವಿಭಿನ್ನವಾಗಿ ಪೈಟಿಂಗ್ ದೖಷ್ಯಗಳನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಾಹಸ ನಿರ್ದೇಶಕ ವಿಕ್ರಂ ಮೋರೆ ಸಂಯೋಜಿಸಿದ್ದು ಕ್ಲೆಮ್ಯಾಕ್ಸ್ನ ಸಾಹಸಕ್ಕೆ ಚಪ್ಪಾಳೆ ತಟ್ಟದೇ ಇರಲಾಗದು.
ಭೂತಾರಾಧನೆ, ದೈವಭಕ್ತಿಯನ್ನು ಎಲ್ಲಿಯೂ ಪೇಲವವಾಗಿಸದೇ, ತೆಳುಹಾಸ್ಯದ ಮೂಲಕ ಕಟ್ಟಿಕೊಡುವ ಕಾಂತಾರ ಹೀಗಾಗಿಯೇ ಚಿತ್ರವನ್ನು ಸುಲಭವಾಗಿ ಗೆಲ್ಲಿಸಿದೆ
ಕಾಂತಾರದಲ್ಲಿ ದೈವ ಭಕ್ತಿ, ಭೂತರಾಧನೆಯ ಶಕ್ತಿಯ ಕಥೆಯಿದೆ.
ಜಮೀನುದಾರಿಕೆಯ ಗತ್ತಿನ ಕಥೆಯಿದೆ. ತೆಳುವಾದ ಪ್ರೇಮಕಥೆಯಿದೆ. ಅಮ್ಮ – ಮಗನ ಮಮತೆಯ ಬೆಸುಗೆಯಿದೆ. ಗೆಳೆತನದ ಗಟ್ಟಿತನದ ಕಥೆಯಿದೆ. ಕಾಡಿನ ಸಂರಕ್ಷಣೆಯ ಸಂದೇಶವಿದೆ. ಮನಪರಿವರ್ತನೆಯ ಅಪೂವ೯ ನೋಟವಿದೆ…ಕರ್ತವ್ಯ ನಿಷ್ಟೆಯ ಅರಿವಿನ ನೀತಿ ಇದೆ. ಕೋಲಕಟ್ಟುವವರ ಸಂಕಷ್ಟದ ಚಿತ್ರಣವಿದೆ. ಕಾಡಿನ ಮಕ್ಕಳ ನೋವಿನ ಕಥೆ ಹೇಳಲಾಗಿದೆ….ಅಂತೆಯೇ ತುಳುನಾಡಿನ ಮತ್ತೊಂದು ಹೆಗ್ಗುರುತು ಕಂಬಳವನ್ನೂ ಸುಂದರವಾಗಿ ತೋರಿಸಲಾಗಿದೆ..
ನಗರದ ಚಿತ್ರಣವೇ ಇಲ್ಲದೆ ಕಾಂತಾರವನ್ನು ಕಾಡಿನ ದಟ್ಟತೆಯ ನಡುವೇ ಗಾಡವಾಗಿ ಕಾಡುವಂತೆ ಕಟ್ಟಿಕೊಡಲಾಗಿರುವುದೇ ಚಿತ್ರದ ವಿಶೇಷ..
ಅಬ್ಬರಿಸುವ ದೈವ.. ಬೊಬ್ಬಿಡುವ ದೈವ… ಕಾಡಿನಲ್ಲಿ ನನ್ನ ಧ್ವನಿ ಎಲ್ಲಿಯವರೆಗೆ ಕೇಳುತ್ತದೆಯೋ ಅಲ್ಲಿಯವರೆಗೆ ಭೂಮಿ ನಂಗೆ ನೀಡು ಎಂದು ಆದೇಶಿಸುವ ದೈವ…
ನಿಗೂಡ ಕಾಡು ಎಂಬ ಅರ್ಥವಿರುವ ಕಾಂತಾರ.. ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಪಂಜುರ್ಲಿ ದೈವದ ಶಕ್ತಿಯನ್ನು ವಿಶಿಷ್ಟವಾಗಿ ತೋರಿಸಿದ ಸಿನಿಮಾ ಕಾಂತಾರ.. ನಿಜಕ್ಕೂ ಗೆಲ್ಲಲೇಬೇಕಾದ ಚಿತ್ರ.. ಗೆದ್ದಿದೆ ಕೂಡ..
ಕನ್ನಡ ಸಿನಿಮಾ ರಂಗದಲ್ಲಿಯೇ ಕಾಂತಾರ ಹೊಸ ಇತಿಹಾಸ ಬರೆಯುತ್ತಾ ಸಾಗಿದೆ. ಪುರಾತನ ದಂತ ಕಥೆಯನ್ನೇ ಕಾಂತಾರ ಆಧುನಿಕ ಕಾಲದಲ್ಲಿ ವಿಜೖಂಭಿಸುವಂತೆ ಮಾಡುವ ಮೂಲಕ ಇತಿಹಾಸದಲ್ಲಿ ಕಾಂತಾರ ಎಂಬ ಸಿನಿಮಾವೇ ದಂತಕಥೆಯಾಗುವಂತೆ ಮಾಡಿದೆ.
ರಿಷಬ್ ಶೆಟ್ಟಿಗೆ ಕಾಂತಾರದಲ್ಲಿ ಎಲ್ಲಾ ರೀತಿಯಲ್ಲಿಯೂ ನಿರ್ಮಾಣ ಸಹಯೋಗ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು (ಹೊಂಬಾಳೆ ಕ್ರಿಯೇಷನ್ಸ್ ) ಅವರಿಗೂ ಕನ್ನಡ ಸಿನಿಮಾ ಪ್ರೇಮಿಗಳ ಪರವಾಗಿ ಧನ್ಯವಾದ ಸಲ್ಲುತ್ತದೆ. ಇಂಥ ವಿಭಿನ್ನ ಚಿತ್ರಗಳು ಮತ್ತಷ್ಟು ಹೆಚ್ಚಾಗಿ ಮೂಡಿಬರಲಿ.. ಕನ್ನಡ ಚಿತ್ರರಂಗದಲ್ಲಿ ಹೊಸ ಕಥೆಯ ಅಲೆ ಬೀಸಲಾರಂಭಿಸಿದೆ. ಈ ಅಲೆ ಮುಂದುವರೆಯಲಿ..
ಕನ್ನಡ ಸಿನಿಮಾ ಕಥೆಗಳು ಬದಲಾಗುತ್ತಿದೆ.. ಕನ್ನಡ ಪ್ರೇಕ್ಷಕರು ಸಿನಿಮಾ ನೋಡುವ ರೀತಿ ಕೂಡ ಬದಲಾಗುತ್ತಿದೆ. ಕಾಂತಾರ ಇದಕ್ಕೊಂದು ಉದಾಹರಣೆ.
ಕೊನೇ ಹನಿ.!!!
ದೈವ – ನಿನ್ನ ಭಕ್ತಿಗೆ ಮೆಚ್ಚಿದೆ ಭಕ್ತ.. ಏನು ವರ ಬೇಕೋ ಕೇಳು,,
ಭಕ್ತ – ದೈವವೇ.. ಬೇರೇನೂ ಬೇಡ .. ನಂಗೆ ತುರ್ತಾಗಿ ಕಾಂತಾರದ ಟಿಕೇಟ್ ಕೊಡಿಸು ಸಾಕು..
ದೈವ – ಇದು ಸದ್ಯಕ್ಕೆ ಕಷ್ಟದ ಕೆಲಸವೋ.. ವಿಪರೀತ ರಶ್ ಇದೆ.. ನೀನು ಸ್ವಲ್ಪ ದಿನ ಕಾಯಲೇಬೇಕು…
ದೈವ ತೆರೆಯಿಂದ ಮರೆಯಾಗುತ್ತಾನೆ.. ಟೈಟಲ್ ತೆರೆಯಲ್ಲಿ ಮೂಡಿಬರುತ್ತದೆ..
ಚಿತ್ರಕಥೆ.. ನಿದೇ೯ಶನ – ರಿಷಬ್ ಶೆಟ್ಟಿ.!!!!
(ಅನಿಲ್ ಎಚ್.ಟಿ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು. ಸಿನಿಮಾ ಹಾಗು ಕಲಾ ವಿಶ್ಲೇಷಕರು)