ಹೈದರಾಬಾದ್ : ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮ ಬುಧವಾರ ತನ್ನ ತಂಡದ ಪರವಾಗಿ 200ನೇ ಐಪಿಎಲ್ ಪಂದ್ಯವನ್ನು ಆಡಿದರು.
ರೋಹಿತ್ 2011ರಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದರು. ಅವರು ತನ್ನ 199ನೇ ಪಂದ್ಯದವರೆಗೆ 29.39ರ ಸರಾಸರಿಯಲ್ಲಿ 129.86ರ ಸ್ಟ್ರೈಕ್ ರೇಟ್ನಲ್ಲಿ 5,084 ರನ್ಗಳನ್ನು ಗಳಿಸಿದ್ದಾರೆ. ಅವರು ಈ ಅವಧಿಯಲ್ಲಿ,
ಮುಂಬೈ ಇಂಡಿಯನ್ಸ್ ಪರವಾಗಿ 195 ಇನಿಂಗ್ಸ್ಗಳಲ್ಲಿ ಒಂದು ಶತಕ ಮತ್ತು 34 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 109 ಅಜೇಯ.2013ರಲ್ಲಿ, ರಿಕಿ ಪಾಂಟಿಂಗ್ರಿಂದ ನಾಯಕತ್ವವನ್ನು ವಹಿಸಿಕೊಂಡ ಬಳಿಕ ಅವರು ತಂಡವನ್ನು ಅದರ ಸುವರ್ಣ ಯುಗದತ್ತ ಮುನ್ನಡೆಸಿದರು. ಅವರ ನಾಯಕತ್ವದಲ್ಲಿ 10 ವರ್ಷಗಳಲ್ಲಿ ತಂಡವು ಐದು ಬಾರಿ ಪ್ರಶಸ್ತಿ ಗಳಿಸಿದೆ (2013, 2015, 2017, 2019 ಮತ್ತು 2020) ಹಾಗೂ ಎರಡು ಬಾರಿ ಪ್ಲೇಆಫ್ ತಲುಪಿದೆ. ರೋಹಿತ್ರನ್ನು ಒಳಗೊಂಡ ಮುಂಬೈ ಇಂಡಿಯನ್ಸ್ 2011 ಮತ್ತು 2013ರಲ್ಲಿ, ಎರಡು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನೂ ಗೆದ್ದಿದೆ.
ಅವರು 2008ರಿಂದ 2010ರವರೆಗೆ ಹೈದರಾಬಾದ್ನ ಡೆಕ್ಕನ್ ಚಾರ್ಜರ್ಸ್ ತಂಡದ ಪರವಾಗಿಯೂ ಆಡಿದ್ದರು. 2009ರಲ್ಲಿ ಅವರ ತಂಡವು ಐಪಿಎಲ್ ಚಾಂಪಿಯನ್ ಆಗಿತ್ತು.