ನವದೆಹಲಿ:ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ‘ಭಾರತವು ವಿಶ್ವದಾದ್ಯಂತ ಅಭಿವೃದ್ಧಿ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ನ ಪ್ರಯತ್ನಗಳು ಹಣದುಬ್ಬರದಿಂದ
ಜನರನ್ನು ರಕ್ಷಿಸಿವೆ. ಬಡವರಿಗೆ ಭದ್ರತೆ ಒದಗಿಸಿವೆ’ ಎಂದು ಅವರು ಅಭಿಪ್ರಾಯಪಟ್ಟರು.ಜಾಗತಿಕ ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು ‘ಹವಾಮಾನ ಬದಲಾವಣೆಯಿಂದಾಗಿ ನಾವು ನಮ್ಮ ಮೂಲಕ್ಕೆ ತೆರಳಬೇಕಾದ ಅಗತ್ಯವನ್ನು ಈಗ ಅರಿತುಕೊಂಡಿದ್ದೇವೆ. ಅನೇಕ ಬುಡಕಟ್ಟು ಸಮುದಾಯಗಳು ನಿಸರ್ಗಕ್ಕೆ ಹತ್ತಿರವಾಗಿ ಮತ್ತು ಅದರೊಂದಿಗೆ ಸಾಮರಸ್ಯದಿಂದ ಬದುಕುತ್ತಿವೆ. ಅವರ ಮೌಲ್ಯಗಳು, ಜೀವನಶೈಲಿಯು ಹವಾಮಾನ ಪ್ರಕ್ರಿಯೆಗೆ ಅಮೂಲ್ಯವಾದ ಕೊಡುಗೆ ನೀಡಿವೆ. ಪ್ರತಿ ಹಂತದಲ್ಲೂ ಪರಿಸರ ಸಂರಕ್ಷಿಸುವ ಪ್ರಯತ್ನ ಮಾಡುವ ಅಗತ್ಯವಿದೆ’ ಎಂದು ತಮ್ಮ ಸಂದೇಶದಲ್ಲಿ ವಿವರಿಸಿದ್ದಾರೆ.
ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ವ್ಯಾಖ್ಯಾನಿಸಿರುವ ಅವರು, ‘ರಾಷ್ಟ್ರ ನಿರ್ಮಾತೃಗಳ ಕನಸುಗಳನ್ನು ನನಸಾಗಿಸಲು ನಾವು ಸೌಹಾರ್ದತೆ ಮತ್ತು ಸಹೋದರತ್ವದ ಮನೋಭಾವದಿಂದ ಮುನ್ನಡಬೇಕು’ ಎಂದು ಸಲಹೆ ನೀಡಿದರು.