ತಿರುವನಂತಪುರಂ: ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯುಡಿಎಫ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗೆಲುವಿನ ನಗೆ ಬೀರಿದ್ದಾರೆ. ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯುಡಿಎಫ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ 3.82 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಕಳೆದ ಬಾರಿಯ
ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಪ್ರಿಯಾಂಕಾ ಸಹೋದರ ರಾಹುಲ್ ಪಡೆದಿದ್ದ ಮತಗಳಿಗಿಂತಲೂ ಪ್ರಿಯಾಂಕಾ ಹೆಚ್ಚಿನ ಮತಗಳಿಂದ ಚುನಾಯಿತರಾಗಿದ್ದಾರೆ.
ಪ್ರಿಯಾಂಕಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಲ್ಡಿಎಫ್ನ ಸತ್ಯನ್ ಮೊಕೇರಿ ಅವರನ್ನು ಸೋಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಅವರು 1 ಲಕ್ಷ ಮತಗಳನ್ನು ಪಡೆದಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಈ ಕ್ಷೇತ್ರದಿಂದ 3.64 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಆದರೆ ರಾಯಬರೇಲಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅವರು, ಅಂತಿಮವಾಗಿ ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿ ರಾಜೀನಾಮೆ ನೀಡಿದ್ದರು. ರಾಹುಲ್ ಸಹೋದರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರನ್ನು ವಯನಾಡ್ನಿಂದ ಕಣಕ್ಕಿಳಿಸಲಾಗಿತ್ತು. ಈ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.
ಕೇರಳದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಮಾಂಕೂಟತ್ತಿಲ್ ಗೆಲುವು ಕಂಡಿದ್ದಾರೆ.
ಚೇಲಕ್ಕರ ಕ್ಷೇತ್ರದಲ್ಲಿ ಎಲ್ಡಿಎಫ್ನ ಯು.ಆರ್. ಪ್ರದೀಪ್ ಗೆಲುವು ಸಾಧಿಸಿದ್ದಾರೆ.