*ಎಂ.ನಾ.ಚಂಬಲ್ತಿಮಾರ್.
ಮತ್ತೊಮ್ಮೆ ಕರ್ಕಾಟಕವೆಂಬ ಆಟಿ ಮಾಸ ಬಂದಿದೆ. ಹಗಲನ್ನೇ ರಾತ್ರಿಯಾಗಿಸಿದಂತೆ ಕಾರ್ಮೋಡ ಕಪ್ಪಿಟ್ಟು ಧೋ….ಎಂದು ಹನಿಕಡಿಯದ ಮಳೆ ಸುರಿಯುತ್ತಿದೆ. ಆಟಿ ಶುರುವಾಗುವಾಗಲೇ ಇಂಥ ಮಳೆ ಸದ್ಯದ ವರ್ಷದಲ್ಲೇ ಬಂದಿರಲಿಲ್ಲ.ಹಗಲಲ್ಲೂ ಬಿಸಿಲಿಣುಕದೇ ರಾತ್ರಿಯ ಹಿತಾನುಭವ ಸಿಗುವ “ಬೆಚ್ಚನೆ”ಯನ್ನು ಬಯಸುವ ದಿನಗಳಿವು… ಇಂಥ ಆಟಿ ಎಂಬ ಕರ್ಕಾಟಕ ತಿಂಗಳು ಪಕ್ಕದ ಕೇರಳದ ಪಾಲಿಗೆ ರಾಮಾಯಣ ಮಾಸ. ಆಟಿ ಆರಂಭದಿಂದ
ಅಂತ್ಯದ ವರೆಗೆ ಭರ್ತಿ ಒಂದು ತಿಂಗಳು ರಾಮಾಯಣ ಮಹಾಕಾವ್ಯದ ಕಾವ್ಯಾಲಾಪದ ಆರಾಧನೆ ಕೇರಳದ ಹಿಂದೂ ಮನೆಗಳಲ್ಲಿ ಅನಾದಿಕಾಲದಿಂದಲೂ ಸಂಪ್ರದಾಯಬದ್ಧವಾಗಿ ಕೈದಾಟಿದೆ.ಇಡೀ ದೇಶದಲ್ಲೇ ಒಂದಿಡೀ ರಾಜ್ಯ ಒಂದು ತಿಂಗಳ ಪರ್ಯಂತ ರಾಮಾಯಣ ಕಾವ್ಯಾಲಾಪನೆ, ಆರಾಧನೆ ಮಾಡುವುದಿದ್ದರೆ ಅದು ಕೇರಳದಲ್ಲಿ ಮಾತ್ರ!!
ಆದ್ದರಿಂದಲೇ ” ಕರ್ಕಡಕಂ” ಎಂಬ ಆಟಿ ಮಾಸ ಕೇರಳೀಯ ಹಿಂದೂ ಸಂಪ್ರದಾಯ ನಿಷ್ಠರಿಗೆ ಪವಿತ್ರ ಮಾಸ, ಪರ್ವ ಮಾಸ.
ಈ ಬಾರಿ ಕೇರಳದಲ್ಲಿ ಇಂದು ರಾಮಾಯಣ ಮಾಸಾಚರಣೆಗೆ ನಾಂದಿಯಾಗಿದೆ.ಆಗಸ್ಟ್ 16ರ ತನಕ ಇನ್ನೊಂದು ತಿಂಗಳಿಡೀ ಮನೆ,ಮನೆಯಿಂದ ತುಂಜತ್ತೆಳುತ್ತಚ್ಚನ್ ಭಾಷಾಂತರಿಸಿದ ಆಧ್ಯಾತ್ಮ ರಾಮಾಯಣದ ಮಲಯಾಳಂ ಕಾವ್ಯಮೊಳಗಲಿದೆ. ಹೀಗೆ ರಾಮನಾಮ ಜಪದೊಂದಿಗೆ ಕಾವ್ಯವನ್ನೇ ಆರಾಧಿಸುವ ಇಂಥ ಮಾಸಾಚರಣೆಯ ಸಂಪ್ರದಾಯ ದೇಶದಲ್ಲೇ ಮತ್ತೆಲ್ಲೂ ಇಲ್ಲ!
ಈಗ ಹಿರಿಯರಿರುವ ಮನೆಗಳಲ್ಲಷ್ಟೇ ಈ ಅನುಷ್ಠಾನ ನಡೆಯುತ್ತದೆ.ಆದ್ದರಿಂದ ದೇವಾಲಯ, ಮಂದಿರಗಳಲ್ಲಿ ಸಾಮೂಹಿಕವಾಗಿ ಕಾವ್ಯಾಲಾಪಿಸುವ ಸಂಪ್ರದಾಯವೂ ಬಂದಿದೆ. ಅನೇಕ ವರ್ಷಗಳಿಂದ ಪ್ರತಿಯೊಂದು ಟಿ.ವಿ ಚಾನೆಲ್ ನವರೂ ಕೂಡಾ ಗಾಯಕರಿಂದ ರಾಮಾಯಣ ಹಾಡಿಸಿ ದೈನಂದಿನ ಮುಂಜಾನೆ, ಮುಸ್ಸಂಜೆ ಪ್ರಸಾರ ಮಾಡುತ್ತವೆ.
ಈ ತಿಂಗಳಲ್ಲಿ ಯಾವುದೇ ಮದುವೆ, ಗೃಹಪ್ರವೇಶಾದಿ ಮಂಗಳಕಾರ್ಯಗಳನ್ನು ಜನರು ಅಪ್ಪಿತಪ್ಪಿಯೂ ನಡೆಸುವುದೇ ಇಲ್ಲ, ಅದು ನಿಷಿದ್ಧವೆಂದೇ ನಂಬಿಕೆ. ಈ ತಿಂಗಳನ್ನು ಆಧ್ಯಾತ್ಮ ರಾಮಾಯಣ ನಾಮಜಪದೊಂದಿಗೆ ಕಳೆದು ಸನ್ಮಂಗಳ ಪಡೆಯಬೇಕೆಂಬ ಪೂರ್ವಿಕರ ಸಂದೇಶ ಈಗಲೂ ಕೇರಳದಲ್ಲಿ ಕೈದಾಟಿ ಬಂದಿದೆ ಎಂಬುದೇ ವೈಶಿಷ್ಯ.
ಹೀಗೆ ಮನೆಯಲ್ಲಿ ರಾಮಾಯಣ ಕಾವ್ಯಾಲಾಪನೆಯ ಅನುಷ್ಠಾನ ಮಾಡುವವರು ಈ ತಿಂಗಳನ್ನಿಡೀ ಮಧು, ಮಾಂಸಾಹಾರಗಳೆಲ್ಲ ತ್ಯಜಿಸಿ ವ್ರತಾನಿಷ್ಠರಾಗಬೇಕೆಂಬುದು ಸನಾತನ ಸಂಪ್ರದಾಯ.
ನಾಲಂಬಲ ದರ್ಶನಂ:
ರಾಮಾಯಣ ಮಾಸಾಚರಣೆಯ ಕರ್ಕಾಟಕ ಮಾಸದಲ್ಲಿ “ನಾಲಂಬಲಂ” ದರ್ಶನ ಮಾಡಬೇಕೆನ್ನುವುದು ರೂಢಿ. ಈಗ ಇದಕ್ಕೆ ಮಾಧ್ಯಮ ಪ್ರಚಾರ ಏರುತ್ತಿದೆ. ನಾಲಂಬಲಂ ದರ್ಶನ ಎನ್ನುವುದೊಂದು ಆಟಿಯ ಧಾರ್ಮಿಕ ಪ್ರವಾಸವಾಗಿ ಬದಲಾಗಿದೆ.
ನಾಲಂಬಲಂ ಎಂದರೆ ನಾಲ್ಕು ದೇವಾಲಯ ಎಂದರ್ಥ. ಇದು ಕೋಟಯಂ-ತ್ರಿಶ್ಶೂರು ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಶ್ರೀರಾಮ,ಲಕ್ಷ್ಮಣ, ಭರತ, ಶತ್ರುಘ್ನರ ದೇವಾಲಯಗಳು ಇದಾಗಿದ್ದು, ಇಲ್ಲಿನ ದರ್ಶನ ಆಟಿಯಲ್ಲಿ ಪಡೆಯಬೇಕೆಂಬ ಬಯಕೆಯೂ ಯುವಜನರಲ್ಲಿ ಹೆಚ್ಚುತ್ತಿದೆ.
ಕರ್ಕಾಟಕ ಚಿಕಿತ್ಸೆಯ ಆಯುರ್ವೇದ ಹಬ್:
ಕರ್ಕಾಟಕವೆಂಬ ಆಟಿ ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಗಳಿಗೆ ಪ್ರಸಿದ್ದ. ಕೇರಳದಲ್ಲಿ ನೂರಾರು ಚಿಕಿತ್ಸಾ ಕೇಂದ್ರಗಳಿದ್ದು, ವಿದೇಶ ಸಹಿತ ಇಡಿ ದೇಶದಿಂದ ಗಣ್ಯರು, ಉದ್ಯಮಿಗಳು, ಸೆಲೆಬ್ರಿಟಿಗಳು ಮಸಾಜ್ ಸಹಿತ ಆಯುರ್ವೇದ ಚಿಕಿತ್ಸೆಗೆ ಈ ಸಂದರ್ಭ ಬರುತ್ತಾರೆ. ಜತೆಗೆ ಆಯುರ್ವೇದ ಸಂಪ್ರದಾಯದ ಗಂಜಿ ಸಹಿತ ತಿನಿಸುಗಳೂ ವ್ಯಾಪಕ ಮಾರಾಟವಾಗುತ್ತಿದ್ದು “ಆಟಿ” ಎಂಬ ತಿಂಗಳೊಂದು ಧಾರ್ಮಿಕತೆಯ ನಡುವೆ ಆರೋಗ್ಯ, ಆಹಾರದ ವಾಣಿಜ್ಯ ಉತ್ಸವವಾಗಿಯೂ ಕೇರಳದಲ್ಲಿ ಮಾರ್ಪಾಡುಗೊಂಡಿದೆ.
ಮಳೆಗಾಲದ ಋತುವೊಂದು ಧಾರ್ಮಿಕ, ಸಾಂಸ್ಕೃತಿಕವಾಗಿ ವಾಣಿಜ್ಯತೆಯ ಮುಖಪಡೆದರೂ ತನ್ಮೂಲಕ ಸನಾತನ ಸಂಸ್ಕೃತಿ ಸಹಿತ ಆಚಾರವೊಂದು ಪೀಳಿಗೆಯಿಂದ ಪೀಳಿಗೆಗೆ ಕೈದಾಟಲ್ಪಡುತ್ತಿದೆ.
ಎಂ. ನಾ. ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು. ಕಲೆ,ಸಂಸ್ಕೃತಿ,ಸಾಹಿತ್ಯ ವಿಶ್ಲೇಷಕರು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕರು.