ಸುಳ್ಯ:ಈ ಬಾರಿಯ ಮಳೆಗಾಲ ಸುಳ್ಯ ತಾಲೂಕಿನ ನಗರ ಹಾಗು ಗ್ರಾಮೀಣ ಭಾಗದ ಜನರನ್ನು ಕತ್ತಲಿಗೆ ತಳ್ಳಿದೆ. ತಾಲೂಕಿನ ವಿದ್ಯುತ್ ಸಮಸ್ಯೆ ಇಂದೂ ಮುಂದುವರಿದಿದೆ. ಮರ ಬಿದ್ದು ಇಂದು ಕೂಡ ದಿನ ಪೂರ್ತಿ ವಿದ್ಯುತ್ ಕಡಿತವಾಗಿದೆ. ಕನಕಮಜಲು ಸಮೀಪ ಪಂಜಿಗುಂಡಿ ಎಂಬಲ್ಲಿ ಮರ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮೆಸ್ಕಾಂ ಕಾರ್ಯಾಚರಣೆ
ನಡೆಸಿ ಮರ ತೆರವು ಮಾಡಿ ಸಂಜೆಯ ವೇಳೆಗೆ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿದ್ದರೂ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದೆ. ರಾತ್ರಿಯ ತನಕವೂ ವಿದ್ಯುತ್ ಕಣ್ಣಾ ಮುಚ್ಚಾಲೆ ಮುಂದುವರಿದಿದೆ. ಸುಳ್ಯ ನಗರದಲ್ಲಿ ಕಳೆದ ಹಲವು ದಿನಗಳಿಂದ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತಿದೆ. ಮಳೆಗಾಲ ತೀವ್ರಗೊಂಡ ಬಳಿಕ ಕಳೆದ ಎರಡು ವಾರದಿಂದ ವಿದ್ಯುತ್ ಸಮರ್ಪಕವಾಗಿಲ್ಲದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಬೆಳಗ್ಗಿನ ಜಾವ ಮೂರು ಗಂಟೆಯ ವೇಳೆಗೆ ಮರ ಬಿದ್ದು ಕಡಿತವಾಗಿ ಸಂಜೆಯ ತನಕ ಸುಳ್ಯ ಭಾಗಕ್ಕೆ ವಿದ್ಯುತ್ ಸರಬರಾಜು ಇರಲಿಲ್ಲ. ಈ ಮಧ್ಯೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಲವು ದಿನಗಳಿಂದ ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲದೆ ಕತ್ತಲು ಆವರಿಸಿದೆ. ಮರ ಬಿದ್ದು, ಕಂಬ, ತಂತಿಗಳು ಹಾನಿಗೀಡಾಗಿ ನಿರಂತರ 3-4 ದಿನಗಳ ಕಾಲ ವಿದ್ಯುತ್ ಕಡಿತವಾಗಿದೆ ಎಂದು ಜನರು ಹೇಳುತ್ತಾರೆ.
10 ದಿನದಲ್ಲಿ 218 ಕಂಬ ನಾಶ:
ಸುಳ್ಯ ಮೆಸ್ಕಾಂ ವ್ಯಾಪ್ತಿಯಲ್ಲಿ ಮರ ಬಿದ್ದು, ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಕಳೆದ 10 ದಿನದಲ್ಲಿ 218 ವಿದ್ಯುತ್ ಕಂಬ ಹಾನಿಯಾಗಿದೆ. ಜುಲೈ 8ರಿಂದ 18ರ ತನಕ 10 ದಿನದಲ್ಲಿ 218 ಕಂಬಗಳಿಗೆ ಮತ್ತು 3 ಟ್ರಾನ್ಸ್ಫಾರ್ಮರ್ಗೆ ಹಾನಿಯಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.